Advertisement

ಇಂದು ರಾಜ್ಯಮಟ್ಟದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ

09:40 PM Nov 17, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಸಕಲ ಸಿದ್ಧತೆ ಪೂರ್ಣಗೊಂಡಿದೆ.

Advertisement

ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನ.18ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ರಾಜ್ಯಮಟ್ಟದ 66ನೇ ಅಖೀಲ ಭಾರತ ಸಹಕಾರ ಸಪ್ತಾಹವನ್ನು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಕಾರಿ ಧ್ವಜಾರೋಹಣ ಮಾಡಲಿದ್ದಾರೆ.

ಬೃಹತ್‌ ಮೆರವಣಿಗೆ
ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಜೋಡುಕಟ್ಟೆಯಿಂದ ಬೆಳಗ್ಗೆ 9 ಗಂಟೆಗೆ ಬೃಹತ್‌ ಮೆರವಣಿಗೆ ಹೊರಡಲಿದ್ದು, ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಚಾಲನೆ ನೀಡಲಿದ್ದಾರೆ. 3 ಸಾವಿರಕ್ಕೂ ಅಧಿಕ ಸಹಕಾರಿಗಳು, ನವೋದಯ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಮಾಹಿತಿ ಹಾಗೂ ವಿವಿಧ ವಿಚಾರಗಳಿಗೆ ಸಂಬಂಧಿಸಿದ 15 ಟ್ಯಾಬ್ಲೋಗಳು ಇರಲಿದೆ. ಸಹಕಾರಿ ರಥ, ಯಕ್ಷಗಾನ, ಹುಲಿವೇಷ, ಕರಗ, ಕೀಲು ಕುದುರೆ, ಮುಖವಾಡ, ನಾಸಿಕ್‌ ಬ್ಯಾಂಡ್‌, ನಾದ ಸ್ವರದ ಜತೆಗೆ ಬಡಗುಬೆಟ್ಟು ಕೋ-ಆಪರೇಟಿವ್‌ ಸೊಸೈಟಿಯ 70 ಸಿಬಂದಿಗಳ ಜಾಗಟೆ ಧ್ವನಿ ಹಾಗೂ ಸುಮಾರು 200 ಪೂರ್ಣ ಕುಂಭ ಕಲಶದೊಂದಿಗೆ ಅತಿಥಿಗಳನ್ನು ರಥದ ಮೂಲಕ ಸಭಾಭವನವರೆಗೆ ಕರೆ ತರಲಿದ್ದಾರೆ.

ದಿನದ ವಿಶೇಷತೆ
ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್‌. ಎಸ್‌. ನಾಗರಾಜಯ್ಯ ಸಹಕಾರ ಸಂಸ್ಥೆಗಳ ಮೂಲಕ ಸರಕಾರದ ಹೊಸಯೋಜನೆಗಳು ಎನ್ನುವ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಕೇಂದ್ರ ಸರಕಾರ ಆದಾಯ ತೆರಿಗೆ ಹೆಸರಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ವಿಧಿಸಿದ ನಿಯಮಾವಳಿ ಸರಳೀಕರಣ ಪ್ರಸ್ತಾಪನೆ, ಸಹಕಾರಿಗಳಿಗೆ ಇಲಾಖೆಯ ಅಧಿಕಾರಿಗಳಿಂದಾಗುವ ಸಮಸ್ಯೆಗಳ ಕುರಿತು ಸಮಸ್ತ ಸಹಕಾರಿಗಳ ಪರವಾಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಿದ್ದಾರೆ. ಸುಮಾರು 12 ಉತ್ತಮ ಸಹಕಾರ ಸಂಘಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Advertisement

ಉಡುಪಿ ಸಹಕಾರಿಗಳಿಗೆ
ರಜೆ ಘೋಷಣೆ
ಉಡುಪಿ ನಗರದ ಮಾರ್ಗದ ತುಂಬ ಸಹಕಾರಿ ಬಾವುಟಗಳನ್ನು ಆಳವಡಿಸಲಾಗಿದೆ. ಸಚಿವರು ಹಾಗೂ ಅತಿಥಿಗಳಿಗೆ ಶುಭಕೋರುವ ಫ್ಲೆಕ್ಸ್‌ ಆಳವಡಿಸಲಾಗಿದೆ. ಇಲಾಖೆಯ ಅನುಮತಿಯೊಂದಿಗೆ ಉಡುಪಿ ಜಿಲ್ಲೆಯ ಎಲ್ಲ ಸಹಕಾರಿ ಸಂಸ್ಥೆಗಳು ತಮ್ಮ ಸೊಸೈಟಿಗೆ ರಜೆ ಘೋಷಿಸಿದೆ.

8,000 ಆಸನ – 15 ಮಳಿಗೆ
ಸಭಾ ಕಾರ್ಯಕ್ರಮದ ವೇದಿಕೆಯನ್ನು ಅಮ್ಮಣಿ ರಾಮಣ್ಣ ಸಭಾಂಗಣದ ಹೊರ ಭಾಗದಲ್ಲಿ ಹಾಕಲಾಗಿದೆ. ಸುಮಾರು 8,000 ಆಸನಗಳ ಇಡಲಾಗಿದೆ. ಮೂರು ಕಡೆಯಲ್ಲಿ ಎಲ್‌ಸಿಡಿ ಟಿವಿ ಆಳವಡಿಸಲಾಗಿದೆ. ಸಹಕಾರಿ ಸಂಸ್ಥೆ ಸೌಲಭ್ಯ ಸಹಾಯ ಪಡೆದು ಸ್ವಾವಲಂಬಿ ಬದುಕು ಸಾಗಿಸುತ್ತಿರುವವರ ಉತ್ಪನ್ನ, ಕರಕುಶಲ ವಸ್ತು, ಕೃಷಿ ಸಂಬಂಧಿತ ಅಧುನಿಕ ಉಪಕರಣಗಳ ಮಾರಾಟ ಮಳಿಗೆ ಹಾಗೂ ಸಹಕಾರಿ ಸಂಸ್ಥೆಗಳು ನೀಡುವ ವಿವಿಧ ಸೌಲಭ್ಯಗಳ ಮಳಿಗೆ ಸೇರಿದಂತೆ ಒಟ್ಟು 15ಮಳಿಗೆಗಳು ಇರಲಿದೆ.

6,000 ಮಂದಿ
ಭಾಗವಹಿಸುವ ನಿರೀಕ್ಷೆ
ರಾಜ್ಯಮಟ್ಟದ ಸಹಕಾರ ಸಪ್ತಾಹದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಗಳ 1435 ಸಹಕಾರಿ ಸಂಘಗಳ ಅಧಿಕಾರಿಗಳು, ನಿರ್ದೇಶಕರು, ಸಿಬಂದಿಗಳು ಹಾಗೂ ನವೋದಯ ಸ್ವ ಸಹಾಯ ಸಂಘದ ಸದಸ್ಯರು ಸೇರಿದಂತೆ ಒಟ್ಟು 6,000 ಮಂದಿ ಭಾಗವಹಿಸಲಿದ್ದಾರೆ. ಸುಮಾರು 8,000 ಜನರಿಗೆ ಅಗತ್ಯವಿರುವ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಮಜ್ಜಿಗೆ ತಂಪು ಪಾನೀಯ ವ್ಯವಸ್ಥೆ ಕಲ್ಪಿಸಲಾಗಿದೆ.

ಉಡುಪಿಯಲ್ಲಿ ಮೊದಲ ಬಾರಿ
ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಅಖೀಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಹಕಾರಿಗಳು ಸಮಸ್ಯೆ, ಅಭಿವೃದ್ಧಿ, ಹಿನ್ನೆಡೆ ಸೇರಿದಂತೆ ವಿವಿಧ ವಿಚಾರದ ಕುರಿತು ಚಿಂತನ ಮಂಥನ ನಡೆಸಲಾಗುತ್ತದೆ.
-ಬಿ. ಜಯಕರ ಶೆಟ್ಟಿ ಇಂದ್ರಾಳಿ,
ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next