Advertisement

ಇನ್ನೂ ಪೂರ್ಣ ಅನುಷ್ಠಾನವಾಗದ ಯುವನೀತಿ

12:11 AM Jan 12, 2020 | mahesh |

ಕುಂದಾಪುರ: ರಾಜ್ಯದಲ್ಲಿ ಯುವನೀತಿ ಕರಡು ಬಿಡುಗಡೆ ಮಾಡಿ 8ನೇ ವರ್ಷ. ಆದರೆ ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಯುವ ಬಜೆಟ್‌ ಮಂಡನೆ ಮಾಡಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಯುವಕ ಯುವತಿ ಮಂಡಲಗಳ ಉತ್ತೇಜನಕ್ಕೆ ನೀಡುವ ಅನುದಾನದಲ್ಲೂ ಹೆಚ್ಚಳವಾಗಿಲ್ಲ.

Advertisement

ರಚನೆ
ರಾಜ್ಯದಲ್ಲಿ ಈಗ ಸುಮಾರು 2 ಕೋಟಿ ಯುವಜನತೆಯಿದ್ದು ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಮಂತ್ರಾಲಯದ ನಿರೀಕ್ಷೆ ಹಾಗೂ ಮಾದರಿಯ ರೀತಿಯಲ್ಲಿಯೇ ರಾಜ್ಯ ಸರಕಾರವು ಯುವನೀತಿ ಸಂರಚನೆ ಮಾಡಲು ಕಾರ್ಯೋನ್ಮುಖ ವಾಯಿತು. 2012 ಆ. 9ರಂದು ಸಮಗ್ರ ಯುವನೀತಿಯ ಕರಡನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಕಾಮನ್‌ವೆಲ್ತ್‌ ಯೂತ್‌ಫೋರಂ, ಯುರೋಪಿಯನ್‌ ಯುವನೀತಿ, ಅಂತಾರಾಷ್ಟ್ರಿ†àಯ ಸಂಸ್ಥೆಗಳ ರಾಷ್ಟ್ರೀಯ ಯುವನೀತಿ, ಭಾರತದ ಇತರ ರಾಜ್ಯಗಳ ಯುವನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ರಾಜ್ಯದ ಕರಡು ಸಿದ್ಧ ಮಾಡಲಾಗಿತ್ತು. ಯುವಜನತೆಗೆ ಪ್ರತ್ಯೇಕ ಬಜೆಟ್‌ ಮಂಡನೆ ಕೂಡ ಇದರಲ್ಲಿನ ಬೇಡಿಕೆಗಳ ಪಟ್ಟಿಯಲ್ಲಿ ಒಂದು. ಡಿ.ವಿ. ಸದಾನಂದ ಗೌಡರ ಸರಕಾರ 25 ಕೋ.ರೂ. ವೆಚ್ಚ ಬಜೆಟ್‌ನಲ್ಲಿ ಯುವನೀತಿಗಾಗಿ ಮೀಸಲಿಟ್ಟು ಕರಡು ನೀತಿ ಜಾರಿಗೆ ತಂದರೆ ಸಿದ್ದರಾಮಯ್ಯ ಸರಕಾರ ಯುವನೀತಿ ರಚನೆಗೆ ಅಶ್ವಿ‌ನಿ ನಾಚಪ್ಪ, ಅರ್ಜುನ್‌ ದೇವಯ್ಯ ಮೊದಲಾದವರಿದ್ದ ಸಮಿತಿ ರಚಿಸಿತ್ತು. ಯುವನೀತಿ ಬಿಡುಗಡೆ ಭಾಗ್ಯ ಕಂಡಿದ್ದರೂ ಅದರಲ್ಲಿನ ಅಂಶಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಭಾಗ್ಯ ಕಂಡಿಲ್ಲ. ಯುವನೀತಿಯಡಿ ಯುವಸಶಕ್ತೀಕರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು 17.8 ಕೋ.ರೂ.ಗಳನ್ನು ಬಿಡುಗಡೆ ಮಾಡಿದ್ದರು.

ನೆಹರು ಯುವಕೇಂದ್ರ
ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಅಧೀನದಲ್ಲಿ ನೆಹರು ಯುವ ಕೇಂದ್ರ ಕಾರ್ಯಾಚರಿಸುತ್ತಿದೆ. 1972ರಲ್ಲಿ ಜಿಲ್ಲಾ ಸ್ತರಗಳಲ್ಲಿ ಆರಂಭವಾದ ಕೇಂದ್ರಗಳ ಮೂಲಕ ಯುವಕ ಯುವತಿ ಮಂಡಲಗಳ ಚಟುವಟಿಕೆಗೆ ನೆಹರು ಯುವ ಕೇಂದ್ರ ಸಂಘಟನೆ ಎಂದು ಸ್ವಾಯತ್ತ ಸಂಘಟನೆಯಾಗಿ 1987ರಲ್ಲಿ ರೂಪುಗೊಳಿಸಲಾಯಿತು. ಸರಕಾರ ಅನ್ಯಾನ್ಯ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತದೆ. ಕೇಂದ್ರ ಸರಕಾರ ಪ್ರತಿ ಜಿಲ್ಲೆಗೆ ವಾರ್ಷಿಕ ಸುಮಾರು 7ರಿಂದ 8 ಲಕ್ಷ ರೂ. ಅನುದಾನ ನೀಡುತ್ತದೆ. ಉದ್ಯೋಗ ಮಾರ್ಗದರ್ಶನ, ಉದ್ಯೋಗ ತರಬೇತಿ, ಜೀವನ ಕೌಶಲ ತರಬೇತಿ, ವೃತ್ತಿ ಕೌಶಲ ಅಭಿವೃದ್ಧಿ ತರಬೇತಿ, ಜಾಗೃತಿ ಕಾರ್ಯಕ್ರಮಗಳು, ನಾಯಕತ್ವ ತರಬೇತಿ, ಗ್ರಾಮೀಣ ಕ್ರೀಡಾ ಚಟುವಟಿಕೆ, ವ್ಯಕ್ತಿತ್ವ ವಿಕಸನ ಅರಿವು ಮೂಡಿಸುವ ಕಾರ್ಯಕ್ರಮಗಳು, ಪ್ರೇರಣಾ ಕಾರ್ಯಕ್ರಮಗಳನ್ನು, ರಾಜ್ಯ ಹಾಗೂ ಕೇಂದ್ರ ಸರಕಾರದ ಅನೇಕ ಯೋಜನೆಗಳ ಕುರಿತು ಮಾಹಿತಿ ನೀಡುವ ಕೆಲಸವನ್ನು ಯುವ ಸಂಘಟನೆಗಳ ಮೂಲಕ ದೇಶದ 623 ಜಿಲ್ಲೆಗಳಲ್ಲಿ ಈ ಅನುದಾನದಲ್ಲಿ ಮಾಡಿಸಲಾಗುತ್ತದೆ.

ಅನುದಾನ ಸಾಲದು
ಜಿಲ್ಲೆಯಲ್ಲಿ 275ರಷ್ಟು ಯುವಕ ಯುವತಿ ಮಂಡಲಗಳಿವೆ. ಶಿಕ್ಷಣದಿಂದ ಹೊರಬಂದ ಅನಂತರ ಯುವಜನತೆ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅವುಗಳ ಮೂಲಕ ಜನರಿಗೆ ಮಾಹಿತಿ ನೀಡುವುದು ಈ ಯೋಜನೆಯ ಉದ್ದೇಶ. ಆದರೆ ಇಷ್ಟು ಯುವಸಂಘಟನೆಗಳಿಗೆ ಹೋಲಿಸಿದಾಗ ಬರುತ್ತಿರುವ ಅನುದಾನ ಏನೇನೂ ಸಾಲದು. ಕುಂದಾಪುರ ತಾಲೂಕಿನಲ್ಲಿ 150ರಷ್ಟು ಇದ್ದ ಯುವಸಂಘಟನೆಗಳ ಸಂಖ್ಯೆ ಈಗ 43ಕ್ಕೆ ಇಳಿದಿದೆ. ಆದ್ದರಿಂದ ಯುವಸಂಘಟನೆಗಳ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನುದಾನ ಹೆಚ್ಚಿಸಬೇಕಿದೆ. ಮಾರ್ಗದರ್ಶನ ಇಲ್ಲದೇ ಮರುನೋಂದಣಿ ಕೂಡಾ ಮಾಡುತ್ತಿಲ್ಲ. ಇಲಾಖೆಗೆ ಪೂರ್ಣಪ್ರಮಾಣದ ಅಧಿಕಾರಿ ಕೂಡಾ ಅನೇಕ ವರ್ಷಗಳಿಂದ ಇಲ್ಲ.

ಸಕ್ರಿಯರಾಗುತ್ತಿದ್ದಾರೆ
ಕಳೆದ ಮೂರು ವರ್ಷಗಳಲ್ಲಿ ಹೆಚ್ಚುವರಿಯಾಗಿ ಸುಮಾರು 25 ಯುವ ಸಂಘಟನೆಗಳು ಸಕ್ರಿಯವಾಗಿವೆ. ಕೇಂದ್ರ ಸರಕಾರದ ಯುವಜನ ಇಲಾಖೆ ಮಾರ್ಗಸೂಚಿ ಬಂದಂತೆ ಆನುದಾನವನ್ನು ವ್ಯಯಿಸಲಾಗುತ್ತದೆ. ಅನುದಾನ ಹೆಚ್ಚಳ ಕುರಿತು ಸರಕಾರ ತೀರ್ಮಾನ ಕೈಗೊಳ್ಳಬೇಕು.
– ವಿಲ್ಫ್ರೆಡ್‌ ಡಿ’ಸೋಜಾ,
ಜಿಲ್ಲಾ ಯುವಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಉಡುಪಿ

Advertisement

ಬಲಿಷ್ಠಗೊಳ್ಳಲಿ
ಜಿಲ್ಲೆಯ ಯುವಜನರು ಮುಗ್ಧರು. ಗ್ರಾಮೀಣ ಪ್ರದೇಶದ ಇಂತಹ ಜನರಿಗಾಗಿ ಮಾಹಿತಿ ಕೊರತೆ ಉಂಟಾಗದಂತೆ ಯುವಕ ಯುವತಿ ಮಂಡಲಗಳ ಪುನಾರಚನೆ ಮೂಲಕ ಯುವಸಂಘಟನೆ ಬಲಿಷ್ಠಗೊಳ್ಳಬೇಕು.
-ನರಸಿಂಹ ಗಾಣಿಗ ಹರೆಗೋಡು, ಪ್ರವರ್ತಕರು, ಯುವಕೇಂದ್ರ

ಮಾರ್ಗದರ್ಶನ, ಅನುದಾನ ಅಗತ್ಯ
ಹಿಂದೆಲ್ಲ ನೆಹರು ಯುವಕೇಂದ್ರದವರು ಕ್ಯಾಂಪ್‌ ಮಾಡುತ್ತಿದ್ದರು. ಆಗ ಕುಂದಾಪುರ ತಾಲೂಕಿನಲ್ಲಿ 70 ಸಕ್ರಿಯ ಸಂಘಟನೆಗಳಿದ್ದವು. ಮಾರ್ಗದರ್ಶನ, ಒಕ್ಕೂಟ ರಚನೆ ಬಳಿಕ 150 ಆಯಿತು. ಅನಂತರದ ದಿನಗಳಲ್ಲಿ ನೆಹರು ಯುವ ಕೇಂದ್ರ ಹಾಗೂ ಯುವಜನ ಸೇವಾ ಇಲಾಖೆಯ ಅನುದಾನ ಕಡಿಮೆಯಾಗಿ ಈಗ ಬಹುತೇಕವುಗಳ ಚಟುವಟಿಕೆಗಳು ಕಡಿಮೆಯಾಗಿವೆ. ಯುವ ಸಂಘಟನೆಗಳ ಕ್ರಿಯಾಶೀಲತೆಗೆ ಕೇಂದ್ರ, ರಾಜ್ಯ ಸರಕಾರದ ಮಾರ್ಗದರ್ಶನ, ಅನುದಾನ ಅಗತ್ಯ.
-ಭಾಸ್ಕರ ಗಂಗೊಳ್ಳಿ
ಡಾ| ಬಿ. ಆರ್‌. ಅಂಬೇಡ್ಕರ್‌ ಯುವಕ ಮಂಡಲ ಸ್ಥಾಪಕಾಧ್ಯಕ್ಷ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next