Advertisement

ಮಾಲಿನ್ಯ ತಡೆ ನಮ್ಮಿಂದಲೇ ಆರಂಭಗೊಳ್ಳಲಿ

11:34 PM Dec 01, 2021 | Team Udayavani |

ದಿನ ಕಳೆಯುತ್ತಾ ಹೋದಂತೆ ಜಗತ್ತಿನ ಮಾಲಿನ್ಯ ಸೂಚ್ಯಂಕ ಏರುತ್ತಲೇ ಇದೆ. ಇದನ್ನು ನಿಯಂತ್ರಿಸಲು ನಾವು ಕಟಿಬದ್ಧರಾಗಬೇಕಾಗಿದೆ. ಮಾಲಿನ್ಯದಿಂದಾಗಿ ಇಡೀ ಪರಿಸರದ ಮೇಲಾಗಿರುವ ಪರಿಣಾಮದ ಫ‌ಲವನ್ನು ನಾವು ಇದೀಗ ಅನುಭವಿಸುತ್ತಿದ್ದೇವೆ. ವಾಯು, ಜಲ, ಮಣ್ಣು, ಪರಿಸರ..

Advertisement

ಹೀಗೆ ಪ್ರತಿ ಯೊಂದರ ಮೇಲೆ ಮಾನವ ಹಿಡಿತ ಸಾಧಿಸಲು ಹೋಗಿ ಇಡೀ ಪರಿಸರ ವ್ಯವಸ್ಥೆಯನ್ನು ಹಾಳು ಗೆಡವಿದ್ದಾನೆ. ಪ್ರಗತಿ, ಅಭಿವೃದ್ಧಿಯ ಹೆಸರಲ್ಲಿ ಕಳೆದ ಹಲವಾರು ದಶಕಗಳಿಂದ ಮಾನವ ಇಡೀ ಭೂಮಿಯನ್ನು ಪ್ರಯೋಗಶಾಲೆಯನ್ನಾಗಿಸಿದ್ದಾನೆ. ಇದರಿಂದಾಗಿ ಇಡೀ ಪರಿಸರ ಮಾಲಿನ್ಯಮಯವಾಗಿದೆ. ಇದು ಕೇವಲ ಮಾನವನ ಮಾತ್ರವಲ್ಲದೆ ಈ ಭೂಮಿಯ ಮೇಲಣ ಸಕಲ ಜೀವಿಗಳ ಬದುಕಿಗೆ ಸಂಚಕಾರ ತಂದೊಡ್ಡಿದೆ. ಸರಕಾರ ಆದಿಯಾಗಿ ನಮ್ಮ ಆಡಳಿತ ವ್ಯವಸ್ಥೆ ಮಾಲಿನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಬೇಕಿದೆ. ಅಷ್ಟು ಮಾತ್ರವಲ್ಲದೆ ಪ್ರತಿಯೋರ್ವರೂ ಮಾಲಿನ್ಯ ನಿಯಂತ್ರಣಕ್ಕೆ ಪಣ ತೊಡಬೇಕಿದೆ. ಇದು ಇಂದಿನ ಅಗತ್ಯ ಮಾತ್ರವಲ್ಲದೆ ಅನಿವಾರ್ಯವೂ ಕೂಡ.

 ಆಚರಣೆ ಹಿನ್ನೆಲೆ ಮತ್ತು ಉದ್ದೇಶ
ಮಧ್ಯಪ್ರದೇಶದ ಭೋಪಾಲ್‌ನ ಕ್ರಿಮಿನಾಶಕ ತಯಾರಿಕ ಕಂಪೆನಿಯಾದ ಯೂನಿಯನ್‌ ಕಾರ್ಬನ್‌ ಇಂಡಿಯಾ ಲಿಮಿಟೆಡ್‌ನ‌ಲ್ಲಿ 1984ರ ಡಿಸೆಂಬರ್‌ 2-3ರ ರಾತ್ರಿ ಸಂಭವಿಸಿದ ಅನಿಲ ದುರಂತದ ವೇಳೆ ಮಿಥೈಲ್‌ ಐಸೋಸೈನೇಟ್‌ ವಿಷಾನಿಲ ಸೋರಿಕೆಯಾಗಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಅಷ್ಟು ಮಾತ್ರವಲ್ಲದೆ ಈ ದುರಂತದ ದುಷ್ಪರಿಣಾಮವನ್ನು ಇಂದಿಗೂ ಅಲ್ಲಿನ ಜನರು ಅನುಭವಿಸುತ್ತಿದ್ದಾರೆ. ಈ ಘೋರ ದುರಂತದಲ್ಲಿ ಸಾವನ್ನಪ್ಪಿದವರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಬಗೆಗೆ ಜನಜಾಗೃತಿಗಾಗಿ ಪ್ರತೀ ವರ್ಷ ಡಿ. 2ರಂದು ದೇಶದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಆಚರಣೆ ಹೇಗೆ?
ಕೈಗಾರಿಕೆಗಳು ಅಥವಾ ಮಾನವ ನಿರ್ಲಕ್ಷ್ಯದಿಂದ ಉಂಟಾಗುವ ಮಾಲಿನ್ಯ, ಅದರ ಪರಿಣಾಮಗಳು ಮತ್ತು ಅದನ್ನು ತಡೆಗಟ್ಟುವುದು, ಮಾಲಿನ್ಯ ನಿಯಂತ್ರಣ ಕಾಯಿದೆಗಳ ಮಹತ್ವದ ಬಗ್ಗೆ ಜನರಿಗೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅರಿವು ಮೂಡಿಸುವ ಪ್ರಯತ್ನವನ್ನು ಈ ದಿನದಂದು ನಡೆಸಲಾಗುತ್ತದೆ. ಅಲ್ಲದೆ ಈ ದಿನದಂದು ಗಾಳಿ, ಮಣ್ಣು, ಶಬ್ದ ಮತ್ತು ಜಲ ಮಾಲಿನ್ಯದ ಪರಿಣಾಮ, ಮತ್ತವುಗಳನ್ನು ತಡೆಗಟ್ಟುವ ಬಗ್ಗೆಯೂ ಜನಜಾಗೃತಿ ಮೂಡಿಸಲಾಗುತ್ತದೆ.

Advertisement

ಈ ವರ್ಷದ ಧ್ಯೇಯ
ಮಾಲಿನ್ಯ ನಿಯಂತ್ರಣದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಮಾಲಿನ್ಯವನ್ನು ತಡೆಗಟ್ಟುವುದರ ಕುರಿತು ಜನರಿಗೆ ತಿಳಿವಳಿಕೆ ನೀಡುವುದು-ಈ ವರ್ಷದ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಧ್ಯೇಯವಾಗಿದೆ.

ಮಾಲಿನ್ಯಕ್ಕೆ ಕಾರಣಗಳು
ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ನಗರಗಳಲ್ಲಿ ಹೆಚ್ಚುತ್ತಿರುವ ಜನಸಾಂದ್ರತೆ ಮತ್ತು ತತ್ಪರಿಣಾಮವಾಗಿ ಮೂಲಸೌಕರ್ಯಗಳ ವೃದ್ಧಿ, ಅಭಿವೃದ್ಧಿ ಕಾಮಗಾರಿಗಳು, ವಾಹನಗಳ ದಟ್ಟಣೆೆ ಮತ್ತವುಗಳು ಉಗುಳುವ ಹೊಗೆ, ಬೃಹತ್‌ ಮತ್ತು ಸಣ್ಣ ಕೈಗಾರಿಕೆಗಳು, ವಾಹನಗಳ ತಯಾರಿ ಮತ್ತು ಸಂಚಾರದ ವೇಳೆ ಸೃಷ್ಟಿಯಾಗುವ ಮಾಲಿನ್ಯಕಾರಕ ಧೂಳು, ತ್ಯಾಜ್ಯಗಳನ್ನು ಸುಡುವಿಕೆ, ಅಡುಗೆಗಾಗಿ ಕಟ್ಟಿಗೆ ಬಳಕೆ, ಬೆಳಕು ಮತ್ತು ತಾಪಮಾನಕ್ಕಾಗಿ ಮಾಡುವ ಇಂಧನಗಳ ದಹನ, ಡೀಸೆಲ್‌ ಜನರೇಟರ್‌ ಮೂಲಕ ವಿದ್ಯುತ್‌ ಉತ್ಪಾದನೆ, ನಿರಂತರ ಅರಣ್ಯ ನಾಶ.. ಹೀಗೆ ಅನೇಕ ರೀತಿಯಲ್ಲಿ ದೇಶದಲ್ಲಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದೆ.

ಪರಿಣಾಮಗಳು
01 ನ್ಯಾಶನಲ್‌ ಹೆಲ್ತ್‌ ಪೋರ್ಟಲ್‌ ಆಫ್ ಇಂಡಿಯಾದ ಮಾಹಿತಿ ಪ್ರಕಾರ ವಾಯು ಮಾಲಿನ್ಯದಿಂದಾಗಿ ಜಾಗತಿಕವಾಗಿ ಪ್ರತೀ ವರ್ಷ ಸುಮಾರು 7 ಮಿಲಿಯನ್‌ ಜನರು ಸಾವನ್ನಪ್ಪುತ್ತಿದ್ದಾರೆ.ಅವರಲ್ಲಿ 4 ಮಿಲಿಯನ್‌ ಜನರು ಒಳಾಂಗಣ ವಾಯುಮಾಲಿನ್ಯದಿಂದ ಸಾಯುತ್ತಾರೆ.
02 ಜಾಗತಿಕವಾಗಿ ಹತ್ತರಲ್ಲಿ ಒಂಬತ್ತು ಜನರಿಗೆ ಶುದ್ಧ ಮತ್ತು ಸುರಕ್ಷಿತ ಗಾಳಿ ಉಸಿರಾಡಲು ಸಿಗುವುದಿಲ್ಲ.
03 ಮಾಲಿನ್ಯಕಾರಕ ಸೂಕ್ಷ್ಮಕಣಗಳು ಶ್ವಾಸಕೋಶ, ಹೃದಯ, ಮೆದುಳಿಗೆ ಹಾನಿಯಂಟು ಮಾಡುತ್ತವೆ.
04 ಪ್ರತೀ ವರ್ಷ ವಾಯು ಮಾಲಿನ್ಯದಿಂದ ಸಾಯು ವವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ವೃದ್ಧರು.
05 ಹವಾಮಾನ ಬದಲಾವಣೆಗೆ ವಾಯು ಮಾಲಿನ್ಯ ಪ್ರಮುಖ ಕಾರಣ.

ಪರಿಸರ-ಅಭಿವೃದ್ಧಿ ನಡುವೆ ಸಮತೋಲನ ಅಗತ್ಯ
ಪರಿಸರ ಮಾಲಿನ್ಯಕ್ಕೆ ಮಾನವನೇ ನೇರ ಕಾರಣವಾಗಿ ದ್ದಾನೆ. ಮಾನವನ ಅತಿಯಾಸೆ, ಇಡೀ ಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಅಹಂತನವನ್ನು ಬಿಡಲೇ ಬೇಕಿದೆ. ನೀರು, ಬೆಂಕಿ, ಗಾಳಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಹುಂಬತನವನ್ನು ಬಿಡದೇ ಹೋದಲ್ಲಿ ಇಡೀ ಮನುಕುಲಕ್ಕೆ ಸಂಚಕಾರ ಬಂದೊದಗುವುದು ಶತಃಸಿದ್ಧ. ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಂಡು ಮುನ್ನಡೆದಲ್ಲಿ ಮಾತ್ರವೇ ಮಾನವನ ಬದುಕು ಸಹನೀಯವಾದೀತು. ಅಭಿವೃದ್ಧಿ, ಸಂಶೋಧನೆ ಹೆಸರಲ್ಲಿ ನಡೆಸಲಾಗುತ್ತಿರುವ ಪ್ರಕೃತಿ ಮೇಲಣ ದೌರ್ಜನ್ಯಗಳನ್ನು ನಿಲ್ಲಿಸಿ ತಮ್ಮ ಭಾವೀ ಪೀಳಿಗೆಗೆ ಈ ಭೂಮಿಯನ್ನು ಕಾಪಿಡುವ ಕಾರ್ಯಕ್ಕೆ ಪ್ರತಿಯೋರ್ವರು ಮುಂದಾಗಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next