Advertisement

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

12:50 AM Apr 25, 2024 | Team Udayavani |

ಉಡುಪಿ/ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016ರಲ್ಲಿ ಸಾವಿರಕ್ಕೂ ಅಧಿಕ ಕಂಡುಬಂದಿದ್ದ ಮಲೇರಿಯಾ ಪ್ರಕರಣ 2023ರ ವೇಳೆಗೆ ಎರಡಂಕೆಗೆ ಇಳಿದಿದೆ. ಆರೋಗ್ಯ ಇಲಾಖೆ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಇದು ಸಾಧ್ಯವಾಗಿದೆ.

Advertisement

ಉಡುಪಿ, ದ.ಕ.ದಲ್ಲಿ ಕೆಲವು ವರ್ಷಗಳಿಂದ ಸಾಂಕ್ರಾಮಿಕ ರೋಗ ಪತ್ತೆ ಮತ್ತು ಶೀಘ್ರ ಚಿಕಿತ್ಸೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ತರ ಹೆಜ್ಜೆ ಇಡುತ್ತಿದೆ. ವಿಶೇಷ ತರಬೇತಿ ಹೊಂದಿದ ಕಾರ್ಯಕರ್ತರು ಮನೆ ಮನೆಗೆ, ನಿರ್ಮಾಣ ಹಂತದ ಕಟ್ಟಡಗಳಿಗೆ ತೆರಳಿ ಸಾರ್ವಜನಿಕರು, ಕಾರ್ಮಿಕರಿಗೆ ರ್ಯಾಪಿಡ್‌ ಟೆಸ್ಟ್‌ ಮತ್ತು ಸಕ್ರಿಯ ರಕ್ತ ಲೇಪನ ಪರೀಕ್ಷೆ ನಡೆಸುತ್ತಿದ್ದಾರೆ. ಈ ಮೂಲಕ ಜ್ವರ ಇದ್ದವರ ತಪಾಸಣೆ, ಮಲೇರಿಯಾ ಜ್ವರ ಬಂದವರ ಕುಟುಂಬದ ಸದಸ್ಯರ ತಪಾಸಣೆ, ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ಸಾರ್ವಜನಿಕರನ್ನೂ ತಪಾಸಣೆ ಮಾಡಲಾಗುತ್ತದೆ. ನಿರಾಶ್ರಿತರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಹೊರ ರಾಜ್ಯದವರ ಮೇಲೆ ನಿಗಾ
ಪಶ್ಚಿಮ ಬಂಗಾಲ, ಒಡಿಶಾ, ಝಾರ್ಖಂಡ್‌, ಉತ್ತರ ಪ್ರದೇಶ ಪ್ರದೇಶ ಸಹಿತ ಕೆಲವೊಂದು ರಾಜ್ಯಗಳಲ್ಲಿ ಮಲೇರಿಯಾ ಜಾಸ್ತಿ ಇದೆ. ಅಲ್ಲಿಂದ ಕೆಲಸಕ್ಕೆಂದು ಅವಿಭಜಿತ ದ.ಕ. ಜಿಲ್ಲೆಗೆ ಬರುವ ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಅವರನ್ನು ನಿರಂತರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮುನ್ನೆಚ್ಚರಿಕೆ ವಹಿಸಿ
– ಹವಾಮಾನ ಬದಲಾವಣೆ ಕಾರಣದಿಂದಾಗಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆ ಬಾರದಂತೆ ಜನರೇ ಜಾಗೃತರಾಗಬೇಕಿದೆ.
– ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ
– ಸೊಳ್ಳೆಯಿಂದ ಗರ್ಭಿಣಿಯರಂತೂ ತುಂಬಾ ಎಚ್ಚರಿಕೆ ವಹಿಸಿ
– ಮಂದ ಬಣ್ಣದ ಉಡುಪು ಧರಿಸಿ, ಸಾಮಾನ್ಯವಾಗಿ ಸೊಳ್ಳೆ ದೂರವಿರುತ್ತದೆ.
-ದಿನಂಪ್ರತಿ ಮನೆಯ ನೆಲವನ್ನು ಒರೆಸಲು ಮರೆಯದಿರಿ
– ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ಹತ್ತಿರದ ವೈದ್ಯರನ್ನು ಭೇಟಿಯಾಗಿ
– ನೀರಿನ ಸಂಗ್ರಹಕ್ಕೆ ಭದ್ರವಾದ ಮುಚ್ಚಿದ ವ್ಯವಸ್ಥೆ ಇರಬೇಕು

ಇಂದು ರಾಷ್ಟ್ರೀಯ
ಮಲೇರಿಯಾ ದಿನ
ಪ್ರತೀ ವರ್ಷ ಎ. 25ನ್ನು ರಾಷ್ಟ್ರೀಯ ಮಲೇರಿಯಾ ದಿನವನ್ನಾಗಿ ಆಚರಿಸಲಾ ಗುತ್ತಿದೆ. “ಸಮಾನತೆಯ ಜಗತ್ತಿಗೋಸ್ಕರ ಮಲೇರಿಯಾವನ್ನು ಕೂಡಲೇ ಕಮ್ಮಿ ಮಾಡೋಣ’ ಎಂಬುದು ಈ ವರ್ಷದ ಧ್ಯೇಯ ವಾಕ್ಯ.

Advertisement

ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಮಲೇರಿಯಾ ತಡೆಯಲು ಸಕ್ರಿಯ ರಕ್ತ ಲೇಪನ ಅಭಿಯಾನ ನಡೆಯುತ್ತಿದೆ. ಅಧಿಕಾರಿಗಳು ಮನೆ ಮನೆಗೆ, ನಿರ್ಮಾಣ ಹಂತದ ಕಟ್ಟಡ ಪ್ರದೇಶಕ್ಕೆ 15 ದಿನಕ್ಕೊಮ್ಮೆ ತೆರಳಿ ಸ್ಥಳದಲ್ಲಿಯೇ ಮಲೇರಿಯಾ ರ್ಯಾಪಿಡ್‌ ತಪಾಸಣೆ ನಡೆಸುತ್ತಾರೆ. ಮಲೇರಿಯಾ ಪ್ರಕರಣ ಕಡಿಮೆ ಇದೆ ಎಂದು ಸಾರ್ವಜನಿಕರು ನಿರ್ಲಕ್ಷ್ಯ ತೋರಬಾರದು.
– ಡಾ| ನವೀನ್‌ ಚಂದ್ರ ಕುಲಾಲ್‌ /
ಡಾ| ಪ್ರಶಾಂತ್‌ ಭಟ್‌, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ದ.ಕ., ಉಡುಪಿ ಜಿಲ್ಲೆ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next