Advertisement

ಇಂದು ರಾಷ್ಟ್ರೀಯ ವೈದ್ಯರ ದಿನ: ಸಾರ್ಥಕ್ಯದ ಆ ಒಂದು ದಿನ…

11:38 PM Jun 30, 2023 | Team Udayavani |

ಇಂದು ರಾಷ್ಟ್ರೀಯ ವೈದ್ಯರ ದಿನ. ವೈದ್ಯೋ ನಾರಾಯಣೋ ಹರಿಃ ಎಂಬುದು ನಮ್ಮ ಕಡೆ ಇರುವ ಮಾತು. ಅಂದರೆ ವೈದ್ಯರನ್ನು ನಾವು ಸಾಕ್ಷಾತ್‌  ದೇವರೆಂದೇ ಕಾಣುತ್ತೇವೆ. ಇಂಥ ನಮ್ಮೊಳಗಿನ ವೈದ್ಯರು, ತಮ್ಮ ವೃತ್ತಿ ಜೀವನದ ಸಾರ್ಥಕ್ಯದ ಕ್ಷಣಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಅಲ್ಲದೆ ರೋಗಿಗಳ ಜೀವ ಉಳಿಸುವ ವೇಳೆ ಎದುರಾದ ಸವಾಲುಗಳ ಬಗ್ಗೆಯೂ ಅವರದ್ದೇ ಅನುಭವ ಹಂಚಿಕೊಂಡಿದ್ದಾರೆ.

Advertisement

ಮುಕ್ಕಾಲು ತಾಸಿನ ಬಳಿಕ ಮತ್ತೆ ಮಿಡಿದ ಹೃದಯ!

“ನನ್ನ 40 ವರ್ಷಗಳ ವೈದ್ಯಕೀಯ ವೃತ್ತಿ ಜೀವನದಲ್ಲಿ ಅರ್ಧ ಲಕ್ಷಕ್ಕೂ ಅಧಿಕ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. ಬದುಕಿಗಾಗಿ ಹಂಬಲಿಸಿದ ಅದೆಷ್ಟೋ ಜೀವಗಳನ್ನು ಕಾಪಾಡಿದ್ದೇನೆ. ಆದರೆ ಅವರ ಮುಖಗಳು ನನಗೆ ನೆನಪಿಲ್ಲದೆ ಇರಬಹುದು ಆದರೆ ಅವರಿಗೆ ಮಾತ್ರ ನನ್ನ ನೆನಪು ಇನ್ನೂ ಹಸುರಾಗಿ ಉಳಿದಿರುವುದು ವೈದ್ಯ ವೃತ್ತಿಯ ತೃಪ್ತಿ’.

ಇದುವರೆಗೆ 55 ಸಾವಿರ ರೋಗಿಗಳ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. ಅದರಲ್ಲಿ 1995ರಲ್ಲಿ ಸುಮಾರು 52 ವರ್ಷದ ಸರಕಾರಿ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಸಾಮಾನ್ಯವಾಗಿ ಒಬ್ಬ ರೋಗಿಗೆ ಹೆಚ್ಚೆಂದರೆ 5-15 ನಿಮಿಷಗಳ ರೋಗಿಯ ಎದೆ ಬಡಿತ ಪ್ರಾರಂಭಿಸಲು ಎರಡು ಕೈಗಳಿಂದ ಒತ್ತಡ ಹೇರಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಈ ವ್ಯಕ್ತಿಗೆ ನಾವು ಸರಿಸುಮಾರು 45 ನಿಮಿಷಗಳ ನಿರಂತವಾಗಿ 5 ಮಂದಿ ನಿಮಿಷಕ್ಕೆ 60 ರಿಂದ 70 ಬಾರಿ ರೋಗಿಯ ಎದೆಯ ಭಾಗವನ್ನು ಪ್ರಸ್‌ ಮಾಡಿದ್ದೇವು. ಇನ್ನೇನು ನಮ್ಮ ಪ್ರಯತ್ನ ಬಿಡಬೇಕು ಎನ್ನುವ ಹೊತ್ತಿಗೆ ರೋಗಿಯ ಹೃದಯ ಮೆಲ್ಲಗೆ ಬಡಿದುಕೊಳ್ಳಲಾರಂಭಿಸಿತು. ಅನಂತರ ಅಗತ್ಯವಿರುವ ತುರ್ತು ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇಂತಹ ಪ್ರಕರಣ ಮತ್ತೆಂದು ಘಟಿಸಿಲ್ಲ.

ಸಾಮಾನ್ಯವಾಗಿ 5 ನಿಮಿಷಕ್ಕಿಂತ ಹೆಚ್ಚು ಸಮಯ ಹೃದಯ ಸ್ತಂಭನವಾದರೆ ಮೆದುಳಿಗೆ ರಕ್ತ ಸಂಚಾರವಾಗದೆ ಅಂಗಾಂಗ ವೈಫ‌ಲ್ಯವಾಗುತ್ತದೆ.ಆದರೆ ಈ ರೋಗಿಯಲ್ಲಿ ಆ ಸಮಸ್ಯೆ ಕಂಡು ಬರಲಿಲ್ಲ. ಇಂದಿಗೂ ಆರೋಗ್ಯವಾಗಿದ್ದಾರೆ. ಶಸ್ತ್ರ ಚಿಕಿತ್ಸೆಯ ಅನಂತರ 8 ವರ್ಷಗಳ ಸರಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿ ನಿವೃತ್ತಿ ಹೊಂದಿದ್ದಾರೆ. 6 ತಿಂಗಳ ಹಿಂದೆ ಅಷ್ಟೆ ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಚಿಕಿತ್ಸೆ ಕೋರಿ ಬರುವ ರೋಗಿಯ ಮನೆ ಬೆಳಕು ಬೆಳಗಿದಾಗ ಮಾತ್ರ ವೈದ್ಯನಿಗೆ ನೆಮ್ಮದಿ ಸಿಗುತ್ತದೆ. ಆ ಕುಟುಂಬದ ಮುಖದಲ್ಲಿ ನಗು ಕಂಡರೆ ಅದು ವೈದ್ಯನ ನಿಜವಾದ ಸಾಧನೆ.

Advertisement

ಡಾ| ಸಿ.ಎನ್‌. ಮಂಜುನಾಥ, ನಿರ್ದೇಶಕರು,  ಜಯದೇವ ಸಂಸ್ಥೆ, ಬೆಂಗಳೂರು.

ಯುವತಿ ಕೈಜೋಡಣೆಗೆ ಸತತ ಆರು ಗಂಟೆ ಶಸ್ತ್ರಚಿಕಿತ್ಸೆ

ಒಬ್ಬ ವೈದ್ಯನಾಗಿ ಅದರಲ್ಲೂ ತಜ್ಞ ಪ್ಲಾಸ್ಟಿಕ್‌ ಸರ್ಜನ್‌ ಆಗಿ ನಮ್ಮ ತಂಡದವರು ನಡೆಸಿದ ಒಂದು ವಿಶಿಷ್ಟ ಸರ್ಜರಿಯು ನಮಗೆ ಆತ್ಮ ಸಂತೃಪ್ತಿ ತಂದುಕೊಟ್ಟ ಘಟನೆಯನ್ನು ವೈದ್ಯ ದಿನಾಚರಣೆಯ ದಿನದಂದು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತದೆ.ಎರಡು ವರ್ಷಗಳ ಹಿಂದೆ ಸಂಪೂರ್ಣ ಮನೆಯ ಜವಾಬ್ದಾರಿ ಹೊತ್ತ 18 ವರ್ಷದ ಹುಡುಗಿಯೊಬ್ಬಳು ಬುಕ್‌ ಬೈಂಡಿಗ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರದೃಷ್ಟವಷಾತ್‌ ಅವಳ ಕೈ ಸಂಪೂರ್ಣವಾಗಿ ತುಂಡಾಗಿತ್ತು. ಇಂತಹ ಸನ್ನಿವೇಶದಲ್ಲಿ ನಮ್ಮ ಆಸ್ಪತ್ರೆಗೆ ಸಂಜೆ ಹೊತ್ತು ಬಂದ ಆಕೆಯ ಕೈಯನ್ನು ಅತ್ಯಂತ ಕ್ಲಿಷ್ಟಕರವಾದರೂ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ಹೆಮ್ಮೆ ನನಗೆ ಮತ್ತು ನನ್ನ ತಂಡಕ್ಕಿದೆ.

ಆ ದಿನದ ಶಸ್ತ್ರ ಚಿಕಿತ್ಸೆಗಳೆನ್ನೆಲ್ಲ ಮುಗಿಸಿ ನಾವೆಲ್ಲ ಮನೆ ಸೇರುವ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಭಾಗದಿಂದ ಕರೆ ಬಂದಾಗ ನಮ್ಮ ಸಂಪೂರ್ಣ ತಂಡ ಬಂದು ಆ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವೇ ಆಗಿದೆ ಎಂದು ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಒಂದು ತಂಡವಾಗಿ ನೆರವೇರಿಸಿದೆವು. ಇದರಲ್ಲಿ ಎಲಬು, ರಕ್ತನಾಳ, ನರ, ಸ್ನಾಯುಗಳನ್ನು ಮರುಜೋಡಿಸುವ ಆವಶ್ಯಕತೆಯಿದ್ದು, ಸುಮಾರು 5ರಿಂದ 6 ಗಂಟೆಗಳವರೆಗೂ ಈ ಶಸ್ತ್ರಚಿಕಿತ್ಸೆ ನಡೆಯಿತು. ಆ ಹುಡಗಿ ಚೇತರಿಸಿಕೊಂಡು, ಗುಣಮುಖವಾಗಿ ಮೊದಲಿನಂತೆಯೇ ಕೆಲಸ ಮಾಡುತ್ತಾ ತಮ್ಮ ಕುಟುಂಬ ವನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ ಎಂದು ತಿಳಿದಾಗ ಅಂದು ನಾವು ಆಯಾಸಗೊಂಡಿದ್ದರೂ, ಇಂದು ನಮಗಾದ ಆತ್ಮಸಂತೃಪ್ತಿ ಹೇಳತೀರದು.

ಡಾ| ನಿರಂಜನ ಕುಮಾರ್‌,ಉಪ ಕುಲಪತಿಗಳು, ಎಸ್‌ಡಿಎಂ ವಿವಿ, ಧಾರವಾಡ ಹಾಗೂ ಸ್ವರೂಪ ಶಸ್ತ್ರಚಿಕಿತ್ಸೆ ಹಿರಿಯ ತಜ್ಞರು

ಹೈ ರಿಸ್ಕ್ನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೆ!

ನನ್ನ 45 ವರ್ಷದ ವೈದ್ಯ ವೃತ್ತಿ ಬದುಕಿನಲ್ಲಿ ರಾಜ್ಯದ ವಿವಿಧೆಡೆ 50 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಆದರೆ ಇವುಗಳಲ್ಲಿ ಕೆಲವೊಂದು ಎಂದಿಗೂ ಮರೆಯಲಾಗದ ಹಲವಾರು ಘಟನೆಗಳಿವೆ. ಅಂದರೆ ಕಳೆದ 5 ವರ್ಷಗಳ ಹಿಂದೆ ಅತಿಯಾದ ತೂಕವಿದ್ದ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿರುವುದು ಈಗ ನನ್ನ ನೆನಪಿನಲ್ಲಿದೆ. ಚೆನ್ನೈ ಮೂಲದ 168 ಕೆ.ಜಿ. ತೂಕ ಹೊಂದಿರುವ 50 ವರ್ಷದ ಮಹಿಳೆಯೊಬ್ಬರಿಗೆ ಗರ್ಭಕೋಶ ದೊಡ್ಡದಾಗಿ ಋತು ಸ್ರಾವದ ವೇಳೆ ರಕ್ತ ಸೋರಿಕೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಪರಿಣಾಮ ಆ ಮಹಿಳೆ ಹೈಪರ್‌ ಟೆನ್ಷನ್‌, ಡಯಾಬಿಟಿಸ್‌, ಅತಿಯಾದ ತೂಕ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿದ್ದರು.

ಬೆಂಗಳೂರು ಸೇರಿದಂತೆ ದೇಶದ ವಿವಿಧ ಆಸ್ಪತ್ರೆಗೆ ಭೇಟಿ ಕೊಟ್ಟರೂ ಇದಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಇವರು ಅತೀಯಾದ ತೂಕದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಯಾವ ವೈದ್ಯರೂ ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆಗೆ ಧೈರ್ಯ ಮಾಡಿರಲಿಲ್ಲ. ನಾನು ಈ ಮಹಿಳೆಯನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಪರೀಕ್ಷಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಈಗ ಆರೋಗ್ಯವಾಗಿ ಖುಷಿಯಾಗಿದ್ದಾರೆ.

ಡಾ| ಶಂಕರೇಗೌಡ, ಶಿವಮೊಗ್ಗ ಮೆಡಿಕಲ್‌ ಕಾಲೇಜಿನ ಮಾಜಿ ನಿರ್ದೇಶಕ ಹಾಗೂ ಖ್ಯಾತ ಸ್ತ್ರೀ ರೋಗ ತಜ್ಞ

ಕೋವಿಡ್‌ ಪೀಡಿತ ಮಹಿಳೆಗೆ ಜೀವದಾನ ನೀಡಿದ ಕ್ಷಣ

ಅದು ಕೋವಿಡ್‌ ಎರಡನೇ ಅಲೆಯ ಸಂದರ್ಭ. ಉಡುಪಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಸುಮಾರು 50-55 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್‌ನಿಂದಾಗಿ ಗಂಭೀರ ಸ್ಥಿತಿ ಎದುರಾಗಿತ್ತು. ಬಳಿಕ ಅವರು ಅಲ್ಲಿಂದ ನಮ್ಮ ಟಿಎಂಎ ಪೈ ಆಸ್ಪತ್ರೆಗೆ ಶಿಫ್ಟ್ ಆದರು. ಮಧುಮೇಹದ ಜತೆಗೆ ಸ್ಯಾಚುರೆಶನ್‌ ಮಟ್ಟವೂ ಕಡಿಮೆಯಿತ್ತು. ಸುಮಾರು 10ರಿಂದ 15 ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದ ಅವರು ಬಳಿಕ ಹಲವು ದಿನ ಐಸಿಯುನಲ್ಲಿದ್ದರು. ನಿರಂತರವಾಗಿ ಚಿಕಿತ್ಸೆಗೆ ಸ್ಪಂದಿಸಿದ ಅವರು ಇಂದಿಗೂ ನಮ್ಮ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ತಾವು ಬದುಕುಳಿಯುವ ಸಾಧ್ಯತೆಯೇ ಕಡಿಮೆ ಎಂದು ಕೆಲವರು ತಿಳಿದಿದ್ದರೂ ಸೂಕ್ತ ಚಿಕಿತ್ಸೆಯ ಮೂಲಕ ಅವರ ಭಯವನ್ನು ದೂರ ಮಾಡಲಾಗಿದೆ. ಇದು ಒಂದು ಉದಾಹರಣೆಯಷ್ಟೇ. ಇಂತಹ ಹಲವಾರು ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಕೆಲವು ಮಂದಿ ರೋಗಿಗಳು ಈಗಲೂ ಕೋವಿಡ್‌ನ‌ ಸಂದಿಗ್ಧ ಸ್ಥಿತಿಯ ಬಗ್ಗೆ ನಮ್ಮಲ್ಲಿ ಮಾತನಾಡುವುದುಂಟು.

ರೋಗಿಗಳೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿ ಯೋಗ ಕ್ಷೇಮ ವಿಚಾರಿಸುವುದರಿಂದ ಸಕಾರಾತ್ಮಕವಾಗಿ ಅವರು ತಮ್ಮ ನೋವು ಹಂಚಿಕೊಳ್ಳಲು ಸಾಧ್ಯವಿದೆ. ನನ್ನ ವೃತ್ತಿ ಜೀವನದ ಆರಂಭದಿಂದ ಈಗ ಹಾಗೂ ಮುಂದೆಯೂ ರೋಗಿಗಳೊಂದಿಗೆ ಕೆಲವು ಹೊತ್ತು ಮಾತನಾಡುವ ಗುಣ ಬೆಳೆಸಿದ್ದೇನೆ. ವೈದ್ಯರು, ರೋಗಿಗಳ ನಡುವೆ ಉತ್ತಮ ಹೊಂದಾಣಿಕೆ ಅಗತ್ಯ ಎಂಬುವುದನ್ನು ನಾನು ಪಾಲಿಸುತ್ತಿದ್ದೇನೆ. ಎಲ್ಲ ವೈದ್ಯರು ಶೇ.99 ರಷ್ಟು ಉತ್ತಮ ಚಿಕಿತ್ಸೆ ನೀಡುತ್ತಾರೆ.  ಪ್ರತಿ ವೈದ್ಯರು ಶೇ.100ರಷ್ಟು ಪರಿಶ್ರಮ ಹಾಕಿ ರೋಗಿಗಳ ಆರೈಕೆ ಮಾಡುತ್ತಾರೆ. ವೈದ್ಯರು ಹಾಗೂ ಆ ಕ್ಷೇತ್ರವನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು.

ಡಾ| ಶಶಿಕಿರಣ್‌ ಉಮಾಕಾಂತ್‌,  ವೈದ್ಯಕೀಯ ಅಧೀಕ್ಷಕರು, ಡಾ| ಟಿಎಂಎ ಪೈ ಆಸ್ಪತ್ರೆ ಉಡುಪಿ

ಯುವಕನಿಗೆ ಮರುಜೀವ

ಅದು 2021ರ ಎಪ್ರಿಲ್‌ ತಿಂಗಳು. ಕೋವಿಡ್‌ 2ನೇ ಅಲೆ ತೀವ್ರತೆ ಹೆಚ್ಚಿತ್ತು. ನಾನು ಕೋವಿಡ್‌ ಕರ್ತವ್ಯದಲ್ಲಿದ್ದಾಗ ಬೆಳ್ತಂಗಡಿ ಕಡೆಯಿಂದ ನನಗೊಂದು ಕರೆ ಬರುತ್ತದೆ. ಮನೆಯಲ್ಲಿ ಬಡತನವಿದ್ದು, 22 ವರ್ಷದ ಕಾಲೇಜು ಯುವಕನೊಬ್ಬ ಎರಡು ದಿನದಿಂದ ಭಾರೀ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾನೆಂದು. ತತ್‌ಕ್ಷಣ ಮಂಗಳೂರಿನ ಕೆಎಂಸಿಗೆ ದಾಖಲಾಗಲು ಸೂಚಿಸಿದೆ. ಆತನನ್ನು ಪರೀಕ್ಷಿಸಿದಾಗ ಭಾರೀ ಜ್ವರ ಇತ್ತು. 90ಕ್ಕಿಂತ ಅಧಿಕ ಇರಬೇಕಾದ ಸ್ಯಾಚುರೇಶನ್‌ ಲೆವೆಲ್‌ ಕೇವಲ 60 ಇತ್ತು. ಉಬ್ಬಸವೂ ಇದ್ದ ಕಾರಣ ಉಸಿರಾಡಲು ಕಷ್ಟ ಪಡುತ್ತಿದ್ದ. ಕೂಡಲೇ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ಆರಂಭಿಸಿದೆವು. ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿ ಬಂತು. ಐಸಿಯುಗೆ ಶಿಫ್ಟ್‌ ಮಾಡಿಸಿದೆವು.

ಸಾಮಾನ್ಯವಾಗಿ 22 ವರ್ಷದ ಹುಡುಗರಲ್ಲಿ ಕೋವಿಡ್‌ ತೀವ್ರತೆ ಆ ಮಟ್ಟಕ್ಕೆ ಇರುವುದಿಲ್ಲ. ಮತ್ತಷ್ಟು ಹೆಚ್ಚಿನ ಪರೀಕ್ಷೆ ನಡೆಸಲು ನಿರ್ಧರಿಸಿದೆವು.  ಹುಡುಗನ ಎರಡೂ ಶ್ವಾಸಕೋಶಗಳಿಗೆ ನ್ಯುಮೋನಿಯ ಹರಡಿತ್ತು. ಎಕೊ ಹಾಗೂ ಇತರ ರಕ್ತ ಪರೀಕ್ಷೆಯ ಅನಂತರ ಮಲ್ಟಿ ಸಿಸ್ಟಮ್‌ ಇಂಫಮೇಟರಿ ಸಿಂಡ್ರೋಮ್‌ ಇನ್‌

ಅಡಲ್ಟ್ (ಎಂಐಎಸ್‌ಎ-ಮೀಸ) ರೋಗ ಎಂದು ನಿರ್ಣಯಿಸಿದೆವು. ಅಂದರೆ ಬಹು ಅಂಗಾಂಗಕ್ಕೆ ರೋಗ ತಗಲುವುದು. ರೋಗ ನಿರೋಧಕ ಶಕ್ತಿಯು ರೋಗದ ವಿರುದ್ಧ ಹೋರಾಡುವ ಬದಲು, ರೋಗವನ್ನು ಮತ್ತಷ್ಟು ಉಲ್ಬಣ ಗೊಳಿಸುವುದಾಗಿದೆ. ಈ ರೋಗದಿಂದ ಹೆಚ್ಚಾಗಿ ಚರ್ಮ, ಕಣ್ಣು, ಹೃದಯ, ಕಿಡ್ನಿ, ಮೆದುಳಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಕೋವಿಡ್‌ ಆರಂಭಿಕ ಹಂತದಲ್ಲಿ ರಕ್ತದೊತ್ತಡ ಕಡಿಮೆಯಾಗುವುದಿಲ್ಲ. ಆದರೆ ಆತನ ಬಿಪಿ ತುಂಬಾ ಕಡಿಮೆ ಇತ್ತು. ಇದೇ ಕಾರಣಕ್ಕೆ ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಮೀಸ ರೋಗಕ್ಕೆ  ಐವಿ ಇಮ್ಯುನೋಗ್ಲೋಬಿನ್‌ ಚಿಕಿತ್ಸೆ ನೀಡಬೇಕು. ಈ ಚಿಕಿತ್ಸೆಗೆ ದಿನಕ್ಕೆ 1.5 ಲಕ್ಷ ಖರ್ಚು. ಒಟ್ಟಾರೆ 4.5 ಲಕ್ಷ ರೂ.ನಿಂದ ರಿಂದ 5 ಲಕ್ಷ ರೂ. ಬೇಕು. ರೋಗಿಯ ಮನೆಯಲ್ಲಿ ಬಡತನ ಇದ್ದ ಕಾರಣ, ನಮ್ಮ ಆಡಳಿತ ಮಂಡಳಿ, ಎನ್‌ಜಿಒ ಸೇರಿದಂತೆ ಕ್ರೌಂಡ್‌ ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ಚಿಕಿತ್ಸೆ ಆರಂಭಿಸಿದೆವು. ಮುಂದಿನ 24 ಗಂಟೆಯಲ್ಲಿ ಶ್ವಾಸಕೋಶದಲ್ಲಿ ತುಂಬಿದ್ದ ನೀರು ಕಡಿಮೆಯಾಯಿತು, ರಕ್ತದೊತ್ತಡ ಸಾಮಾನ್ಯಕ್ಕೆ ಬಂತು. 3 ದಿನಗಳಲ್ಲಿ ವೆಂಟಿಲೇಟರ್‌ನಿಂದ ಹೊರ ತೆಗೆದೆವು. ಆತನನ್ನು ವಾರ್ಡ್‌ಗೆ ಶಿಫ್ಟ್‌ ಮಾಡಿ, ಬಿಡುಗಡೆಗೊಳಿಸಿದೆವು. ವಾರದ ಬಳಿಕ ಆಸ್ಪತ್ರೆಗೆ ಹೂವು, ಹಣ್ಣು ಹಂಪಲು ಕೊಡಲು ಬಂದಿದ್ದ. ಆತನನ್ನು ನೋಡಿ ತುಂಬಾ ಖುಷಿಯಾಯ್ತು. ಕೋವಿಡ್‌ನ‌ಲ್ಲಿ ಅನೇಕ ಸಾವು ನೋವು ನೋಡಿದ್ದೇನೆ. ಈ ರೀತಿ ರೋಗಿಗೆ ಮರು ಜೀವ ನೀಡಿದ ಕ್ಷಣ ಎಂದಿಗೂ ಸ್ಮರಣೀಯ.

ಡಾ|  ಬಸವಪ್ರಭು ಅಚಪ್ಪ,  ಕೆಎಂಸಿ ಆಸ್ಪತ್ರೆ, ಮಂಗಳೂರು

50 ಬಾರಿ ಕಾರ್ಡಿಯಾಕ್‌ ಶಾಕ್‌

ಹೃದಯ ಸಂಬಂಧಿ ಸಮಸ್ಯೆಗೆ ವ್ಯಕ್ತಿಯೊಬ್ಬರು ನನ್ನ ಬಳಿ ಕಳೆದ 10 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಿಂದ ಇದ್ದಾರೆ. ಈ ಹಿರಿಯ ವ್ಯಕ್ತಿ 2018ರಲ್ಲಿ ತಮ್ಮ  23 ವರ್ಷದ ಮಗನನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಆತನಿಗೆ ಹೃದಯಾಘಾತವಾಗಿದ್ದು ಪತ್ತೆಯಾಯ್ತು. ಕೂಡಲೇ ರೋಗಿಯನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸುವ ಹಂತದಲ್ಲಿ ಹೃದಯ ಸ್ತಂಭನವಾಗಿತ್ತು. ಪರಿಣಾಮ ಡಿಫಿಬ್ರಿಲೇಶನ್‌ ಅಂದರೆ ಹೃದಯ ಥೆರಪಿ ಶಾಕ್‌ ನೀಡಿದೆ. ಸುಮಾರು 50 ಬಾರಿ ಕಾರ್ಡಿಯಾಕ್‌ ಶಾಕ್‌ ನೀಡಿ, ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಕೊನೆಗೂ ಆ ಯುವಕ ಜೀವನ್ಮರಣ ಹೋರಾಟದಲ್ಲಿ ಗುಣಮುಖನಾಗಿ ಸಾವು ಗೆದ್ದು ಬಂದಿದ್ದ. ಪೈಪ್‌ಲೈನ್‌ ಜೋಡಿಸುವ ಕೆಲಸ ಮಾಡುತ್ತಿದ್ದ ಯುವಕ, ನಮ್ಮ ಚಿಕಿತ್ಸೆಯ ಬಳಿಕವೂ ಆರೋಗ್ಯವಾಗಿ ತನ್ನ ವೃತ್ತಿ ಮಾಡಿಕೊಂಡಿದ್ದ. ಪರಿಣಾಮ ಆ ಯುವಕನಿಗೆ 5 ವರ್ಷಗಳ ಬಳಿಕ ಮತ್ತೂಮ್ಮೆ ಹೃದಯಾಘಾತವಾಗಿ, ನಮ್ಮ ಆಸ್ಪತ್ರೆಯಲ್ಲೇ ಸಾವಪ್ಪಿದ. ಆತನನ್ನು ಉಳಿಸಿದ್ದು ಸಾರ್ಥಕ್ಯದ ಕ್ಷಣವಾದರೆ, ಆತನ ಸಾವು ನಿರಾಸೆಯ ಕ್ಷಣಗಳನ್ನು ಉಳಿಸಿ ಹೋಗಿದೆ.

ಡಾ| ನಿತಿನ್‌ ಅಗರವಾಲ್‌, ಆಯುಷ್‌ ಆಸ್ಪತ್ರೆ,  ಜಲನಗರ, ವಿಜಯಪುರ

 

Advertisement

Udayavani is now on Telegram. Click here to join our channel and stay updated with the latest news.

Next