Advertisement

ಆಂಗ್ಲ ಪಡೆಯನ್ನು ಬಗ್ಗುಬಡಿಯಲಿ ಟೀಮ್‌ ಇಂಡಿಯಾ

11:56 PM Nov 09, 2022 | Team Udayavani |

ಅಡಿಲೇಡ್‌: ಟೀಮ್‌ ಇಂಡಿಯಾ “ಟಿ20 ವರ್ಲ್ಡ್ ಕಪ್‌ ಗ್ಲೋರಿ’ಗೆ ಕೇವಲ ಎರಡೇ ಹೆಜ್ಜೆ ದೂರದಲ್ಲಿದೆ. ಆದರೆ ಈ ಎರಡೂ ಹೆಜ್ಜೆಗಳನ್ನು ಭಾರತ ಬಹಳ ಎಚ್ಚರಿಕೆಯಿಂದ ಇಡಬೇಕಿದೆ. ಗುರುವಾರದ ಸೆಮಿಫೈನಲ್‌ನಲ್ಲಿ ಏಕದಿನ ವಿಶ್ವಕಪ್‌ ಚಾಂಪಿಯನ್‌ ಖ್ಯಾತಿಯ, ಕೂಟದ ಬಲಿಷ್ಠ ತಂಡಗಳಲ್ಲೊಂದಾದ ಇಂಗ್ಲೆಂಡ್‌ ತಂಡವನ್ನು ರೋಹಿತ್‌ ಪಡೆ ಎದುರಿಸಲಿದ್ದು, ತನ್ನ 3ನೇ ಟಿ20 ವಿಶ್ವಕಪ್‌ ಫೈನಲ್‌ ಗುರಿಯನ್ನು ಸಾಕಾರಗೊಳಿಸಬೇಕಿದೆ.

Advertisement

ಇನ್ನೊಂದೆಡೆ ಜಾಸ್‌ ಬಟ್ಲರ್‌ ಸಾರಥ್ಯದ ಇಂಗ್ಲೆಂಡ್‌ ಕೂಡ 3ನೇ ಫೈನಲ್‌ ಯೋಜನೆಯನ್ನು ಈಡೇರಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಲಿದೆ. ಆದರೆ ಸೂಪರ್‌-12 ಹಂತದಲ್ಲಿ ತನ್ನ ನಿರ್ವಹಣೆ ಭಾರತಕ್ಕೆ ಸಾಟಿ ಇರಲಿಲ್ಲ ಎಂಬುದು ಆಂಗ್ಲರ ಪಡೆಗೆ ಚೆನ್ನಾಗಿ ಅರಿವಿದೆ. ನಾಕೌಟ್‌ನಲ್ಲಿ ಅದು ಅಸಾಮಾನ್ಯ ಪ್ರದರ್ಶನವನ್ನೇ ನೀಡಬೇಕೆಂಬುದರಲ್ಲಿ ಎರಡು ಮಾತಿಲ್ಲ.

ಸೂಪರ್‌-12 ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅತ್ಯಧಿಕ 4 ಜಯದೊಂದಿಗೆ 8 ಅಂಕ ಗಳಿಸಿದ ಹೆಗ್ಗಳಿಕೆ ಭಾರತದ್ದು. ಇಂಗ್ಲೆಂಡ್‌ ಮೂರನ್ನು ಗೆದ್ದು, ಒಂದರಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದು ಗೊಂಡಿದೆ. ತಂಡದ ಒಟ್ಟು ಸಾಮರ್ಥ್ಯವನ್ನು ಅವ ಲೋಕಿಸು ವಾಗ ಬಟ್ಲರ್‌ ಬಳಗದ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದನ್ನು ಒಪ್ಪಲೇಬೇಕು. ತಂಡದ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಇದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.

ಸಮಬಲದ ಸಾಧನೆ
ಈವರೆಗಿನ ಟಿ20 ವಿಶ್ವಕಪ್‌ ಇತಿಹಾಸವನ್ನು ಅವಲೋಕಿಸುವಾಗ ಭಾರತ, ಇಂಗ್ಲೆಂಡ್‌ ಸಮಬಲದ ಸಾಧನೆ ದಾಖಲಿಸಿರುವುದನ್ನು ಮರೆಯುವಂತಿಲ್ಲ. ಇತ್ತಂಡಗಳು ಒಮ್ಮೆ ಚಾಂಪಿಯನ್‌ ಆಗಿದ್ದು, ಮತ್ತೊಮ್ಮೆ ಫೈನಲ್‌ನಲ್ಲಿ ಮುಗ್ಗರಿಸಿವೆ.

ಭಾರತ 2007ರ ಚೊಚ್ಚಲ ಟಿ20 ವಿಶ್ವಕಪ್‌ ಎತ್ತಿ ಮೆರೆದಾಡಿದ ತಂಡ. ಅನಂತರ 2014ರ ಫೈನಲ್‌ನಲ್ಲಿ ಶ್ರೀಲಂಕಾಕ್ಕೆ 6 ವಿಕೆಟ್‌ಗಳಿಂದ ಶರಣಾಯಿತು.

Advertisement

ಇನ್ನೊಂದೆಡೆ ಇಂಗ್ಲೆಂಡ್‌ 2010ರಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ಟಿ20 ವಿಶ್ವ ಚಾಂಪಿಯನ್‌ ಎನಿಸಿತು. ಇದು ಕ್ರಿಕೆಟ್‌ ಜನಕರೆಂಬ ಖ್ಯಾತಿಯ ಇಂಗ್ಲೆಂಡ್‌ಗೆ ಒಲಿದ ಮೊದಲ ವಿಶ್ವಕಪ್‌ ಕೂಡ ಹೌದು. 2016ರಲ್ಲಿ ಮತ್ತೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತಾದರೂ ಅಲ್ಲಿ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್‌ಗಳಿಂದ ತಲೆ ಬಾಗಿತು. 3ನೇ ಫೈನಲ್‌ ಟಿಕೆಟ್‌ ಯಾರಿಗೆಂಬುದು ಗುರುವಾರದ ಕುತೂಹಲ.

ಹತ್ತಿರ ಸುಳಿಯದ ಐಸಿಸಿ ಟ್ರೋಫಿ
ಭಾರತ ಐಸಿಸಿ ಟ್ರೋಫಿಯೊಂದನ್ನು ಗೆಲ್ಲದೆ ಹತ್ತಿರ ಹತ್ತಿರ ದಶಕವೊಂದು ಸಮೀಪಿಸಿದೆ. 2013ರ ಬಳಿಕ ಸೆಮಿಫೈನಲ್‌, ಫೈನಲ್‌ ಗಡಿಗಳಲ್ಲೇ ಟೀಮ್‌ ಇಂಡಿಯಾದ ಅಭಿಯಾನ ಕೊನೆಗೊಳ್ಳುತ್ತಿದೆ. 2014ರ ಟಿ20 ವಿಶ್ವಕಪ್‌ ಫೈನಲ್‌, 2016ರ ಟಿ20 ವಿಶ್ವಕಪ್‌ ಸೆಮಿಫೈನಲ್‌, 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌, 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌… ಹೀಗೆ ಸಾಗುತ್ತ ಬಂದಿದೆ ಭಾರತದ ಐಸಿಸಿ ಟೂರ್ನಿಗಳ ಯಾನ. ಇದು ಇಲ್ಲಿಂದಾಚೆ ವಿಸ್ತರಿಸಲ್ಪಡಬೇಕಿದೆ.

ಇಲ್ಲಿ ಇನ್ನೊಂದು ಅಂಶವನ್ನು ಉಲ್ಲೇಖಿಸಬೇಕು. ಮೇಲಿನೆಲ್ಲ ಕೂಟಗಳಲ್ಲಿ ರೋಹಿತ್‌ ಶರ್ಮ ಆಡಿದ್ದರೂ ಅವರು ತಂಡವನ್ನು ಮುನ್ನಡೆಸಿರಲಿಲ್ಲ. ಈ ಬಾರಿ ಟೀಮ್‌ ಇಂಡಿಯಾದ ನಾಯಕತ್ವ ಹೊತ್ತಿದ್ದಾರೆ. ಅವರ ಅದೃಷ್ಟ ಹೇಗಿದೆ ಎಂಬುದು ಇಲ್ಲಿ ತಿಳಿಯಲಿದೆ. ವಿಪರ್ಯಾಸವೆಂದರೆ, ಈ ಸರಣಿಯಲ್ಲಿ ರೋಹಿತ್‌ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟಕ್ಕೆ ಏರದಿರುವುದು. 5 ಪಂದ್ಯಗಳಲ್ಲಿ ಅವರು ಗಳಿಸಿದ್ದು 89 ರನ್‌ ಮಾತ್ರ. ಅದೂ ಅಲ್ಲದೇ ನಿನ್ನೆಯ ಅಭ್ಯಾಸದ ವೇಳೆ ಮುಂಗೈಗೆ ಏಟು ಮಾಡಿಕೊಂಡಿದ್ದಾರೆ. ಇದೇನೂ ಗಂಭೀರ ಸಮಸ್ಯೆಯಲ್ಲ. ಸುನೀಲ್‌ ಗಾವಸ್ಕರ್‌ ಹೇಳಿದಂತೆ, “ರೋಹಿತ್‌ ತಮ್ಮ ರನ್ನುಗಳನ್ನು ಕೊನೆಯ ಎರಡು ಪಂದ್ಯಗಳಿಗೆ ಮೀಸಲಿರಿಸಿದ್ದಾರೆ’ ಎಂದು ಭಾವಿಸಲಡ್ಡಿಯಿಲ್ಲ. ಮುಖ್ಯವಾಗಿ, ಭಾರತ ಪವರ್‌ ಪ್ಲೇಯಲ್ಲಿ ಬ್ಯಾಟಿಂಗ್‌ ಪವರ್‌ ತೋರಬೇಕಿದೆ.

ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಈವರೆಗೆ ಮಿಂಚಿ ದವರು ಮೂವರು ಮಾತ್ರ-ಸೂರ್ಯಕುಮಾರ್‌ ಯಾದವ್‌, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌. ಈ ಮೂವರೂ ಸೆಮಿಫೈನಲ್‌ನಲ್ಲಿ ತಮ್ಮ ಫಾರ್ಮ್ ಮುಂದುವರಿಸಬೇಕಿದೆ. ಕೊಹ್ಲಿ 246 ರನ್ನುಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ. 360 ಡಿಗ್ರಿ ಬ್ಯಾಟರ್‌ ಸೂರ್ಯಕುಮಾರ್‌ 225 ರನ್‌ ಬಾರಿಸಿದ್ದಾರೆ. ರಾಹುಲ್‌ ಮೊದಲೆರಡು ಪಂದ್ಯಗಳಲ್ಲಿ ಒಂದಂಕಿಗೆ ಆಟ ಮುಗಿಸಿದರೂ ಅನಂತರದ 2 ಪಂದ್ಯಗಳಲ್ಲಿ ಸತತ ಅರ್ಧ ಶತಕ ಹೊಡೆದು ಆಪತ್ಬಾಂಧವರಾಗಿದ್ದಾರೆ.

ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ ಕೂಡ ತಮ್ಮ ಛಾಪು ಮೂಡಿಸಿಲ್ಲ. ಕಾರ್ತಿಕ್‌ ಬದಲು ಅವಕಾಶ ಪಡೆದ ರಿಷಭ್‌ ಪಂತ್‌ ಜಿಂಬಾಬ್ವೆ ವಿರುದ್ಧ ವಿಫ‌ಲರಾಗಿದ್ದಾರೆ. ಆದರೂ ಸೆಮಿಫೈನಲ್‌ನಲ್ಲಿ ಪಂತ್‌ ಮುಂದುವರಿಯಬೇಕೆನ್ನುವುದು ಅನೇಕರ ಅಪೇಕ್ಷೆ. ಅಡಿಲೇಡ್‌ ಟ್ರ್ಯಾಕ್‌ನಲ್ಲಿ 170ರ ಮೊತ್ತಕ್ಕೇನೂ ಕೊರತೆ ಇಲ್ಲವಾದ್ದರಿಂದ ಭಾರತ ತನ್ನ ಸಂಪೂರ್ಣ ಬ್ಯಾಟಿಂಗ್‌ ಸಾಮರ್ಥ್ಯವನ್ನು ತೆರೆದಿಡಬೇಕಿದೆ.

ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌, ಶಮಿ, ಅರ್ಷದೀಪ್‌, ಪಾಂಡ್ಯ, ಅಶ್ವಿ‌ನ್‌ ಅವರ ಕಾಂಬಿನೇಶನ್‌ ಇರಬಹುದು. ಚಹಲ್‌, ಹರ್ಷಲ್‌ ಪಟೇಲ್‌ ಕೂಡ ರೇಸ್‌ ನಲ್ಲಿದ್ದಾರೆ. ಇಂಗ್ಲೆಂಡ್‌ ಸ್ಪಿನ್‌ಗೆ ಆಡದಿರುವುದರಿಂದ ಚಹಲ್‌ಗೆ ಅವಕಾಶ ನೀಡಿದರೆ ಉತ್ತಮ ಎಂಬುದೊಂದು ಲೆಕ್ಕಾಚಾರ.

ಛಾಪು ಮೂಡಿಸದ ಇಂಗ್ಲೆಂಡ್‌
ಇಂಗ್ಲೆಂಡ್‌ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿಯೇ ಇದೆ. ಬಟ್ಲರ್‌, ಹೇಲ್ಸ್‌, ಸ್ಟೋಕ್ಸ್‌, ಲಿವಿಂಗ್‌ಸ್ಟೋನ್‌ ಅವ ರೆಲ್ಲ ಎಷ್ಟೇ ದೊಡ್ಡ ಮೊತ್ತವನ್ನು ಬೆನ್ನಟ್ಟಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮತ್ತೋರ್ವ ಬ್ಯಾಟರ್‌ ಡೇವಿಡ್‌ ಮಲಾನ್‌ ಮತ್ತು ವೇಗಿ ಮಾರ್ಕ್‌ ವುಡ್‌ ಗಾಯಾಳಾಗಿರುವುದು ದೊಡ್ಡ ಹಿನ್ನಡೆ. ಸ್ಟೋಕ್ಸ್‌, ಲಿವಿಂಗ್‌ಸ್ಟೋನ್‌ ಆಲ್‌ರೌಂಡ್‌ ಪಾತ್ರವನ್ನೂ ನಿಭಾಯಿಸಬಲ್ಲರು.

ಆದಿಲ್‌ ರಶೀದ್‌, ಸ್ಯಾಮ್‌ ಕರನ್‌, ಕ್ರಿಸ್‌ ವೋಕ್ಸ್‌ ಬೌಲಿಂಗ್‌ ವಿಭಾಗದ ಪ್ರಮುಖರು. ವುಡ್‌ ಆಡದಿದ್ದರೆ ಜೋರ್ಡನ್‌ ಅಥವಾ ಮಿಲ್ಸ್‌ ದಾಳಿಗೆ ಇಳಿಯಬಹುದು. ಆದರೆ ಇವರ್ಯಾರೂ ಈ ಕೂಟದಲ್ಲಿ ತಮ್ಮ ನೈಜ ಛಾಪು ಮೂಡಿಸಿಲ್ಲ! ಭಾರತ ಇದರ ಲಾಭವನ್ನು ಎತ್ತಬೇಕಿದೆ.

ಇಂದು ಸೆಮಿಫೈನಲ್‌-2
ಭಾರತ-ಇಂಗ್ಲೆಂಡ್‌
ಸ್ಥಳ: ಅಡಿಲೇಡ್‌
ಆರಂಭ: ಅ. 1.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಭಾರತ ಸಾಗಿ ಬಂದ ಹಾದಿ
1. ಪಾಕಿಸ್ಥಾನ ವಿರುದ್ಧ 4 ವಿಕೆಟ್‌ ಜಯ
2. ನೆದರ್ಲೆಂಡ್ಸ್‌ ವಿರುದ್ಧ 65 ರನ್‌ ಜಯ
3. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ ಸೋಲು
4. ಬಾಂಗ್ಲಾದೇಶ ವಿರುದ್ಧ 5 ರನ್‌ ಜಯ
5. ಜಿಂಬಾಬ್ವೆ ವಿರುದ್ಧ 71 ರನ್‌ ಜಯ

ಇಂಗ್ಲೆಂಡ್‌ ಸಾಗಿ ಬಂದ ಹಾದಿ
1. ಅಫ್ಘಾನಿಸ್ಥಾನ ವಿರುದ್ಧ 5 ವಿಕೆಟ್‌ ಜಯ
2. ಐರ್ಲೆಂಡ್‌ ವಿರುದ್ಧ 5 ರನ್‌ ಸೋಲು
3. ಆಸ್ಟ್ರೇಲಿಯ ಪಂದ್ಯ ರದ್ದು
4. ನ್ಯೂಜಿಲ್ಯಾಂಡ್‌ ವಿರುದ್ಧ 20 ರನ್‌ ಜಯ
5. ಶ್ರೀಲಂಕಾ ವಿರುದ್ಧ 4 ವಿಕೆಟ್‌ ಜಯ

ಭಾರತ-ಇಂಗ್ಲೆಂಡ್‌: ಟಿ20 ವಿಶ್ವಕಪ್‌ ಫ‌ಲಿತಾಂಶ
ವರ್ಷ         ಫ‌ಲಿತಾಂಶ
2007     ಭಾರತಕ್ಕೆ 18 ರನ್‌ ಜಯ
2009    ಇಂಗ್ಲೆಂಡ್‌ಗೆ 3 ರನ್‌ ಜಯ
2012     ಭಾರತಕ್ಕೆ 90 ರನ್‌ ಜಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next