Advertisement

ಇಂದು ದತ್ತ ಜಯಂತಿ: ಸರ್ವದೇವತಾ ಸ್ವರೂಪಿ, ವಿಶ್ವಗುರು ಶ್ರೀದತ್ತ

01:22 AM Dec 14, 2024 | Team Udayavani |

ದತ್ತ ಅಥವಾ ದತ್ತಗುರು ಓರ್ವ ಸನ್ಯಾಸಿ, ಯೋಗಗುರು ಎಂದು ಹಿಂದೂ ಧರ್ಮದಲ್ಲಿನ ಉಲ್ಲೇಖ. ದತ್ತನನ್ನು ಓರ್ವ ದೇವರೆಂದು ಗುರುತಿಸುತ್ತಾರೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವನ ಅವತಾರವೆಂದೂ ಪೂಜಿಸಲ್ಪಡುತ್ತಾನೆ. ಪ್ರಭಾತ ಸ್ತೋತ್ರನಿಧಿಯಲ್ಲಿ – ಅದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವ ಸದಾಶಿವಃ ಮೂರ್ತಿತ್ರಯ ಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ || ಎಂದಿದೆ.

Advertisement

ಅವಧೂತ ಸದಾನಂದ ಪರಬ್ರಹ್ಮ ಸ್ವರೂಪಿಣೇ ಎಂದು ದತ್ತನನ್ನು ಅವಧೂತ ಎಂದು ವರ್ಣಿಸುತ್ತದೆ ಶ್ರೀನಾರದ ಪುರಾಣ.
“ಸುಲಭದಿ ಒಲಿಯುವ ಕರುಣಾನಿಧಿಯು ಭಜಕರಿಗಾಗಿಯೇ ಬಂದಿಹನು ಪ್ರೇಮದಿ ಕರೆಯಲು ಬೇಗನೆ ಬರುವನು ಸೌಖ್ಯದ ಸುರಿಮಳೆ ಸುರಿಸುವನು..’ ಎಂದು ದತ್ತನ ಮಹಿಮೆಯನ್ನು ಕೊಂಡಾಡುತ್ತಾರೆ. ದತ್ತನೇ ಬ್ರಹ್ಮ. ದತ್ತನೇ ವಿಷ್ಣು. ದತ್ತನೇ ಶಿವಶಂಕರನು. ದತ್ತನೇ ಪುಟ್ಟಿಸಿ ಎಲ್ಲರ ಕಾಯ್ವನು … ಧರ್ಮವು ಕುಂದಲು ಪಾಪವು ಬೆಳೆಯಲು ದೇವನು ತಾನವತರಿಸುವನು. ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಧರ್ಮದ ಕಟ್ಟನು ಕಾಯುವನು. ದತ್ತನೇ ರಾಮ, ದತ್ತನೇ ಕೃಷ್ಣ, ದತ್ತನೇ ಲಕ್ಷ್ಮೀವಲ್ಲಭ, ದತ್ತನೇ ಪಂಡರಿ, ದತ್ತನೇ ವಿಠಲ, ದತ್ತನೇ ಕಾಶಿಯ ವಿಶ್ವೇಶ್ವರ. ದತ್ತನೇ ಲಕ್ಷ್ಮೀ, ಕಾಳೀ, ಶಾರದೆ… ದತ್ತನೇ ಸರ್ವಚರಾಚರ.

ದತ್ತ ಗುರುವಿನ ದಿವ್ಯ ದಿನಚರಿ!
ಸಹ್ಯಾದ್ರಿ ಪರ್ವತದಲ್ಲಿ ವಾಸ. ಮಹೂರ ಗಡ ದೊಳಗೆ ಪ್ರತೀದಿನ ನಿದ್ದೆ. ಬೆಳಗ್ಗೆ ಎದ್ದೊಡನೆ ಗಂಗೆ ಯೊಳು ಸ್ನಾನ. ಕುರುಕ್ಷೇತ್ರದಲ್ಲಿ ಆಚಮನ! ಕೃಷ್ಣವೇಣಿಯ ದಡದಲ್ಲಿ ಭಸ್ಮಧಾರಣೆ. ಸಂಜೆ ಕರಹಾಡ ಗ್ರಾಮ. ಪಂಢರಿಯಪುರದಲ್ಲಿ ಸುಗಂ ಧವಸ್ತುಗಳ ಧಾರಣೆ. ಗಾಣಗಾಪುರದಲ್ಲಿ ಧ್ಯಾನ. ಕೊಲ್ಹಾಪುರದಲ್ಲಿ ಮಧುಕರಿಯ ಬೇಡುವನು. ಸಾರಪುರದಲ್ಲಿ ಭೋಜನ. ಮಹೂರದಲ್ಲಿ ಸ್ವಲ್ಪ ವಿಶ್ರಾಂತಿ. ಸಂಜೆಯಲಿ ಹೊರಡುತ್ತಾನೆ ಪಶ್ಚಿಮ ಸಾಗರಕ್ಕೆ. ಗೋಕರ್ಣ ಮಹಾಬಲೇಶ್ವರನೆಡೆಗೆ. ಅಲ್ಲಲ್ಲಿ ನಡುನಡುವೆ ಭಕ್ತರಿಚ್ಛಿಸಿದಂತೆ ಬೇಕಾದ ಕಡೆಯಲ್ಲಿ ಬೇಕಾದ ವೇಳೆಯಲ್ಲಿ ತತ್ಕಾಲ ಪೋಗುವನು ಭಾವುಕರ ಪೊರೆಯುವನು ಭಕ್ತವತ್ಸಲನೀತ ಕರೆದೊಡನೆ ಬರುತಿಹನು.
ಪ್ರತಿಮಾಶಾಸ್ತ್ರದಲ್ಲಿ ಗುರು ದತ್ತಾತ್ರೇಯ!

ದತ್ತಾತ್ರೇಯನ ಕುರಿತಾದ ಪ್ರತಿಮಾಶಾಸ್ತ್ರ ಪ್ರದೇಶದಿಂದ, ಪ್ರದೇಶಕ್ಕೆ ಭಿನ್ನವಾಗಿದೆ. ಮೂರು ತಲೆ ಆರು ಕೈ ದತ್ತಾತ್ರೇಯನ ಸಾಮಾನ್ಯ ಸ್ವರೂಪ. ಮೂರು ತಲೆ ತ್ರಿಮೂರ್ತಿಗಳನ್ನು ಸೂಚಿಸುತ್ತದೆ. ಪ್ರತೀ ಒಂದು ಜತೆ ಕರಗಳಲ್ಲಿ ತ್ರಿಮೂರ್ತಿಗಳ ಆಯುಧಗಳಿವೆ. ನಾಲ್ಕು ನಾಯಿಗಳು ಮತ್ತು ಒಂದು ದನ, ನಾಲ್ಕು ವೇದಗಳು ಮತ್ತು ಭೂಮಿ ತಾಯಿಯನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಮಹಾರಾಷ್ಟ್ರ, ವಾರಾಣಸಿ, ಹಿಮಾಲಯ ದೇವಸ್ಥಾನಗಳಲ್ಲಿ ಒಂದು ತಲೆ, ಎರಡು ಕೈ, ನಾಲ್ಕು ನಾಯಿ ಮತ್ತು ಒಂದು ದನವುಳ್ಳ ದತ್ತನ ಪ್ರತಿಮೆಗಳನ್ನು ಕಾಣಬಹುದು. ಶೈವರಲ್ಲಿ ದತ್ತಾತ್ರೇಯನು ಆದಿಗುರು. ಆದಿನಾಥ ಸಂಪ್ರದಾಯದಲ್ಲಿ ಆತ ಯೋಗಗುರು. ಸಂತ ತುಕಾರಾಮರ ಗೀತೆಗಳಲ್ಲಿ ದತ್ತಾತ್ರೇಯನ ಸುಂದರ ವರ್ಣನೆಗಳಿವೆ. ಅದ್ವೈತ ವೇದಾಂತದ ಪ್ರಮುಖ ಗ್ರಂಥ ಅವಧೂತಗೀತೆ ದತ್ತಾತ್ರೇಯನ ಕುರಿತಾಗಿಯೇ ಇದೆ.

ಪುರಾಣಗಳು ತಿಳಿಸುವಂತೆ ದತ್ತಾತ್ರೇಯನು ಅನಸೂಯ ಮತ್ತು ಅತ್ರಿ ಮಹರ್ಷಿಯ ಪುತ್ರ. ಕಾಶ್ಮೀರದ ಅರಣ್ಯ ಭಾಗವಾದ ಅಮರನಾಥದಲ್ಲಿ ಜನನ. ದುರ್ವಾಸ ಮತ್ತು ಚಂದ್ರ ಸಹೋದರರು. ದತ್ತನು ಚಿಕ್ಕಂದಿನಿಂದಲೇ ಅಲೆದಾಡುತ್ತಿದ್ದು ಅವನ ಹೆಜ್ಜೆಗುರುತನ್ನು ಗಿರ್ನಾರ್‌ ಪರ್ವತ ಪ್ರದೇಶದಲ್ಲಿ ಕಾಣಬಹುದು. ಪರಶುರಾಮನು, ದತ್ತಾತ್ರೇಯನನ್ನು ಗಂಧಮಂದಣ ಪರ್ವತದಲ್ಲಿ ತಪಸ್ಸನ್ನಾಚರಿಸುತ್ತಿದ್ದಾನೆ ಎಂದು ಹೇಳಿದ ಉಲ್ಲೇಖ ತ್ರಿಪುರ ರಹಸ್ಯದಲ್ಲಿದೆ.

Advertisement

ಸ್ವಾಧ್ಯಾಯಿ ದತ್ತಾತ್ರೇಯನಿಗೆ ನಿಸರ್ಗದ ಅಂಶಗಳೇ 24 ಗುರುಗಳು. ಭೂಮಿ, ಗಾಳಿ, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಟಾವು, ಜೇನುನೊಣ, ಜೇನುಸಾಕಣೆದಾರ, ಗಿಡುಗ, ಸಮುದ್ರ, ಪತಂಗ, ಆನೆ, ಜಿಂಕೆ, ಮೀನು, ವೇಶ್ಯೆ, ಮಗು, ಕನ್ಯೆ, ಸರ್ಪ, ಜೇಡ ಮತ್ತು ಕಂಬಳಿಹುಳು ಇವೇ 24 ಗುರುಗಳು.

ಮರಾಠಿ ಪ್ರದೇಶಗಳಲ್ಲಿ ಕಂಡುಬರುವ ದತ್ತಾತ್ರೇಯನ ಪ್ರತಿಮೆಯಲ್ಲಿ ಮೂರು ಶಿರಗಳು(ತ್ರಿಮೂರ್ತಿಗಳ ಪ್ರತಿನಿಧಿತ್ವ)ಆರು ಕರಗಳು, ಕೆಳಗಿನ ಜತೆ ಕೈಗಳಲ್ಲಿ ಮಾಲೆ, ಕಮಂಡಲು, ಮಧ್ಯದ ಜತೆ ಕರಗಳಲ್ಲಿ ಡಮರು ಮತ್ತು ತ್ರಿಶೂಲ ಮತ್ತು ಮೇಲಿನ ಕರಗಳಲ್ಲಿ ಶಂಖಚಕ್ರಗಳು. ಮಧ್ಯಕಾಲೀನ ಹೆಚ್ಚಿನ ದೇವಾಲಯಗಳಲ್ಲಿ ದತ್ತಾತ್ರೇಯನಿಗೆ ಒಂದೇ ತಲೆ. ಮಹುರ್‌ ಮತ್ತು ಪಂಡರಾಪುರದಲ್ಲಿದೆ. ಅಗ್ನಿಪುರಾಣವು ದತ್ತಾತ್ರೇಯ ಶಿಲ್ಪರಚನೆಯಲ್ಲಿ ದತ್ತಾತ್ರೇಯನಿಗೆ ಒಂದು ತಲೆ ಮತ್ತು ಎರಡು ಕೈಗಳನ್ನು ಮಾತ್ರ ತಿಳಿಸಿದೆ. ವಾರಾಣಸಿ, ನೇಪಾಲ ಮತ್ತು ಉತ್ತರ ಹಿಮಾಲಯ ಪ್ರಾಂತಗಳಲ್ಲಿ, 15 ನೆ ಶತಮಾನದ ದತ್ತಾತ್ರೇಯ ವಿಗ್ರಹಗಳು ಒಂದು ಶಿರವುಳ್ಳದ್ದು. ನಾಲ್ಕು ಶ್ವಾನ ಮತ್ತು ಒಂದು ಹಸು ದತ್ತಾತ್ರೇಯ ಪ್ರತಿಮಾಶಾಸ್ತ್ರದಲ್ಲಿ ಒಂದು ವಿಶಿಷ್ಟ ಲಕ್ಷಣ.

ಶ್ವಾನಗಳು, ನಾಲ್ಕು ವೇದಗಳು ಮತ್ತು ಕಾಮಧೇನು ಭೂಮಂಡಲವನ್ನು ಸಂಕೇತಿಸುತ್ತದೆ. ನಂಬಿಕಸ್ಥ, ಎಲ್ಲ ಪರಿಸರಸ್ನೇಹೀ, ಜತೆಗಾರ ಮತ್ತು ರಕ್ಷಕ, ಶ್ವಾನಗಳ ಸ್ವಭಾವ ಮತ್ತು ಪೋಷಣೆಯನ್ನು ಮಾಡುವುದು ಹಸು. ಬಾದಾಮಿ ದೇವಾಲಯದಲ್ಲಿ (10-12 ನೇ ಶತಮಾನ) ದತ್ತಾತ್ರೇಯನಿಗೆ ವಿಷ್ಣುವಿನಂತೆ ಏಕ ಶಿರ ಮತ್ತು ನಾಲ್ಕು ಕೈಗಳು. ಪದ್ಮಾಸನದಲ್ಲಿ ಕುಳಿತಿರುವ ಭಂಗಿಯಲ್ಲಿದೆ. ತ್ರಿಮೂರ್ತಿಗಳ ವಾಹನ ಹಂಸ, ಗರುಡ ಮತ್ತು ನಂದಿಯ ಶಿಲ್ಪದೊಂದಿಗಿದೆ. ಬಲಬದಿ ರಚನೆ ಶಿವನದ್ದು ಎಡಬದಿ ವಿಷ್ಣುವಿನದ್ದು. ರಾಜಸ್ಥಾನದ ಅಜೆ¾àರಾದಲ್ಲೂ ಇಂತಹುದೇ ಶಿಲ್ಪವನ್ನು ಕಾಣಬಹುದು. ದತ್ತಾತ್ರೇಯನಿಗೆ ಸರಿಸವನಾದ ತ್ರಿಮೂರ್ತಿಗಳನ್ನು ಹರಿಹರಪಿತಾಮಹ ಎಂದು ಕೆಲವು ಪ್ರತಿಮಾಶಾಸ್ತ್ರಕಾರರು ಸಂಬೋ ಧಿಸುತ್ತಾರೆ. ದತ್ತಾತ್ರೇಯನ ಮೂರು ಕೈಗಳು ಸತವ ರಜಸ್‌ ತಮಸ್‌ ಹೀಗೆ, ತ್ರಿಗುಣಗಳ ಪ್ರತೀಕ (ಸಾಂಖ್ಯದ ಗುಣಗಳು). ಯಮ, ನಿಯಮ, ಶಮ, ಧಮ, ದಯಾ ಮತ್ತು ಶಾಂತಿ ಇವು ಆರು ಕರಗಳಲ್ಲಿ ಪ್ರತಿನಿಧಿಸಲ್ಪಡುತ್ತವೆ. ಕಾಮಧೇನು, ಪಂಚಭೂತಗಳನ್ನು ಸಂಕೇತಿಸುತ್ತದೆ. ನಾಲ್ಕು ಶ್ವಾನಗಳು ಮನುಷ್ಯನ ಆಂತರಿಕ ಶಕ್ತಿಗಳನ್ನು ಸೂಚಿಸುವುದು. ಇಚ್ಛೆ, ವಾಸನೆ, ಆಸೆ, ತ್ರಿಷ್ಣ. ಯೋಗ ಗುರುವಿನ ಎಲ್ಲ ಲಕ್ಷಣಗಳು ದತ್ತಾತ್ರೇಯನಲ್ಲಿದೆ. ಆದ್ದರಿಂದ ಆತ ಗುರು ದತ್ತಾತ್ರೇಯ!

ಶ್ರೀದತ್ತನು ಏಕತ್ವದ ಪ್ರತಿನಿಧಿ, ಸರ್ವದೇವತಾ ಸ್ವರೂಪಿ. ಸರ್ವಶಕ್ತಿ ಸಂಪನ್ನನಾದ ಶ್ರೀದತ್ತನ ಆರಾಧನೆ ಮಾಡಿದರೆ ಸಕಲ ದೇವತೆಗಳ ಆರಾಧನೆ ಮಾಡಿದ ಫ‌ಲ ಲಭಿಸುತ್ತದೆ. ದತ್ತ ಜಯಂತಿಯಂದು ಗುರುವಿನ ಆರಾಧನೆಗೇ ಪ್ರಾಶಸ್ತ್ಯ. ಶ್ರೀ ಗುರು ಚರಿತ್ರೆ ಪಾರಾಯಣ, ಶ್ರೀ ದತ್ತ ಜಪ ಪಠಣ, ಶ್ರೀ ದತ್ತಯಾಗ, ರುದ್ರಾಭಿಷೇಕ,ಜನ್ಮೋತ್ಸವ ಆಚರಣೆ, ಪಲ್ಲಕಿ ಉತ್ಸವ, ದಿಂಡಿ, ಭಜನೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ತೊಡಗಿಕೊಳ್ಳುವ ಮೂಲಕ ಭಕ್ತರು ಶ್ರೀದತ್ತನ ಕೃಪೆಗೆ ಪಾತ್ರರಾಗುತ್ತಾರೆ.

-ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next