Advertisement

ದೇವಸ್ಥಾನ, ಮನೆಗಳಲ್ಲಿ ಹೊಸ ವರ್ಷಾರಂಭಕ್ಕೆ ಸಿದ್ಧತೆ

10:00 AM Apr 06, 2019 | Team Udayavani |

ಮಹಾನಗರ : ಹಿಂದೂಗಳ ಹೊಸ ವರ್ಷವೆಂದೇ
ಆಚರಿಸಲ್ಪಡುವ ಯುಗಾದಿ ಹಬ್ಬ ಮತ್ತೆ ಬಂದಿದ್ದು, ಶನಿವಾರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಗರ ಸಜ್ಜಾಗಿದೆ. ಚಾಂದ್ರಮಾನ ಯುಗಾದಿ ಆಚರಣೆಗೆಂದೇ ವಿವಿಧ ದೇವಾಲಯ
ಗಳಲ್ಲಿ ವಿಶೇಷ ಸಿದ್ಧತೆಗಳು ನಡೆದಿವೆ.

Advertisement

ಚಂದ್ರನ ಚಲನೆಯನ್ನು ಅನುಸರಿಸಿ, ಅಮವಾಸ್ಯೆ, ಹುಣ್ಣಿಮೆಗಳ ಆಧಾರದ ಮೇಲೆ, ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು. ಹಿಂದೂ ಧರ್ಮದಲ್ಲಿ ಚಾಂದ್ರಮಾನ ಯುಗಾದಿಯನ್ನು ಹೊಸ ವರ್ಷಾರಂಭ ಎಂದೂ ಆಚರಿಸಲಾಗುತ್ತದೆ. ಚಾಂದ್ರಮಾನ ಯುಗಾದಿಗೆ ವಿಶಿಷ್ಟ ಮಹತ್ವ ಇರುವುದರಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಶನಿವಾರ ನಡೆಯಲಿವೆ.

ನಗರದ ಶ್ರೀ ಗುರುಮಠ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಎ. 6ರಿಂದ 15ರ ತನಕ ಹತ್ತು ದಿನ ಪರ್ಯಂತ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. 6ರಂದು ಬೆಳಗ್ಗೆ
11ಕ್ಕೆ ಧ್ವಜಾರೋಹಣಗೊಳ್ಳಲಿದೆ. 10ರಂದು ಶ್ರೀ ಗುರು ಮಠದ ಗುರು, ವೀರಭದ್ರ ದೇವರ ಪಂಚಮಿ ಉತ್ಸವ, ಬೀದಿ ಸವಾರಿ, 12ರಂದು ರಾತ್ರಿ 8ಕ್ಕೆ ಅನಂತಶ್ರೀವಿಭೂಷಿತ ಕಾಳ ಹಸ್ತೇಂದ್ರ
ಸರಸ್ವತೀ ಸ್ವಾಮೀಜಿಯವರಿಂದ ಆಶೀರ್ವಚನ, 14ರಂದು
ಕವಾಟೋದ್ಘಾಟನೆ ನಡೆಯಲಿದೆ. ಹತ್ತು ದಿನಗಳ ಕಾಲ ವಿವಿಧ ಪೂಜೆ ಪುನಸ್ಕಾರಾದಿಗಳು ಜರಗಲಿವೆ.

ಕಡ್ಲೆಬೇಳೆ ಪಾಯಸ ವಿಶೇಷ
ವಿಶ್ವಕರ್ಮ ಮತ್ತು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ವಿಶೇಷ. ಈ ಹಬ್ಬದೊಡನೆ ಚೈತ್ರಮಾಸ, ಹೊಸ ವರ್ಷ ಆಚರಿಸುವುದು ವಿಶೇಷ.
ವಿಶ್ವಕರ್ಮ ಸಮುದಾಯದಲ್ಲಿ ಯುಗಾದಿಯ ದಿನ ಬೆಳಗ್ಗೆ ಬೇಗನೆ
ಎದ್ದು, ಸ್ನಾನ ಮಾಡಿ, ಮನೆಗಳನ್ನು ಸಿಂಗರಿಸಲಾಗುತ್ತದೆ. ದೇವರಿಗೆ
ನೈವೇದ್ಯ ಮಾಡಿ ಪ್ರಸಾದ ಇಟ್ಟು ಆರತಿ ಮಾಡಲಾಗುತ್ತದೆ. ಕಡ್ಲೆಬೇಳೆ ಪಾಯಸ ಈ ದಿನದ ವಿಶೇಷವಾಗಿರುತ್ತದೆ. ಮನೆಯ ಹಿರಿಯರಿಗೆ ನಮಸ್ಕರಿಸುವುದು ಪದ್ಧತಿ. ಅನಂತರ ಹೊಸ ಬಟ್ಟೆ ತೊಟ್ಟು, ಮನೆ ಮಂದಿ ಹಬ್ಬದ ಖಾದ್ಯಗಳನ್ನು ಸವಿಯುತ್ತಾರೆ.

ವಿವಿಧೆಡೆ ವಿಶೇಷ ಪೂಜೆ
ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪನಿವಾರ
ಪೂಜೆ ನಡೆಯಲಿದೆ. ಅವಲಕ್ಕಿ, ಕಡಲೆ, ಉದ್ದಿನಬೇಳೆ
ಮುಂತಾದವುಗಳನ್ನು ಮಿಶ್ರಣ ಮಾಡಿ ನೈವೇದ್ಯ ತಯಾರಿಸಿದ
ಪ್ರಸಾದವನ್ನು ಭಕ್ತರಿಗೆ ಹಂಚಲಾಗುತ್ತದೆ. ಕದ್ರಿ ಶ್ರೀ
ಮಂಜುನಾಥ ದೇವಸ್ಥಾನ, ಶರವು ಶ್ರೀ ಮಹಾಗಣಪತಿ
ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ,
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಹಿತ ಇತರ
ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆಗಳು ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next