Advertisement

ಆಡಳಿತ-ಪ್ರತಿಪಕ್ಷ ನಡುವೆ ತೀವ್ರ ಜಟಾಪಟಿ ನಿರೀಕ್ಷೆ

06:00 AM Jul 09, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಅಪಸ್ವರ, ಸಾಲ ಮನ್ನಾ ಘೋಷಣೆ ಎಲ್ಲ ರೈತರಿಗೂ ಉಪಯೋಗವಾಗದು ಎಂಬ ವಿಚಾರ ಅಧಿವೇಶನದಲ್ಲಿ ಹೋರಾಟದ ಸ್ವರೂಪ ಪಡೆಯುವ ನಿರೀಕ್ಷೆಯಿದೆ.

Advertisement

ಸೋಮವಾರದಿಂದ ಬಜೆಟ್‌ ಮೇಲಿನ ಚರ್ಚೆ ಪ್ರಾರಂಭವಾಗಲಿದ್ದು ಆಡಳಿತ ಹಾಗೂ ಪ್ರತಿಪಕ್ಷ
ನಡುವೆ ಜಟಾಪಟಿಗೆ ವಿಧಾನಸಭೆ ಹಾಗೂ ಪರಿಷತ್‌ ವೇದಿಕೆಯಾಗಲಿದ್ದು ಸಾಲಮನ್ನಾ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿರುವ ಬಿಜೆಪಿ, ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾಗೆ ಪಟ್ಟು ಹಿಡಿದು ಹೋರಾಟ ನಡೆಸಲು ತೀರ್ಮಾನಿಸಿದೆ.

ಉಭಯ ಸದನಗಳಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಎಲ್ಲ ಟೀಕೆ-ಟಿಪ್ಪಣಿಗಳಿಗೆ ಸದನದಲ್ಲೇ ಉತ್ತರಿಸುತ್ತೇನೆಂದು ಹೇಳುವ ಮೂಲಕ ಪಂಥಾಹ್ವಾನ ನೀಡಿದ್ದಾರೆ.

ಕರಾವಳಿ ಭಾಗದ ಶಾಸಕರಂತೂ ನಮ್ಮ ಭಾಗಕ್ಕೆ ಆಗಿರುವ ಅನ್ಯಾಯದ ವಿರುದಟಛಿ ಸದನದ ಒಳಗೆ ಮತ್ತು ಹೊರಗೆ ನಮ್ಮ ಹೋರಾಟ ಮುಂದುವರಿಯಲಿದ್ದು ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುವುದಿಲ್ಲವೆಂದು ಸಮರ ಸಾರಿದ್ದಾರೆ. ಮತ್ತೂಂದೆಡೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿರುವ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಪತ್ರ ಸಮರ ನಡೆಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್‌ನಲ್ಲಿ ಯಾವುದೇ ಯೋಜನೆ ಪ್ರಕಟಿಸದಿರುವುದು ಮಾಜಿ ಸಚಿವರಾದ ರೋಷನ್‌ಬೇಗ್‌-ತನ್ವೀರ್‌ ಸೇಠ್ ಅವರಲ್ಲಿ ಆಕ್ರೋಶ ಮೂಡಿಸಿದ್ದು ಪಕ್ಷದ ನಾಯಕತ್ವಕ್ಕೆ ತಮ್ಮ ಅಸಮಾಧಾನ ರವಾನಿಸಿದ್ದಾರೆ. 

Advertisement

ಪೆಟ್ರೋಲ್‌-ಡೀಸೆಲ್‌ ಮೇಲೆ ತೆರಿಗೆ ಹಾಕಿರುವುದಕ್ಕೆ ಕಾಂಗ್ರೆಸ್‌ನ ಕೆಲವು ಶಾಸಕರಲ್ಲಿ ಅಸಮಾಧಾನವಿದೆ. ಹೀಗಾಗಿ, ಸದನದಲ್ಲಿ ಪ್ರತಿಪಕ್ಷ ಬಿಜೆಪಿಸರ್ಕಾರದ ಮೇಲೆ ಮುಗಿಬಿದ್ದಾಗ ಕಾಂಗ್ರೆಸ್‌ ಶಾಸಕರು ಸ ರ್ಕಾರವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಎಷ್ಟು ಗಟ್ಟಿಯಾಗಿ ನಿಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಪ್ರತಿಪಕ್ಷ ಬಿಜೆಪಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರತಿ ಹಂತದಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿದೆ. ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಪಕ್ಷದ ಶಾಸಕರು ಹಾಗೂ ಪರಿಷತ್‌ ಸದಸ್ಯರಿಗೆ ಸದನದಲ್ಲಿ ಸರ್ಕಾರ ಎದುರಿಸುವ ಬಗ್ಗೆ ಈಗಾಗಲೇ “ಕ್ಲಾಸ್‌’ ತೆಗೆದುಕೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗಿರುವ ಬಗ್ಗೆ ಕಾಂಗ್ರೆಸ್‌ ನಾಯಕ ಎಚ್‌.ಕೆ.ಪಾಟೀಲ್‌ ಅವರೇ ಅಸಮಾಧಾನಗೊಂಡಿರುವುದು ಬಿಜೆಪಿಗೂ ಪರೋಕ್ಷವಾಗಿ ಬಲ ಬಂದಿದೆ.

ಹೀಗಾಗಿ, ಆ ವಿಚಾರ ಸೇರಿ ಕರಾವಳಿ-ಮಲೆನಾಡು ಭಾಗಕ್ಕೆ ಬಜೆಟ್‌ನಲ್ಲಿ ವಿಶೇಷ ಯೋಜನೆ ನೀಡದಿರುವ ಬಗ್ಗೆ ಹೆಚ್ಚು ಪ್ರಸ್ತಾಪಿಸಿ ಹೋರಾಟ ನಡೆಸುವುದು. ರಾಜ್ಯದ ಕೆಲವೆಡೆ ಮಳೆಯಿಂದ ಉಂಟಾಗಿರುವ ಅನಾಹುತ ಕುರಿತು ಚರ್ಚೆಗೆ ಅವಕಾಶ ಕೋರುವುದು ಸೇರಿ ಹಲವು ವಿಷಯಗಳನ್ನು
ಚರ್ಚಿಸಲು ತೀರ್ಮಾನಿಸಲಾಗಿದೆ.

ಸೋಮವಾರ ಬೆಳಗ್ಗೆ ಸದನ ಆರಂಭಕ್ಕೆ ಮುನ್ನ ಯಡಿಯೂರಪ್ಪ ಅವರು ಪಕ್ಷದ ಶಾಸಕರ ಜತೆ ಸಭೆ
ನಡೆಸುವ ಸಾಧ್ಯತೆಯೂ ಇದೆ. ಹೀಗಾಗಿ, ಸೋಮವಾರದಿಂದ ಉಭಯ ಸದನಗಳಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ನಡುವೆ “ಜಂಗೀಕುಸ್ತಿ’ನಿರೀಕ್ಷೆಯಿದೆ. ಪ್ರತಿಪಕ್ಷದ ತಂತ್ರಕ್ಕೆ ಸರ್ಕಾರದ ಪ್ರತಿತಂತ್ರ ಏನು ಎಂಬುದು ಕಾದು ನೋಡಬೇಕಾಗಿದೆ.

ಅಧಿವೇಶನ ವಿಸ್ತರಣೆ ಆಗುತ್ತಾ?
ರಾಜ್ಯ ವಿಧಾನಮಂಡಲ ಅಧಿವೇಶನ ಗುರುವಾರ ಅಂತ್ಯಗೊಳ್ಳಲಿದೆ. ನಾಲ್ಕು ದಿನಗಳಲ್ಲಿ ಬಜೆಟ್‌ ಮೇಲಿನ ಚರ್ಚೆ ನಡೆದು ಸರ್ಕಾರದಿಂದ ಉತ್ತರ ನೀಡಿ ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳಬೇಕಾಗಿದೆ. ಜತೆಗೆ ಪ್ರಶ್ನೋತ್ತರ ಕಲಾಪವೂ ನಿಗದಿಯಾಗಿದೆ. ಹೀಗಾಗಿ, ಒಂದು ಅಥವಾ ಎರಡು ದಿನ ಅಧಿವೇಶನ ವಿಸ್ತರಣೆ ಮಾಡುವ ಚಿಂತನೆಯೂ ಇದ್ದು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ಈ ಕುರಿತು ನಿರ್ಧರಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next