Advertisement

ತಂಬಾಕು ಸೇವನೆ ಅಪಾಯಗಳು 

06:00 AM Jun 10, 2018 | |

ವಿಶ್ವಾದ್ಯಂತ, 20ನೇ ಶತಮಾನದಲ್ಲಿ, ಸುಮಾರು 10 ಕೋಟಿ ಜನ ತಂಬಾಕು ಸೇವನೆಯಿಂದ ಬರುವ ರೋಗಗಳಿಂದ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣವಾಗಿರುವ ಮುಂಚೂಣಿಯಲ್ಲಿರುವ ಎಂಟು ಕಾರಣಗಳಲ್ಲಿ, ಆರು ಕಾರಣಗಳು ತಂಬಾಕು ಸೇವನೆಯಿಂದ ಉಂಟಾಗುವಂತಹವುಗಳು. ಭಾರತದಲ್ಲಿ  ಪ್ರತೀ ವರ್ಷ 8ರಿಂದ 9 ಲಕ್ಷ ಜನ ತಂಬಾಕು ಸೇವನೆಗೆ ಸಂಬಂಧಪಟ್ಟ ಕಾಯಿಲೆಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2010ರ ಭಾರತದ ಯುವಕ/ಯುವತಿಯರ ಜಾಗತಿಕ ತಂಬಾಕು ಸೇವನೆ ಸರ್ವೇಕ್ಷಣೆಯಲ್ಲಿ ಕಂಡುಬಂದ ಅಂಶವೆಂದರೆ , ಪ್ರತೀ ಮೂವರಲ್ಲಿ ಒಬ್ಬರು, ಅಂದರೆ ನೂರರಲ್ಲಿ ಶೇಕಡಾ ಮೂವತ್ತು ಭಾಗ ಜನ, ಯಾವುದೋ ಒಂದು ವಿಧದ ತಂಬಾಕು ಬಳಸುತ್ತಿದ್ದಾರೆ. ಅವರಲ್ಲಿ ಶೇಕಡಾ 21ರಷ್ಟು ಜನ ಕೇವಲ ಹೊಗೆರಹಿತ ತಂಬಾಕು ಬಳಸಿದರೆ, ಶೇಕಡಾ 9ರಷ್ಟು ಜನ ಕೇವಲ ಹೊಗೆಸಹಿತ ತಂಬಾಕು ಬಳಸುತ್ತಿದ್ದಾರೆ ಮತ್ತು ಶೇಕಡಾ 5ರಷ್ಟು ಜನ ಎರಡು ರೀತಿಯ ತಂಬಾಕನ್ನು ಬಳಸುತ್ತಿದ್ದಾರೆ. ಒಟ್ಟಿನಲ್ಲಿ, ತಂಬಾಕು ಉಪಯೋಗ ಪುರುಷರಲ್ಲಿ ಹೆಚ್ಚಾಗಿದ್ದು, ಶೇಕಡಾ 48ರಷ್ಟು  ಪ್ರಚಲಿತವಾಗಿದೆ ಹಾಗೂ ಇದು ಶೇಕಡಾ 20ರಷ್ಟು  ಮಹಿಳೆಯರಲ್ಲೂ ಕೂಡ ಕಂಡುಬಂದು ಗಂಭೀರವಾಗಿ ಪರಿಗಣಿಸುವ ವಿಷಯವಾಗಿದೆ. 

Advertisement

ಶೇಕಡಾವಾರು ಬಳಕೆ 
ಖೈನಿ/ತಂಬಾಕು ಮತ್ತು ಸುಣ್ಣದ ಮಿಶ್ರಣ: ಶೇ. 12, ಗುಟ್ಕಾ : ಶೇ. 8, ಪಾನ್‌/ವೀಳ್ಯದೆಲೆ ಮತ್ತು ತಂಬಾಕು: ಶೇ.6, ತಂಬಾಕು ಮಂಜನ: ಶೇ. 5. ಹೊಗೆಸಹಿತ ತಂಬಾಕಿನ ಶೇಕಡಾವಾರು ಬಳಕೆ: ಬೀಡಿ: ಶೇ. 9, ಸಿಗರೇಟ್‌: ಶೇ. 6, ಹುಕ್ಕಾ: ಶೇ. 1. 2009ರ ಭಾರತದ ಹದಿಹರೆಯ/ತರುಣ-ತರುಣಿಯರ ಜಾಗತಿಕ ತಂಬಾಕು ಸೇವನೆ ಸರ್ವೇಕ್ಷಣೆಯಲ್ಲಿ ಕಂಡುಬಂದ ಘಾತಕ ಅಂಶವೆಂದರೆ, 13ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಶೇ. 15-16ರಷ್ಟು ವಿದ್ಯಾರ್ಥಿಗಳು ತಂಬಾಕು ಬಳಸಿದ್ದರು. ಇವರಲ್ಲಿ 4 ಪ್ರತಿಶತ ವಿದ್ಯಾರ್ಥಿಗಳು ಸಿಗರೇಟ್‌ ಸೇದಿದ್ದರೆ, ಶೇ. 12ರಷ್ಟು  ವಿದ್ಯಾರ್ಥಿಗಳು ಇತರ ತರಹದ ತಂಬಾಕು ಬಳಸಿದ್ದರು. ತಂಬಾಕಿನಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚಿನ ವಿಷಪೂರಿತ ವಸ್ತುಗಳಿವೆ. ಇವುಗಳಲ್ಲಿ ಅತ್ಯಂತ ಹಾನಿಕಾರಕವಾಗಿರುವವುಗಳೆಂದರೆ: ನಿಕೋಟಿನ್‌, ಕಾರ್ಬನ್‌ ಮೋನಾಕ್ಸೆ„ಡ್‌, ಟಾರ್‌. ಇದಲ್ಲದೇ ಕ್ಯಾನ್ಸರ್‌ ಉಂಟು ಮಾಡುವ ಸುಮಾರು ಅರವತ್ತಕ್ಕಿಂತ ಹೆಚ್ಚಿನ ಕೆಮಿಕಲ್ಸಗಳಿವೆ.

ತಂಬಾಕಿನ ಬಳಕೆ ಎರಡು ರೂಪಗಳಲ್ಲಿದೆ. 
ಹೊಗೆಸಹಿತ (ಸ್ಮೋಕ್‌), ಹೊಗೆರಹಿತ (ಸ್ಮೋಕ್‌ ಲೆಸ್‌). ಧೂಮ್ರಪಾನ ಮಾಡುವವರು ನೇರವಾಗಿ ಧೂಮ್ರಪಾನಿಗಳೆಂದು ಪರಿಗಣಿಸಲ್ಪಡುತ್ತರಲ್ಲದೇ, ಅವರು ಧೂಮ್ರಪಾನ ಮಾಡುವಾಗ ಜೊತೆಗಿರುವವರನ್ನು ಪರೋಕ್ಷ ಧೂಮ್ರಪಾನಿಗಳೆಂದು ಪರಿಗಣಿಸಲಾಗುತ್ತದೆ ಯಾಕೆಂದರೆ, ಈ ಪರೋಕ್ಷ ಧೂಮ್ರಪಾನಿಗಳಲ್ಲೂ ಕೂಡ, ನೇರವಾಗಿ ಧೂಮ್ರಪಾನ ಮಾಡುವವರ ತರಹ,  ತಂಬಾಕಿಗೆ ಸಂಬಂಧಪಟ್ಟ ವಿವಿಧ ಗಂಭೀರ ದೈಹಿಕ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಇದಲ್ಲದೇ ಸೆಕೆಂಡ್‌ ಹ್ಯಾಂಡ್‌ ಸ್ಮೋಕಿಂಗ್‌ ಎನ್ನುವ ಪದವನ್ನೂ ಬಳಸಲಾಗುತ್ತದೆ. ಈ ಸೆಕೆಂಡ್‌ ಹ್ಯಾಂಡ್‌ ಸ್ಮೋಕ್‌ ಎಂದರೆ ಧೂಮ್ರ ಪಾನಿಗಳು ಧೂಮ್ರಪಾಣ ಮಾಡಿ ನಂತರ ಹೊರಹಾಕುವ ಹೊಗೆಯುಕ್ತ ಗಾಳಿ (ಸ್ಮೋಕ್‌ ಇರುವಂತಹ. ಇದು ವಾತಾವರಣದಲ್ಲಿರುವ ಗಾಳಿಯೊಂದಿಗೆ ಮಿಶ್ರಿತವಾಗಿ ಗಾಳಿಯಲ್ಲಿರುತ್ತದೆ. ಇದರ ಸೇವನೆ ಕೂಡ ಅಪಾಯಕಾರಿ. 
 
ತಂಬಾಕಿನಿಂದಾಗುವ ದುಷ್ಪರಿಣಾಮಗಳು 
ಇವು  ಅದರಲ್ಲಿರುವ ಕೆಮಿಕಲ್ಸಿನಿಂದಾಗು ವವು. ಈ ಕೆಮಿಕಲ್ಸ್‌ಗಳು ದೇಹದಲ್ಲಿ ವಿವಿಧ  ಬದಲಾವಣೆ
ಗಳನ್ನುಂಟುಮಾಡುತ್ತವೆ. ಈ ಬದಲಾವಣೆಗಳ ಪರಿಣಾಮವಾಗಿ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಈ ಕಾಯಿಲೆಗಳ ಪರಿಣಾಮಗಳಿಂದಾಗಿ ಅನೇಕರೂ ಸಾವನ್ನಪ್ಪುತ್ತಾರೆ. ಈ ರೀತಿ ತಂಬಾಕಿನ ಉಪಯೋಗದಿಂದುಂಟಾದ ಕಾಯಿಲೆಗಳಿಂದ ಸಾವನ್ನಪ್ಪುವವರ ಪ್ರಮಾಣ ವರ್ಷಕ್ಕೆ ಅಂದಾಜು ಐವತ್ತು (50) ಲಕ್ಷದಷ್ಟಿದೆ. ತಂಬಾಕಿನ ಉಪಯೋಗದಿಂದ ಉಲ್ಬಣಗೊಳ್ಳುವ ಕಾಯಿಲೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು: ಸುಲಭವಾಗಿ ಅರಿತುಕೊಳ್ಳಲು, ಇವುಗಳನ್ನು ತಲೆಯಿಂದ ಪಾದದವರೆಗೆ ಯಾವ ರೀತಿಯ ತೊಂದರೆಗಳು ಕಂಡೂಬರುತ್ತವೆಯೆಂದು ವಿಂಗಡಿಸಿ ಅರ್ಥಮಾಡಿಕೊಳ್ಳಬಹುದು.

1. ತಲೆ/ ಮಿದುಳು: ಸ್ಟ್ರೋಕ್‌ ಆಗುವುದು. ಮಿದುಳಿನಲ್ಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು, ಇದರಿಂದಾಗಿ ರಕ್ತಸಂಚಾರವಾಗದೇ ಮಿದುಳಿನ ಆ ಭಾಗಗಳು ನಿಷ್ಕ್ರಿಯಗೊಳ್ಳುವುದು. ಮಿದುಳಿನ ಆ ಭಾಗಗಳ ಹತೋಟಿಯಲ್ಲಿದ್ದ ಕ್ರಿಯೆಗಳು ನಿಷ್ಕ್ರಿಯಗೊಳ್ಳುವುದು. ನೆನಪಿನ ಸಮಸ್ಯೆಗಳು ಉಲ್ಬಣಗೊಳ್ಳುವುದು.

2. ಕಣ್ಣುಗಳು: ಕಣ್ಣಿನ ಪೊರೆ ಬರುವುದು (ಕ್ಯಾಟರ್ಯಾಕ್ಟ್ ), ಅಥವಾ ಕಣ್ಣಿನ ಪೊರೆ ಬರುವ ಪ್ರಕ್ರಿಯೆ ತೀವ್ರಗೊಳ್ಳುವುದು. ಈ ರೀತಿ ಕಣ್ಣಿಗೆ ಪೊರೆ ಬರಲು ಸಾಧ್ಯ ಕಾರಣಗಳೆಂದರೆ: ಧೂಮ್ರಪಾನ ಮಾಡುವಾಗ ಹೊಗೆ ನೇರವಾಗಿ ಕಣ್ಣಿಗೆ ತೊಂದರೆಯುಂಟುಮಾಡುವುದು ಮತ್ತು ಧೂಮ್ರಪಾನದಿಂದ ಅದರಲ್ಲಿನ ಕೆಮಿಕಲ್ಸ್‌ಗಳು ಶ್ವಾಸಕೋಶ ರಕ್ತಕ್ಕೆ ಬೆರೆತು, ರಕ್ತದ ಮುಖಾಂತರ ಕಣ್ಣಿಗೆ ತಲುಪಿ ಹಾನಿಯುಂಟುಮಾಡುವುದು.
 
-ಅಕ್ಷಿಪಟಲ (ರೆಟಿನಾ ಹಾಗೂ ಮ್ಯಾಕುಲಾ) ಹದಗೆಡುವುದು. ಈ ರೀತಿ ಅಕ್ಷಿಪಟಲ ಕ್ಷೀಣಗೊಂಡಾಗ ವ್ಯಕ್ತಿಗೆ ದೃಷ್ಟಿಯ ವಿವಿಧ ಸಮಸ್ಯೆಗಳು ಕಾಡತೊಡಗುತ್ತವೆ. ಅವುಗಳೆಂದರೆ: ಅಕ್ಷರಗಳನ್ನು ಓದಲಿಕ್ಕಾಗದಿರುವುದು, ವಾಹನ ಓಡಿಸಲು ಕಷ್ಟವಾಗುವುದು, ಜನರ ಮುಖ ಗುರುತುಹಿಡಿಯಲು ಕಷ್ಟವಾಗುವುದು, ಬಣ್ಣಗಳನ್ನು ಗುರುತಿಸಲು ಕಷ್ಟವಾಗುವುದು, ವಸ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸಾಧ್ಯವಾಗದಿರುವುದು.  

Advertisement

3. ಮೂಗು: ಮೂಗಿನಲ್ಲಿರುವ ರೋಮಗಳು ಹೊರಗಿನ ವಾತಾವರಣದಲ್ಲಿನ ಕಶ್ಮಲ ಹಾಗೂ ರೋಗಾಣುಗಳಿಂದ ರಕ್ಷಣೆಗಿರುತ್ತವೆ. ಆದರೆ, ಧೂಮ್ರಪಾನಿಗಳಲ್ಲಿ ಈ ರೋಮಗಳು ಉಷ್ಣ ಹಾಗೂ ಹೊಗೆಯಿಂದ ಹಾಳಾಗುತ್ತವೆ ಮತ್ತು ಮೂಗಿನ ಒಳಗಿನ ಭಾಗ ಕೂಡ ಹಾಳಾಗುತ್ತದೆ. ಇದರಿಂದಾಗಿ ಅವರ ವಾಸನೆ ಗುರುತಿಸುವ ಸಾಮರ್ಥ್ಯ ಹೋಗಿಬಿಡುತ್ತದೆ. ಇದಲ್ಲದೇ ಅವರು ಪದೇ-ಪದೇ ವಿವಿಧ ರೀತಿಯ ರೋಗಾಣುಗಳಿಗೆ ತುತ್ತಾಗಿ ಶೀತ, ಸೈನಸೈಟಿಸ್‌ ತೊಂದರೆಗಳಿಂದ ಬಳಲುತ್ತಿರುತ್ತಾರೆ. 

4. ಕಿವಿಗಳು: ಒಳಗಿನ ಕಿವಿಯ ರಕ್ತಸಂಚಾರಮಾಡುವ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ವ್ಯಕ್ತಿಯ ಕಿವಿ ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆಯಲ್ಲದೇ ಬೇಗವಾಗಿ ಶ್ರವಣ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಮತ್ತು ಈ ತರಹದ ಬದಲಾವಣೆಗಳಿಂದಾಗಿ, ಅವರಿಗೆ ಕಿವಿಯ ಸೋಂಕು ಬಂದಾಗ ಅಥವಾ ಗಟ್ಟಿಯಾದ ಶಬ್ದ ಕೇಳಿದಾಗ, ಕಿವುಡುತನ ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇಷ್ಟಲ್ಲದೇ, ಧೂಮ್ರಪಾನ ಮಾಡುವ ವ್ಯಕ್ತಿಗಳಲ್ಲಿ ಮಧ್ಯ ಕಿವಿಯ ಸೋಂಕು (ಇನೆ#ಕ್ಷನ್‌) ಬರುವ ಸಾಧ್ಯತೆಗಳು ಇತರೆ ಜನರಿಗಿಂತ ಮೂರು ಪಟ್ಟು ಹೆಚ್ಚಾಗಿರುತ್ತವೆ.

5. ಬಾಯಿ: ಧೂಮ್ರಪಾನದಿಂದ ಬಾಯಿಯ ಇಡೀ ವಾತಾವರಣ ಹದಗೆಡುತ್ತದೆ. ಬಾಯಿಯ ವಿವಿಧ ಭಾಗಗಳಾದ ಹಲ್ಲು, ಒಸಡು, ನಾಲಿಗೆ, ಪ್ಯಾಲೇಟ್‌ (ಬಾಯಿಯ ಮೇಲ್ಭಾಗ), ಕಿರುನಾಲಿಗೆ, ಕೆನ್ನೆಯ ಹಾಗೂ ತುಟಿಯ ಒಳಭಾಗಗಳು ಅಕ್ಷರಶಃ ನರಳಾಡುತ್ತಿರುತ್ತವೆ. ಆಹಾರದ ರುಚಿ ಗೊತ್ತಾಗುವುದಿಲ್ಲ. ಸಮಯ ಕಳೆದ ಹಾಗೆ ಎಲ್ಲಾ ಆಹಾರವೂ ಖಾರವೆನಿಸಲಾರಂಭಿಸುತ್ತದೆ ಮತ್ತು ಬಾಯಲ್ಲೆಲ್ಲಾ ನೋವುಂಟಾಗುತ್ತದೆ. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಂಡುಬರುತ್ತವೆ. ಬಾಯಿಯಿಂದ ಯಾವಾಗಲೂ ದುರ್ಗಂಧ ಬರುವುದು. ಬಾಯಿಯಲ್ಲಿ ತಂಬಾಕು, ಗುಟ್ಕಾ ಇಟ್ಟುಕೊಳ್ಳುವುದರಿಂದ ಆ ಭಾಗಗಳಲ್ಲಿ ಹುಣ್ಣುಗಳಾಗುತ್ತವೆ, ಕೆಲವೊಮ್ಮೆ ರಕ್ತಸ್ರಾವವಾಗುತ್ತದೆ. ಸಮಯ ಕಳೆದ ಹಾಗೆ ಬಾಯಿಯ ಬಾಯಿ ಪೂರ್ತಿ ತೆಗೆಯಲು ಸಾಧ್ಯವಾಗದ ಹಾಗೆ ಬದಲಾವಣೆಗಳಾಗುತ್ತವೆ, ಈ ಬದಲಾವಣೆಗೆ ಬಾಯಿಯ ಒಳಪದರಿನ ಫೈಬ್ರೋಸಿಸ್‌ (ಓರಲ್‌  ಸಬ್‌ ಮ್ಯುಕಸ್‌ ಫೈಬ್ರೋಸ್‌) ಎಂದು ಹೇಳಲಾಗುತ್ತದೆ. ಬಾಯಿಯ ವಿವಿಧ ಭಾಗಗಳಲ್ಲಿ ಕ್ಯಾನ್ಸರ್‌ ಉಂಟಾಗಲು ತಂಬಾಕಿನ ಬಳಕೆ ಮುಖ್ಯ ಕಾರಣವಾಗಿದೆ.  ಹಲ್ಲು- ಕಲೆಗಳಾಗುವುದು, ಹಳದಿ ಬಣ್ಣಕ್ಕೆ ತಿರುಗುವುದು, ಕಶ್ಮಲ ಪದರು ಬೆಳೆಯುವುದು, ಹಲ್ಲುಗಳು ಸಡಿಲಗೊಳ್ಳುವುದು, ಹಲ್ಲುಗಳು ಕೊಳೆಯುವುದು, ಹಲ್ಲುಗಳು ಬಿದ್ದು ಹೋಗುವುದು.

ಒಸಡು- ಒಸಡುಗಳು ಸೋಂಕಿಗೆ ಒಳಗಾಗುವುದು (ಇನೆ#ಕ್ಷನ್‌), ಒಸಡಿನ ನೋವುಗಳು, ಒಸಡಿನಿಂದ ರಕ್ತಸ್ರಾವವಾಗುವುದು.

ನಾಲಿಗೆ- ರುಚಿ ಗೊತ್ತಾಗದಿರುವುದು, ನಾಲಿಗೆಯ ಕ್ಯಾನ್ಸರ್‌, ಹುಣ್ಣುಗಳಾಗುವುದು ಪ್ಯಾಲೇಟ್‌- ಹುಣ್ಣುಗಳು, ಸೋಂಕಿಗೆ ತುತ್ತಾಗುವುದು

ತಂಬಾಕಿನ ಬಳಕೆ ಪ್ರಾರಂಭಿಸಲು ಕಾರಣಗಳೇನು?
ಸಾಧಾರಣವಾಗಿ ಹದಿಹರೆಯ ವಯಸ್ಸಿನಲ್ಲಿ ತಂಬಾಕಿನ ಬಳಕೆ ಪ್ರಾರಂಭವಾಗುತ್ತದೆ. ಇದರ ಬಳಕೆಯನ್ನು ಪ್ರಾರಂಭಿಸುವುದಕ್ಕೆ ಪ್ರಭಾವಬೀರುವ ಅಂಶಗಳನ್ನು ಈ ಕೆಳಗೆ ನಮೂದಿಸಿದಂತೆ ವಿಂಗಡಿಸಿ ಅರ್ಥಮಾಡಿಕೊಳ್ಳಬಹುದು:
1. ಬಯಾಲಾಜಿಕಲ್‌(ಜೈವಿಕ) ಪ್ರಭಾವಗಳು: ಹದಿಹರೆಯ ವಯಸ್ಸಿನಲ್ಲಿ ಕಂಡುಬರುವ ಮುಖ್ಯ ಬದಲಾವಣೆಗಳೆಂದರೆ,ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಹಾಗೂ ಸ್ಥಾಪಿಸಲು ಪ್ರಯತ್ನಿಸುವುದು ತನ್ನದೇ ಆದ ವ್ಯಕ್ತಿತ್ವ ಸ್ಥಾಪಿಸಿ, ತೋರಿಸುವುದು ದೈಹಿಕ ಬದಲಾವಣೆಗಳ ಜೊತೆಗೆ ಮಾನಸಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವುದು
2. ಮಾನಸಿಕ ಪ್ರಭಾವಗಳು: ತನ್ನ ಭಾವನೆಗಳ ಮೇಲೆ ಹತೋಟಿಯಲ್ಲಿಡಲು ಸಾಧ್ಯವಾಗದಿರುವುದು, ಅಪಾಯಕಾರಿ/ ಮೊಂಡುತನದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಇತರೆ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದು
3. ಸಾಮಾಜಿಕ ಪ್ರಭಾವಗಳು: ಪೋಷಕರ ಪ್ರಭಾವ, ಅನಕ್ಷರತೆ, ತನಗೆ ಆದರ್ಶವೆನಿಸುವ ವ್ಯಕ್ತಿಗಳ ಅನುಕರಣೆ, ಇತ್ಯಾದಿ.

ತಂಬಾಕಿನ ಅವಲಂಬನೆ
ತಂಬಾಕಿನ ಅವಲಂಬನೆಯೆಂದರೆ: ತಂಬಾಕಿನ ಉಪಯೋಗದ ಗಟ್ಟಿ ತವಕ, ತಂಬಾಕಿನ ಉಪಯೋಗವನ್ನು ನಿಯಂತ್ರಿಸುವುದು ಕಷ್ಟವಾಗುವುದು, ತಂಬಾಕಿನಿಂದ ಹಾನಿಕಾರಕ ಪರಿಣಾಮ ಗಳಾದರೂ ಅದರ ಸೇವನೆ ಮುಂದುವರಿಸುವುದು, ಬೇರೆ ಕೆಲಸ, ಜವಾಬ್ದಾರಿಗಳಿಗಿಂತ ತಂಬಾಕು ಬಳಕೆಗೆ ಹೆಚ್ಚಿನ ಪ್ರಾಶಸ್ತಿ ನೀಡುವುದು, ಸಮಯ ಕಳೆದಂತೆ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೇಕಾಗುವುದು, ತಂಬಾಕು ಸೇವನೆ ನಿಲ್ಲಿಸಿದ/ ಮುಂದೂಡಿದ ನಂತರ ಕೆಲವು ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳು ಕಂಡುಬರುವುದು ಉದಾ: ಗಮನ ಕೊಡಲಾಗುವುದಿಲ್ಲ, ಬೇಗ ಕೋಪ ಬರುವುದು, ಬೆವರುವುದು, ಇತ್ಯಾದಿ. ಇವುಗಳಲ್ಲಿ ಯಾವುದೇ ಮೂರು ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಸಮಯ ಕಂಡುಬರುತ್ತಿದ್ದರೆ, ಈ ಪರಿಸ್ಥಿತಿಯನ್ನು ತಂಬಾಕು ಅವಲಂಬನೆ ಕಾಯಿಲೆಯೆಂದು ಪರಿಗಣಿಸಲಾಗುತ್ತದೆ.

ಡಾ| ರವೀಂದ್ರ ಮುನೋಳಿ,
ಸಹಾಯಕ ಪ್ರಾಧ್ಯಾಪಕರು, ಮನೋರೋಗಚಿಕಿತ್ಸಾ  ವಿಭಾಗ
ಕೆಎಂಸಿ, ಮಣಿಪಾಲ 

Advertisement

Udayavani is now on Telegram. Click here to join our channel and stay updated with the latest news.

Next