Advertisement

ರಾಜ್ಯದಲ್ಲಿ ತಂಬಾಕು ಕ್ಯಾನ್ಸರ್‌ ಕಾಯಿಲೆ ಇಳಿಮುಖ

09:20 AM May 14, 2018 | Karthik A |

ಮಂಗಳೂರು: ಮಾನವನನ್ನು ಕೊಲ್ಲುವ ಮಾರಕ ರೋಗಗಳ ಪೈಕಿ ಕ್ಯಾನ್ಸರ್‌ ಒಂದು. ಕೆಲವು ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್‌ ಪ್ರಮಾಣ ಇಳಿಕೆಯಾಗಿರುವುದು ಸಮಾಧಾನಕರ ಅಂಶ. ಅಂಕಿ ಅಂಶಗಳ ಪ್ರಕಾರ 2016-17ರಲ್ಲಿ ಇದು ಶೇ. 6ರಷ್ಟು ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಪ್ರಕಾರ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸ್‌ ಸಂಸ್ಥೆಯು ರಾಜ್ಯದಲ್ಲಿ ತಂಬಾಕು ಸೇವನೆಗೆ ಸಂಬಂಧಪಟ್ಟಂತೆ ‘ಗೇಟ್ಸ್‌-2’ (ಗ್ಲೋಬಲ್‌ ಅಡಲ್ಟ್ ಟೊಬಾಕೋ ಸರ್ವೇ) ಸರ್ವೇ ನಡೆಸಿದೆ. ಇದರ ಪ್ರಕಾರ 2009-10ರಲ್ಲಿ ರಾಜ್ಯದಲ್ಲಿ ಶೇ. 28.2ರಷ್ಟು ಮಂದಿ ತಂಬಾಕು ಸೇವನೆ ಮಾಡುತ್ತಿದ್ದರು. 2016-17ರ ಅಂಕಿ ಅಂಶದ ಪ್ರಕಾರ ಇದು ಶೇ. 22.8ಕ್ಕೆ ಇಳಿದಿದೆ.

Advertisement

ಸಮೀಕ್ಷೆಯ ಪ್ರಕಾರ ಶೇ.8.8ರಷ್ಟು ಮಂದಿ ಸಿಗರೇಟು ಸೇವನೆ, ಶೇ.16.3ರಷ್ಟು ಮಂದಿ ಜಗಿಯುವ ತಂಬಾಕು ಸೇವನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ತಂಬಾಕು ಸೇವನೆಯಿಂದ ಉಂಟಾದ ಕಾಯಿಲೆಗಳಿಂದ ಬಳಲುತ್ತಿರುವ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ವರ್ಷದಲ್ಲಿ 50,000 ಮಂದಿ ಕ್ಯಾನ್ಸರ್‌ಗೆ ತುತ್ತಾದರೆ ಅವರಲ್ಲಿ ಅರ್ಧದಷ್ಟು ಮಂದಿ ತಂಬಾಕು ಬಳಕೆಯಿಂದ ಈ ಕಾಯಿಲೆಗೆ ಒಳಗಾಗುತ್ತಾರೆ. ಶೇ. 10ರಷ್ಟು ಮಂದಿ ಜಗಿಯುವ ತಂಬಾಕಿನಿಂದ, ಶೇ. 8ರಷ್ಟು ಮಂದಿ ಬೀಡಿಯಿಂದ, ಶೇ. 4ರಷ್ಟು ಮಂದಿ ಸಿಗರೇಟ್‌ ಸೇವನೆಯಿಂದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.


ಮಹಿಳೆಯರಲ್ಲೂ ತಂಬಾಕು ಪ್ರಿಯರು

ಶೇ.0.7ರಷ್ಟು ಮಹಿಳೆಯರು ತಂಬಾಕಿನ ದುಶ್ಟಟಕ್ಕೆ ದಾಸರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಸೇವನೆಯಿಂದ ಬರುವ ರೋಗಗಳು, ಕ್ಯಾನ್ಸರ್‌ ನ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಇದೇ  ಕಾರಣದಿಂದ ತಂಬಾಕು ಉತ್ಪನ್ನಗಳು ಸುಲಭವಾಗಿ ಮಾರಾಟವಾಗುತ್ತಿವೆ. ಅಂಕಿಅಂಶಗಳ ಪ್ರಕಾರ ಮನೆಗಳಲ್ಲಿ ಶೇ. 25.2, ಕೆಲಸದ ಸ್ಥಳಗಳಲ್ಲಿ ಶೇ. 24.8, ಸರಕಾರಿ ಕಟ್ಟಡಗಳಲ್ಲಿ ಶೇ. 3.4, ಖಾಸಗಿ ಕಟ್ಟಡಗಳಲ್ಲಿ ಶೇ. 2.6, ರೆಸ್ಟೋರೆಂಟ್‌ಗಳಲ್ಲಿ ಶೇ.14, ನೈಟ್‌ ಕ್ಲಬ್‌, ಬಾರ್‌ಗಳಲ್ಲಿ ಶೇ. 3.2 ಮತ್ತು ಸಿನೆಮಾ ಮಂದಿರಗಳಲ್ಲಿ ಶೇ. 7.5ರಷ್ಟು ಮಂದಿ ಧೂಮಪಾನದಿಂದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆ
ವೆನ್ಲಾಕ್‌ ಆಸ್ಪತ್ರೆಯ ಸಿಬಂದಿಯೊಬ್ಬರು ‘ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಜಿಲ್ಲೆಯಲ್ಲಿ ತಂಬಾಕಿನಿಂದ ಬರುವ ಕ್ಯಾನ್ಸರ್‌ ಗೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗಿದೆ. ನಗರದಲ್ಲಿ 2013ರಲ್ಲಿ 1,096 ಮಂದಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದರು. ಆದರೆ 2017ರಲ್ಲಿ ಇದು 1,010ಕ್ಕೆ ಇಳಿದಿದೆ’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರತೀದಿನ 20 ಮಂದಿ ಸಾವು
ರಾಜ್ಯದಲ್ಲಿ ಪ್ರತಿದಿನ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ವರ್ಷದಲ್ಲಿ 50,000 ಮಂದಿ ಕ್ಯಾನ್ಸರ್‌ ರೋಗಿಗಳ ಪೈಕಿ 25,000 ಮಂದಿ ತಂಬಾಕು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಶೇ.10ರಷ್ಟು ಮಂದಿ ಅಗೆಯುವ ತಂಬಾಕಿನಿಂದ, ಶೇ.8ರಷ್ಟು ಮಂದಿ ಬೀಡಿಯಿಂದ, ಶೇ.4ರಷ್ಟು ಮಂದಿ ಸಿಗರೇಟ್‌ ಸೇವನೆಯಿಂದ ಕ್ಯಾನ್ಸರ್‌ ತುತ್ತಾಗುತ್ತಿದ್ದಾರೆ.

Advertisement

ತಂಬಾಕು ಕ್ಯಾನ್ಸರ್‌ ಪ್ರಮಾಣ ಕಡಿಮೆಯಾಗಲು ಕಾರಣ? 
– ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮದ ಬಗೆಗಿನ ಜಾಹೀರಾತು 

– ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವಿಕೆ 

– ಜನರ ಭಾವನೆ ಬದಲಾಗುವಿಕೆ 

– ತಂಬಾಕು ಪ್ರಿಯರನ್ನು ಸಮಾಜದಲ್ಲಿ ಏಕದೃಷ್ಟಿಯಿಂದ ನೋಡುವುದಿಲ್ಲ ಎಂಬ ಕಾರಣ

– ಶಾಲಾ ಕಾಲೇಜು ಆಸುಪಾಸಿನಲ್ಲಿ ತಂಬಾಕು ವಸ್ತುಗಳನ್ನು ಮಾರದಿರಲು ಸರಕಾರ ಹೊರಡಿಸಿದ ಸೂಚನೆ 

ಶೇ. 80ರಷ್ಟು ತಂಬಾಕು ಕ್ಯಾನ್ಸರ್‌
ಜಿಲ್ಲೆಯಲ್ಲಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುವವರ ಪೈಕಿ ಶೇ. 80ರಷ್ಟು ತಂಬಾಕು ಕ್ಯಾನ್ಸರ್‌ ರೋಗಕ್ಕೆ ಒಳಗಾಗುತ್ತಿದ್ದು, ಗ್ರಾಮೀಣ ಭಾಗದವರು ಹೆಚ್ಚಾಗಿದ್ದಾರೆ. ಕೆಲಸದ ಒತ್ತಡದ ನಿವಾರಣೆಗಾಗಿ ಮಹಿಳೆಯರೂ ಗುಟ್ಕಾ ಚಟಕ್ಕೆ ಒಳಗಾಗುತ್ತಿದ್ದಾರೆ.
– ಡಾ| ರಾಜೇಶ್ವರಿ ದೇವಿ, ವೈದ್ಯಕೀಯ ಅಧೀಕ್ಷಕಿ, ವೆನ್ಲಾಕ್‌ ಆಸ್ಪತ್ರೆ ಮಂಗಳೂರು

ಕಾನೂನು ಉಲ್ಲಂಘನೆ
ಅಪ್ರಾಪ್ತ ವಯಸ್ಸಿನ ಮಕ್ಕಳು ಹೆಚ್ಚಾಗಿ ತಂಬಾಕು ಚಟಕ್ಕೆ ಬಲಿಯಾಗುತ್ತಿದ್ದಾರೆ. ಸಾರ್ವಜನಿಕ ಪ್ರದೇಶ ಸಹಿತ ಕ್ಲಬ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ತಂಬಾಕು ಸೇವನೆ ನಿಷೇಧ ಎಂದಿದ್ದಾರೂ, ಕಾನೂನು ಉಲ್ಲಂಘನೆಯಾಗುತ್ತಿದೆ. ಅಂತಹ ವರನ್ನು ಶಿಕ್ಷೆಗೆ ಗುರಿಪಡಿಸಬೇಕು. 
– ಡಾ| ವಿಶಾಲ್‌ ರಾವ್‌,  ಕ್ಯಾನ್ಸರ್‌ ತಜ್ಞ

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next