ಹುಣಸೂರು: ತಾಲೂಕಿನ ಚಿಲ್ಕುಂದ ತಂಬಾಕು ಮಾರುಕಟ್ಟೆಯಲ್ಲಿ ಸೋಮವಾರ ತಂಬಾಕು ಬೆಲೆ ದಿಢೀರ್‌ಕುಸಿತದಿಂd ಆಕ್ರೋಶಗೊಂಡಬೆಳೆಗಾರರು ಹರಾಜು ಸ್ಥಗಿತಗೊಳಿಸಿದರು.
ಮಾರುಕಟ್ಟೆಯಲ್ಲಿ ಹನಗೋಡು ಹೋಬಳಿಯ ಅಬ್ಬೂರು ಕ್ಲಸ್ಟರ್ ಸುತ್ತಮುತ್ತಲ ಹಳ್ಳಿಗಳ ತಂಬಾಕುಹರಾಜು ಪ್ರಕ್ರಿಯೆ ಇತ್ತು. ಮಾರುಕಟ್ಟೆಗೆ 1200ಕ್ಕೂಹೆಚ್ಚು ಬೇಲ್‌ಗಳು ಬಂದಿತ್ತು. ಬೆಳಗ್ಗೆ ಎರಡು ಲೈನ್‌ನಹರಾಜಿನಲ್ಲಿ ಉತ್ತಮ ತಂಬಾಕಿಗೆ ಬೆಲೆ ಕಡಿಮೆ ಮಾಡಿ, ಕಡಿಮೆ ದರ್ಜೆಯ ತಂಬಾಕು ಸೇರಿದಂತೆ ಸರಾಸರಿ ಬೆಲೆ ಸಿಗುವಂತೆ ಕಂಪನಿಗಳು ಹರಾಜು ಕೂಗುತ್ತಿದ್ದರು. ಈ ವೇಳೆ ಗುಣಮಟ್ಟದ ತಂಬಾಕಿಗೆ ಬೆಲೆ ದಿಢೀರ್ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ಬೆಳೆಗಾರರು ಹರಾಜನ್ನು ನಿಲ್ಲಿಸಿ ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿ ಕೆಲ ಹೊತ್ತು ಬಾಗಿಲು ಬಂದ್ ಮಾಡಿದರು.
ಸಂಧಾನ ಬಳಿಕ ಹರಾಜು ಶುರು: ಈ ವೇಳೆ ಹರಾಜು ಅಧೀಕ್ಷಕ ಸಿದ್ಧ ಹರಾಜು ಬೆಳೆಗಾರರನ್ನು ಮನವೊಲಿಸಿದರಾದರೂ ಪ್ರಯೋಜನವಾಗಿಲ್ಲ. ಈಬಗ್ಗೆ ಮಾಹಿತಿ ಪಡೆದ ತಂಬಾಕು ಮಂಡಳಿಯಪ್ರಾದೇಶಿಕ ವ್ಯವಸ್ಥಾಪಕ ಮಂಜುರಾಜ್, ಬೆಳೆಗಾರನ್ನು ಸಮಾಧಾನಪಡಿಸಿದರಾದರೂ ರೈತರು ಸ್ಪಂದಿಸಲಿಲ್ಲ.
ಕಡಿಮೆ ದರ್ಜೆ ತಂಬಾಕಿಗೆ ಸಾಕಷ್ಟು ಕಡಿಮೆ ಬೆಲೆ ನೀಡುತ್ತಿದ್ದಾರೆ. ಅದೇ ರೀತಿ ಉತ್ತಮ ತಂಬಾಕಿಗೆ ಬೆಲೆಯೂ ಏರಿಳಿತವಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲೂ ಈ ಬಾರಿ ಉತ್ಕೃಷ್ಟ ತಂಬಾಕುಬೆಳೆದಿದ್ದೇವೆ. ಇಂಥ ಸಮಯದಲ್ಲಿ ಕಂಪನಿಗಳು ಬೆಳೆಗಾರರ ನೆರವಿಗೆ ಬರುವ ಬದಲು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿವೆ ಎಂದು ಬೆಳೆಗಾರರು ದೂರಿದರು. ಪ್ರಾದೇಶಿಕ ವ್ಯವಸ್ಥಾಪಕರು ಕಂಪನಿ ಬೈಯರ್ ಗಳೊಂದಿಗೆ ಚರ್ಚಿಸಿ ಉತ್ತಮ ಬೆಲೆ ಕೊಡಿಸುವ ಭರವಸೆ ಮೇರೆಗೆ ಮಧ್ಯಾಹ್ನದ ನಂತರ ಹರಾಜು ಆರಂಭಗೊಂಡು ಸಂಜೆವರೆಗೂ ನಡೆಯಿತು.
ಸರಾಸರಿ ಬೆಲೆ 144 ರೂ: ತಂಬಾಕು ಮಾರುಕಟ್ಟೆ ಉತ್ತಮವಾಗಿ ನಡೆಯುತ್ತಿದೆ. ಕಡಿಮೆ ದರ್ಜೆ ತಂಬಾಕು ಹೆಚ್ಚಿದ್ದರಿಂದ ಬೆಲೆ ಕಡಿಮೆಯಾಗಿತ್ತು. ಗುಣಮಟ್ಟಕ್ಕೆ ತಕ್ಕಂತೆ ಖರೀದಿದಾರರು ಬೆಲೆ ನೀಡುತ್ತಿದ್ದಾರೆ. ಉತ್ಕೃಷ್ಠ ತಂಬಾಕಿಗೆ ಸರಾಸರಿ ಬೆಲೆ 172.44 ರೂ ಇದ್ದರೆ, ಮಾರುಕಟ್ಟೆ ಸರಾಸರಿ ದರ 143.98 ರೂ. ಇದೆ. ರೈತರು ಆತಂಕಗೊಳ್ಳದೇ ಸಕಾಲದಲ್ಲಿ ತಂಬಾಕನ್ನು ಮಾರಾಟ ಮಾಡಬೇಕೆಂದು ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಹರಾಜು ಅಧೀಕ್ಷಕ ಸಿದ್ದರಾಜು ತಿಳಿಸಿದ್ದಾರೆ.