Advertisement

ತಂಬಾಕು ಮುಕ್ತ ಕೋಡಿಬೆಂಗ್ರೆ: ನಾಳೆ ಜಿಲ್ಲಾಡಳಿತ ಘೋಷಣೆ

11:33 AM May 30, 2022 | Team Udayavani |

ಮಲ್ಪೆ: ಕೋಡಿ ಗ್ರಾಮದ ಪಡುತೋನ್ಸೆ ಗ್ರಾಮಕ್ಕೆ ತಾಗಿಕೊಂಡಿರುವ ಕೋಡಿಬೆಂಗ್ರೆಯನ್ನು ತಂಬಾಕು ಮುಕ್ತ ಕೋಡಿ ಬೆಂಗ್ರೆ ಎಂದು ಜಿಲ್ಲಾಡಳಿತ ಮಾ. 31ರಂದು ಅಧಿಕೃತವಾಗಿ ಘೋಷಣೆ ಮಾಡಲಿದೆ.

Advertisement

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ವತಿಯಿಂದ ತಂಬಾಕು ಮುಕ್ತ ಹಳ್ಳಿಗಾಗಿ ಸರ್ವೇ ಕಾರ್ಯವನ್ನು ನಡೆಸಲಾಗಿ, ಕಳೆದ 27 ವರ್ಷಗಳಿಂದ ತಂಬಾಕು ಮುಕ್ತವನ್ನಾಗಿಸಿದ ಕೋಡಿ ಬೆಂಗ್ರೆಯನ್ನು ಆಯ್ಕೆ ಮಾಡಲಾಗಿದೆ.

ಜನರಿಂದಲೇ ಆದೇಶ

ಈ ಭಾಗದ ಜನರಿಗೆ ಯಾವುದೇ ಸರಕಾರವಾಗಲಿ, ಆರೋಗ್ಯ ಇಲಾಖೆಯಾಗಲಿ ಮದ್ಯಪಾನ ನಿಷೇಧ, ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕೆಂಬ ಯಾವುದೇ ಆದೇಶವನ್ನು ನೀಡಿಲ್ಲ, ಯಾವ ಕಾಯ್ದೆಯನ್ನು ತಂದಿಲ್ಲ. ಅದರೂ ಇಲ್ಲಿನ ಜನ ಕಳೆದ 27 ವರ್ಷಗಳಿಂದ ಸ್ವಯಂಪ್ರೇರಿತರಾಗಿ ಮದುವೆ ಮುನ್ನ ದಿನದ ಮೆಹಂದಿ ಕಾರ್ಯಕ್ರಮಕ್ಕೆ ಮಧುಮಾಂಸ ನಿಷೇಧಿಸುವ ಜತೆಗೆ ತಂಬಾಕು ಮುಕ್ತ ಪ್ರದೇಶವನ್ನಾಗಿಸಿದ್ದಾರೆ.

ಅಂಗಡಿಗಳಲ್ಲಿಯೂ ನಿಷಿದ್ಧ

Advertisement

ಇಲ್ಲಿ ಒಂದು ಬದಿ ಸಮುದ್ರ, ಎರಡು ಬದಿಯಲ್ಲಿ ನದಿಗಳು ಹರಿಯುತ್ತದೆ. ಸುಮಾರು 290ರಷ್ಟು ಮನೆಗಳಿವೆ. ಶೇ. 70ರಷ್ಟು ಮೊಗವೀರರು, ಉಳಿದಂತೆ ಬಿಲ್ಲವ, ಖಾರ್ವಿ, ಮುಸ್ಲಿಂ ಸಮುದಾಯದ ಮಂದಿ ಇಲ್ಲಿದ್ದಾರೆ. 12 ಅಂಗಡಿಗಳಿವೆ, ಇಲ್ಲಿನ ಯಾವ ಅಂಗಡಿಗಳಲ್ಲೂ ತಂಬಾಕು ಸಿಗುತ್ತಿಲ್ಲ. ಎಲೆ ಅಡಿಕೆಯನ್ನು ಹೊರತುಪಡಿಸಿ ಮದ್ಯ ತಂಬಾಕು ಮಾರಾಟವನ್ನು ಪೂರ್ಣ ನಿಷೇಧಿಸಲಾಗಿದೆ.

ವಿಶ್ವ ತಂಬಾಕು ರಹಿತ ದಿನ

ಜಿಲ್ಲಾಡಳಿತ, ಜಿ.ಪಂ., ರಾಷ್ಟ್ರೀಯ ತಂಬಾಕು ನಿಯಂತ್ರಣ, ಜಿಲ್ಲಾ ಸರ್ವೇಕ್ಷಣ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೋಡಿ ಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಡಿಬೆಂಗ್ರೆ ದುರ್ಗಾಪರಮೇಶ್ವರೀ ದೇಗುಲ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮೇ 31ರಂದು ಅಪರಾಹ್ನ 3.30ಕ್ಕೆ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಮುಕ್ತ ಕೋಡಿಬೆಂಗ್ರೆ ಅಧಿಕೃತ ಘೋಷಣೆ ಕೋಡಿಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ನಡೆಯಲಿದೆ.

ಮದ್ಯಪಾನ ಆರಂಭ ಎಲ್ಲಿಂದ?

ಮಕ್ಕಳು ಕುಡಿಯಲು ಶುರು ಮಾಡುವುದೇ ಮೆಹಂದಿ ಕಾರ್ಯಕ್ರಮದಲ್ಲಿ. ವಿದ್ಯಾವಂತ ಯುವಕರು ಮದ್ಯಪಾನಕ್ಕೆ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ತೋರಿಬಂತು. ಈ ನಿಟ್ಟಿನಲ್ಲಿ ಅಂದೇ ಊರವರೆಲ್ಲ ಸೇರಿ ಮಹತ್ವದ ನಿರ್ಧಾರವನ್ನು ಕೈಗೊಂಡೆವು. ಎಲ್ಲರೂ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದೆ ಒಮ್ಮತದಿಂದ ಈ ಒಂದು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ನಾಗರಾಜ್‌ ಬಿ. ಕುಂದರ್‌, ಕೋಡಿ ಬೆಂಗ್ರೆ, ಮೀನುಗಾರ ಮುಖಂಡರು

ಯುವ ಜನರೇ ತುತ್ತು

ಈ ಹಿಂದೆ ಶಾಲಾ ಮಕ್ಕಳು, ಯುವ ಜನರು ತಂಬಾಕಿನ ದಾಸರಾಗಿ ಬಿಡುತ್ತಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಎಲ್ಲ ಅಂಗಡಿಗಳಲ್ಲೂ ಗುಟ್ಕಾ ಮಾರಾಟವನ್ನೇ ನಿಷೇಧಿಸಲಾಗಿದೆ. ಹಿಂದಿನ ಕಾಲದಲ್ಲಿ 50-60ರ ಹರೆಯದ ಕಾಲದಲ್ಲಿ ಜನರನ್ನು ಕಾಡುತ್ತಿದ್ದ ಕ್ಯಾನ್ಸರ್‌ ಈಗ 30-40ರ ವಯಸ್ಸಿನಲ್ಲಿಯೇ ಕಂಡು ಬರುತ್ತಿರುವುದು ಆತಂಕಕಾರಿ. ನಾಗೇಶ್‌ ತಿಂಗಳಾಯ, ಕೋಡಿಬೆಂಗ್ರೆ, ಸ್ಥಳೀಯರು

ಹಳ್ಳಿಗಳಲ್ಲಿ ಸರ್ವೇ

ಕೋಡಿ ಬೆಂಗ್ರೆಯನ್ನು ತಂಬಾಕು ಮುಕ್ತ ಹಳ್ಳಿಯನ್ನಾಗಿ ಮೇ 31ರಂದು ಜಿಲ್ಲಾಡಳಿತದಿಂದ ಅಧಿಕೃತವಾಗಿ ಘೋಷಣೆಯಾಗಲಿದೆ. ಜಿಲ್ಲಾದ್ಯಂತ ವಿವಿಧ ಹಳ್ಳಿಗಳನ್ನು ತಂಬಾಕು ಮುಕ್ತವನ್ನಾಗಿಸಲು ಸರ್ವೇ ಕಾರ್ಯ ನಡೆಸಲಾಗುತ್ತದೆ. ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ

 ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next