ಮಾಗಡಿ: ತಂಬಾಕು ನಿಷೇಧ ಕುರಿತು ನಾಮಫಲಕ ಅಳವಡಿಸದ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು, ತಾಲೂಕು ಆರೋಗ್ಯ ಮತ್ತು ಪುರಸಭೆ ಅಧಿಕಾರಿಗಳು ಜಂಟಿಯಾಗಿ ದಿಢೀರ್ ದಾಳಿ ನಡೆಸಿ, 22 ಅಂಗಡಿ ಮಾಲಿಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ 2,200 ರೂ. ದಂಡ ವಸೂಲಿ ಮಾಡಿದ್ದಾರೆ.
ಪಟ್ಟಣದ ಹೊಸಪೇಟೆ ವೃತ್ತ ಇತರೆಡೆ ಒಟ್ಟು 22 ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿರುವ ತಂಬಾಕು ನಿಷೇಧ ಇಲಾಖೆ ಆಪ್ತ ಸಮಾಲೋಚನೆ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಈಗ ಮತ್ತೆ ಕಾರ್ಯಾರಣೆಗೆ ಇಳಿದಿದ್ದು, ತಂಬಾಕು ನಿಷೇಧ ನಾಮಫಲಕ ಅಳವಡಿಸದ ಅಂಗಡಿ ಪತ್ತೆ ಮಾಡಿ, ಮಾಲಿಕರಿಗೆ ಸಲಹೆ ನೀಡಿ, ಕನಿಷ್ಠ 100 ರೂ. ದಂಡ ವಿಧಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಮಾರಾಟ ನಿಲ್ಲಿಸಿದರೆ ರೋಗಗಳು ಹತೋಟಿಗೆ ಬರುತ್ತದೆ. ಅಂಗಡಿಗಳ ಮಾಲಿಕರು ತಂಬಾಕು ನಿಷೇಧ ನಿಯಮ ಕಡ್ಡಾಯವಾಗಿ ಪಾಲಿಸಬೇಕು.
ನಿಯಮ ಪಾಲಿಸದೆ ಪದೆ ಪದೇ ಮುಂದುವರಿದರೆ ಅಂಗಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಆರೊಗ್ಯ ಶಿಕ್ಷಣಾಧಿಕಾರಿ ರಂಗನಾಥ್ ಮಾತನಾಡಿ, ತಂಬಾಕು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ಇತರರಿಗೂ ರೋಗ ಹರಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಪುರಸಭಾ ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ಮಾಗಡಿ ತಂಬಾಕು ಮುಕ್ತ ಪಟ್ಟಣವನ್ನಾಗಿಸುವ ಧ್ಯೇಯ ನಮ್ಮದು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಎಲ್ಲರು ಕೈಜೋಡಿಸಬೇಕು ಎಂದು ತಿಳಿಸಿದರು. ಹಿರಿಯ ಆರೋಗ್ಯ ಸಹಾಯಕ ರಾಜಣ್ಣ, ಪ್ರಸನ್ನಕುಮಾರ್, ಪೊಲೀಸ್ ತೌಸಿಕ್ ಇತರರು ಇದ್ದರು.