Advertisement

ಯಾರಿಗೆ ಕೈ ಪಟ್ಟ? ಓರ್ವರಿಗೇ ವಿಪಕ್ಷ , ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬೇಡ

10:01 AM Oct 08, 2019 | Sriram |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಕ್ಕಾಗಿ ನಡೆಯುತ್ತಿರುವ ಪೈಪೋಟಿ ಜೋರಾಗಿದ್ದು, ಮೂಲ ಕಾಂಗ್ರೆಸಿಗರು ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನ ಓರ್ವರಿಗೇ ಬೇಡ ಎಂಬ ವಾದ ಮಂಡಿಸಿದ್ದಾರೆ. ಆದರೆ ಎರಡೂ ಸ್ಥಾನಗಳನ್ನು ಓರ್ವರಿಗೇ ನೀಡು ವಂತೆ ಸಿದ್ದು ಬಣದ ನಾಯಕರು ಬೇಡಿಕೆ ಇಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಧಾನಮಂಡಲದ ಉಭಯ ಸದನಗಳ ವಿಪಕ್ಷ ನಾಯಕನ ಆಯ್ಕೆಗಾಗಿ ಹೈಕಮಾಂಡ್‌ ಪ್ರತಿನಿಧಿಯಾಗಿ ನಗರಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಮಿಸ್ತ್ರಿ ಮುಂದೆ ಆಯ್ದ ಪ್ರಮುಖರು ತಮ್ಮ ಅಭಿಪ್ರಾಯ ಮಂಡಿಸಿದರು.

Advertisement

ಈ ಮಧ್ಯೆ ಕಾಂಗ್ರೆಸ್‌ ನಾಯಕರಿಗೆ ಕಾಂಗ್ರೆಸ್‌ ಉಳಿಸುವ ಬುದ್ಧಿ ಬರಲಿ ಎಂಬ ಘೋಷವಾಕ್ಯ ದೊಂದಿಗೆ ಹಿರಿಯ ಕಾಂಗ್ರೆಸ್‌ ನಾಯಕ ಎಚ್‌. ಹನುಮಂತಪ್ಪ ಅವರು ಕೆಪಿಸಿಸಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಅಲ್ಲಿಗೆ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ ಹಾಗೂ ಕೆ.ಎಚ್‌. ಮುನಿಯಪ್ಪ ಅವರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷ.

ಎಲ್ಲರ ಅಭಿಪ್ರಾಯ ಸಂಗ್ರಹಿಸಿರುವ ಮಿಸ್ತ್ರಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ಒದಗಿಸಲಿದ್ದು, ಅ. 10ರೊಳಗೆ ವಿಪಕ್ಷ ನಾಯಕನ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಈಗ “ಚೆಂಡು’ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳಕ್ಕೆ ಬಿದ್ದಂತಾಗಿದೆ.

ಮಿಸ್ತ್ರಿ ಅವರು ವಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ರಾಜ್ಯದ 60 ನಾಯಕರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದು, ಬಹುತೇಕ ನಾಯಕರು ಜಾತಿ, ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮೂಹಿಕ ನಾಯ ಕತ್ವದಲ್ಲಿ ಪಕ್ಷ ಮುನ್ನಡೆಸಬೇಕು ಎಂಬ ಅಭಿ ಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಕಾಂಗ್ರೆಸಿಗರ ವಾದ
ಪ್ರಮುಖವಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಮೂಲ ಹಾಗೂ ವಲಸೆ ಕಾಂಗ್ರೆಸಿಗರ ನಡುವೆ ಪೈಪೋಟಿ ನಡೆಯುತ್ತಿದ್ದು, ವಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಎರಡೂ ಸ್ಥಾನಗಳನ್ನು ಒಬ್ಬರಿಗೆ ನೀಡಬಾರದು ಎನ್ನುವ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್‌ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಜಾತಿ, ಪ್ರಾದೇಶಿಕತೆ ಲೆಕ್ಕಾಚಾರ
ಪಕ್ಷದಲ್ಲಿ ಜವಾಬ್ದಾರಿಗಳನ್ನು ಜಾತಿ ಹಾಗೂ ಪ್ರಾದೇಶಿಕವಾಗಿ ಹಂಚಿಕೆ ಮಾಡಬೇಕೆಂಬ ಸಲಹೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕುರುಬ ಸಮಾಜದ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಆದರೆ ಇಬ್ಬರೂ ದಕ್ಷಿಣ ಕರ್ನಾಟಕ ಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ವಿಪಕ್ಷ ನಾಯಕನ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು ಎಂಬ ಸಲಹೆಯನ್ನು ಸತೀಶ್‌ ಜಾರಕಿಹೊಳಿ, ಎಚ್‌.ಕೆ.ಪಾಟೀಲ್‌ ಸಹಿತ ಕೆಲವು ನಾಯಕರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಿಸ್ತ್ರಿಗೆ ಪತ್ರ
ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡುವಂತೆ ಮಾಜಿ ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಜಮೀರ್‌ ಅಹ್ಮದ್‌ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಮಧುಸೂದನ್‌ ಮಿಸಿŒ ಅವರಿಗೆ ಪತ್ರ ನೀಡಿದ್ದಾರೆ ಎನ್ನಲಾಗಿದ್ದು, ಬೇಕಿದ್ದರೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತ್ಯೇಕ ಮಾತುಕತೆ
ಮಿಸ್ತ್ರಿಯವರು ಪ್ರತಿಯೋರ್ವ ನಾಯಕ ರಿಂದ ಪ್ರತ್ಯೇಕ ಅಭಿಪ್ರಾಯ ಸಂಗ್ರಹಿ ಸುವ ಸಂದರ್ಭ ದಲ್ಲಿಯೇ ಮೂಲ ಕಾಂಗ್ರೆಸ್‌ ನಾಯಕರಾಗಿರುವ ಎಚ್‌.ಕೆ. ಪಾಟೀಲ್‌, ಕೆ.ಎಚ್‌. ಮುನಿಯಪ್ಪ ಹಾಗೂ ಬಿ.ಕೆ. ಹರಿ ಪ್ರಸಾದ್‌ ಪ್ರತ್ಯೇಕವಾಗಿ ಗುಪ್ತ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಗೆ ಗೈರು
ಪಕ್ಷದ ನಾಯಕತ್ವ ವಹಿಸುವ ಕುರಿತು ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೇಂದ್ರದ ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್‌ ಫೆರ್ನಾಂಡಿಸ್‌, ಮಾರ್ಗರೆಟ್‌ ಆಳ್ವ , ಡಿ.ಕೆ.ಶಿವಕುಮಾರ್‌, ಡಿ.ಕೆ. ಸುರೇಶ್‌ ಸಹಿತ ಪ್ರಮುಖ ನಾಯಕರು ಗೈರು ಹಾಜರಾಗಿದ್ದರು.

ಸಿದ್ದರಾಮಯ್ಯ ಬಣದ ಲೆಕ್ಕಾಚಾರ
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಬಣದ ನಾಯಕರು ವಾದ ಮಾಡಿದ್ದಾರೆ. ಒಂದು ವೇಳೆ ಬೇರೆಯವರಿಗೆ ನೀಡಬೇಕೆಂದರೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ನೀಡಬೇಕೆಂದು ತಿಳಿಸಿದ್ದಾರೆ. ಆಗ ಬ್ರಾಹ್ಮಣ ಸಮುದಾಯದ ನಾಯಕರಾಗಿರುವ ದಿನೇಶ್‌ ಗುಂಡೂರಾವ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿದರೆ, ಅದನ್ನು ಕೃಷ್ಣ ಭೈರೇಗೌಡ ಅಥವಾ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌ ಅವರಿಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದು ಬಣದವರೇ ಹೆಚ್ಚು?
ಅಭಿಪ್ರಾಯ ಸಂಗ್ರಹಿಸಲು ಆಯ್ಕೆ ಮಾಡಿರುವ ಬಹುತೇಕ ನಾಯಕರಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಣದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಧುಸೂದನ್‌ ಮಿಸ್ತ್ರಿ ಎದುರು ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಭಿಪ್ರಾಯ ತಿಳಿಸಲು ಆಯ್ದ 63 ಜನ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಮಾಜಿ ಶಾಸಕರು ಹಾಗೂ ಸಚಿವರು ತಾವೂ ಅಭಿಪ್ರಾಯ ಹೇಳಲು ಆಗಮಿಸಿ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ತಿಳಿದು ಅಸಮಾಧಾನಗೊಂಡು ತೆರಳಿದ್ದಾರೆ ಎನ್ನಲಾಗಿದೆ. ಕೆಲವರು ಪಕ್ಷದಲ್ಲಿ ತಮ್ಮ ಸ್ಥಾನಮಾನ ಮಾಹಿತಿ ನೀಡಿ ಮಿಸ್ತ್ರಿ ಮುಂದೆ ಅಭಿಪ್ರಾಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮ್ಯಯ, ಎಚ್‌.ಕೆ. ಪಾಟೀಲ್‌ ನಡುವೆ ಪೈಪೋಟಿ ಇದೆ. ಆದರೆ ಓರ್ವರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಲು ಅವಕಾಶ ಇರುವುದು. ಹೈಕಮಾಂಡ್‌ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತದೆ.
– ರಾಮಲಿಂಗಾ ರೆಡ್ಡಿ ,
ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next