Advertisement

‘ಅನುಭವ ಮಂಟಪ’ನಿರ್ಮಾಣಕ್ಕೆ ಸಿಗುತ್ತಾ ವೇಗ?

12:48 PM Feb 11, 2022 | Team Udayavani |

ಬೀದರ: ಕಲ್ಯಾಣ ಕ್ರಾಂತಿಯ ನೆಲ ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ನನೆಗುದಿಗೆ ಬಿದ್ದಿರುವ ಬಸವ ಭಕ್ತರ ಕನಸಿನ ಯೋಜನೆಗೆ ಒಂದಿಷ್ಟು ವೇಗ ಸಿಕ್ಕಂತಾಗಿದೆ. ಬಹು ನಿರೀಕ್ಷಿತ ಬೃಹತ್‌ ಯೋಜನೆ ಕಾರ್ಯಾರಂಭ ಸಾಧ್ಯತೆ ಹೆಚ್ಚಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಗೆ ಅಂದಾಜು ಮೊತ್ತ 560 ಕೋಟಿ ರೂ. ಅನುದಾನ ಬಿಡುಗಡೆಗೆ ಸಮ್ಮತಿ ಸಿಕ್ಕಿದೆ. ಅಷ್ಟೇ ಅಲ್ಲ ಇತ್ತೀಚೆಗೆ ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಮಂಟಪದ ಕಾಮಗಾರಿಗೆ ಎದುರಾಗಿರುವ ಎಲ್ಲ ತೊಡಕುಗಳನ್ನು ನಿವಾರಿಸಿ ಶೀಘ್ರದಲ್ಲಿ ಕೆಲಸ ಆರಂಭಿಸಲು ಅಗತ್ಯ ಕ್ರಮ ವಹಿಸಲು ಸೂಚಿಸಿದ್ದರು. ಈ ಬೆಳವಣಿಗೆಯಿಂದ ಯೋಜನೆ ವಿಷಯದಲ್ಲಿ ಹೊಸ ಆಶಾಭಾವ ಮೂಡಿದೆ. ‘

ಬಸವಣ್ಣ ನಡೆದಾಡಿದ ಪವಿತ್ರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಕಳೆದ ಜ.6ರಂದು ಶಿಲಾನ್ಯಾಸ ನೆರವೇರಿಸಿ, ತಮ್ಮ ಕನಸಿನ ಯೋಜನೆಯನ್ನು ಯಾವುದೇ ಅಡೆ-ತಡೆ ಇಲ್ಲದೇ ಎರಡು ವರ್ಷಗಳಲ್ಲೇ ತ್ವರಿತವಾಗಿ ಪೂರ್ಣಗೊಳಿಸಿ ದೇಶಕ್ಕೆ ಲೋಕಾರ್ಪಣೆ ಮಾಡಿಸುವ ವಾಗ್ಧಾನ ಮಾಡಿದ್ದರು. ಇದಕ್ಕಾಗಿ ಕಳೆದ ಬಜೆಟ್‌ನಲ್ಲಿ 500 ಕೋಟಿ ರೂ. ಪ್ರಕಟಿಸಿ, 200 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ, ಒಂದು ವರ್ಷ ಕಳೆದರೂ ಈವರೆಗೆ ಟೆಂಡರ್‌, ಡಿಪಿಆರ್‌ ಸಹ ಆಗದೇ ಯೋಜನೆ ಹಿನ್ನಡೆ ಕಂಡಿತು.

ವಿರೋಧ ಪಕ್ಷಗಳು ಕಾಗದ ಮೇಲೆ ಅನುಭವ ಮಂಟಪ ನಿರ್ಮಿಸಲು ಸರ್ಕಾರ ಹೊರಟಿದೆ ಎಂದು ಟೀಕಿಸಿದ್ದವು. ಈಗ ಪರಿಷ್ಕೃತ ಅಂದಾಜು ಮೊತ್ತ 560 ಕೋಟಿ ರೂ. ಅನುದಾನ ಬಿಡುಗಡೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ (ಬಿಕೆಡಿಬಿ) ಕೈಗೆತ್ತಿಕೊಂಡಿರುವ ಬೃಹತ್‌ ಯೋಜನೆಗೆ ಈಗಾಗಲೇ ಘೋಷಿತ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ ಎನ್ನಲಾಗಿದೆ. ಇನ್ನೂ ಅನುಭವ ಮಂಟಪಕ್ಕೆ ಅಗತ್ಯವಿರುವ ಭೂಮಿ ಸ್ವಾಧೀನ ಕೆಲಸ ಸಹ ಚುರುಕುಗೊಂಡಿದೆ.

ಪ್ರಸ್ತುತ ಪ್ರಾಧಿಕಾರದ ಬಳಿ 20 ಎಕರೆ ಮತ್ತು ದಾನವಾಗಿ ಬಂದಿರುವ 11 ಎಕರೆ ಸೇರಿ 31 ಎಕರೆ ಭೂಮಿ ಇದ್ದು, ಇನ್ನುಳಿದ 69 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಪ್ರಥಮ ಸಂಸತ್‌ ಎನಿಸಿಕೊಂಡಿರುವ ಅನುಭವ ಮಂಟಪ ನಿರ್ಮಾಣಕ್ಕೆ ಎದುರಾಗಿರುವ ತೊಡಕುಗಳು ನಿವಾರಣೆಗೊಂಡು, ಶರಣರ ಚಳವಳಿ ನೆನಪುಗಳನ್ನು ಮರುಸೃಷ್ಟಿಸುವಂಥ ಕೇಂದ್ರ ಬೇಗ ತಲೆ ಎತ್ತಲಿ ಎಂಬುದು ಬಸವಾನುಯಾಯಿಗಳ ಆಶಯ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಮೇಲೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಒತ್ತಡ ಹಾಕಬೇಕಿದೆ.

Advertisement

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ 560 ಕೋಟಿ ರೂ. ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಆದಷ್ಟೂ ಬೇಗ ಯೋಜನೆ ಕಾರ್ಯಾರಂಭ ಆಗಲಿದೆ. ಮಂಟಪ ನಿರ್ಮಾಣ ಸಂಬಂಧಿಸಿದಂತೆ ಕಳೆದ ವಾರ ಸಿಎಂ ಸಭೆ ನಡೆಸಿದ್ದು, ಬಸವ ಭಕ್ತರ ಭಾವನೆಗೆ ಬೆಲೆ ಕೊಟ್ಟು ಕಾರ್ಯ ಮಾಡಬೇಕಾಗಿದೆ. ಹಾಗಾಗಿ ಮಂಟಪ ನಿರ್ಮಾಣಕ್ಕೆ ವೇಗ ನೀಡುವುದು ಮತ್ತು ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕೆಂದು ನಾನು ಒತ್ತಾಯಿಸಿದೆ. ಅದರಂತೆ ಅನುದಾನಕ್ಕೆ ಸಮ್ಮತಿ ದೊರೆತಿದೆ. -ಭಗವಂತ ಖೂಬಾ, ಕೇಂದ್ರದ ರಸಾಯನಿಕ ರಸಗೊಬ್ಬರ ಖಾತೆ ಸಚಿವ

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಶರಣರ ನಾಡು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ 560 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸಿಕ್ಕಿರುವುದರಿಂದ ಸಂತೋಷವಾಗಿದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಕಾಮಗಾರಿ ಶೀಘ್ರ ಆರಂಭಿಸಲು ನಿರ್ದೇಶನ ನೀಡಿದ್ದರು. ಸಭೆಯಲ್ಲಿ ಅನುದಾನ ಕೋರಿ ಸಿಎಂಗೆ ಒತ್ತಾಯಿಸಿದ್ದೆ. ಅದರಂತೆ ಸಚಿವ ಸಂಪುಟದಲ್ಲಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ. ಕಾಮಗಾರಿ ಶೀಘ್ರ ಆರಂಭಿಸುವ ದಿಶೆಯಲ್ಲಿ ಪ್ರಯತ್ನಿಸಲಾಗುವುದು. -ಪ್ರಭು ಚವ್ಹಾಣ, ಪಶು ಸಂಗೋಪನಾ ಸಚಿವರು

-­ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next