Advertisement

ಯುವತಿಯರಿದ್ದ  ಕಾರು ನದಿಗೆ; ದಡದಲ್ಲಿದ್ದವರಿಂದ ರಕ್ಷಣೆ

10:12 AM Dec 11, 2017 | Team Udayavani |

ಪ‌ಣಂಬೂರು: ಮರವೂರು ಬಳಿ ನಿರ್ಮಿಸಲಾಗಿರುವ ವೆಂಟೆಡ್‌ ಡ್ಯಾಂ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ. ಆದರಲ್ಲಿದ್ದ ನಗರದ ಖಾಸಗಿ ನರ್ಸಿಂಗ್‌ ವಿದ್ಯಾರ್ಥಿನಿಯರಿಬ್ಬರನ್ನು ದಾರಿಹೋಕರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ವಿದ್ಯಾರ್ಥಿನಿಯರಾದ ನಿಶಾ ಹಾಗೂ ಪ್ರತೀಕ್ಷಾ ಪುನರ್‌ಜನ್ಮ ಪಡೆದವರು.

Advertisement

ಮರವೂರು ಬಳಿ ವೆಂಟೆಡ್‌ ಡ್ಯಾಂ ಇದ್ದು ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಜಾ ದಿನಗಳಲ್ಲಿ ಹೋಗುವುದು ಸಾಮಾನ್ಯ. ಆದರಂತೆ ಸ್ನೇಹಿತನೊಬ್ಬನ ದುಬಾರಿ ಕಾರನ್ನು ಎರವಲು ಪಡೆದು ಚಾಲನೆ ಮಾಡಿಕೊಂಡು ಮರವೂರು ಕಿಂಡಿ ಅಣೆಕಟ್ಟು ನೋಡಲು ವಿದ್ಯಾರ್ಥಿನಿಯರು ತೆರಳಿದ್ದರು. ಸ್ವಲ್ಪ ಸಮಯ ಅಲ್ಲೇ ಇದ್ದು, ಬಳಿಕ ಕಾರು ತಿರುಗಿಸಿ ವಾಪಸು ಹೋಗಬೇಕೆನ್ನುವಷ್ಟರಲ್ಲಿ ಏಕಾ ಏಕಿ  ನಿಯಂತ್ರಣ ತಪ್ಪಿದ ಕಾರು ಅಲ್ಲಿದ್ದ ನಾಲ್ಕು  ಕಂಬಗಳಿಗೆ  ಢಿಕ್ಕಿ ಹೊಡೆದು ನೇರ ನದಿಗೆ ಜಾರಿತು. ಇದಕ್ಕೂ ಮೊದಲು ಕಾರು ಕಂಬಗಳಿಗೆ ಢಿಕ್ಕಿ ಹೊಡೆದ ರಭಸಕ್ಕೆ ಏರ್‌ ಬ್ಯಾಗ್‌ ತೆರೆದುಕೊಂಡಿತ್ತು. ನಿಧಾನವಾಗಿ ಕಾರಿನ ಮುಂಭಾಗ ಮುಳುಗತೊಡಗಿದಾಗ ಇಬ್ಬರೂ ಹಿಂಬದಿ ಸೀಟಿನಲ್ಲಿ ಬಂದು ಕುಳಿತಿದ್ದರು.ಈ ಸಂದರ್ಭ ಅದೇ ದಾರಿಯಾಗಿ ಚಹಾ ಕುಡಿಯಲು ಹೋಗುತ್ತಿದ್ದ ಮೂವರು ಯುವಕರು ಕಾರು ಮುಳುಗುತ್ತಿರುವುದನ್ನು ಕಂಡು ನದಿಗೆ ಹಾರಿ ನೀರಿನಲ್ಲಿ ಕಾರಿನೊಳಗಿದ್ದ ವಿದ್ಯಾರ್ಥಿನಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಬ್ರೇಕ್‌ ಎಂದು ಎಕ್ಸಿಲೇಟರ್‌ ತುಳಿದಳು !
ಕಾರು ರಿವರ್ಸ್‌ ತೆಗೆದು ಇನ್ನೇನು ಹೊರಡ ಬೇಕೆನ್ನುವಷ್ಟರಲ್ಲಿ  ತಪ್ಪೆಸಗಿ ಬ್ರೇಕ್‌ ಒತ್ತುವ ಬದಲು ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾಯಿತು. 10 ಲಕ್ಷ ರೂ. ದುಬಾರಿ ಚೆವರ್‌ ಲೆಟ್‌ ಕಾರು ಇದಾಗಿದ್ದರಿಂದ  ಏರ್‌ ಬ್ಯಾಗ್‌ ತೆರೆದುಕೊಂಡಿತು  ಮಾತ್ರವಲ್ಲ ಕಾರೊಳಗ್ಗೆ ನೀರು ನುಗ್ಗಲೂ ಸ್ವಲ್ಪ ಸಮಯ ತಗಲಿದ್ದರಿಂದ  ವಿದ್ಯಾರ್ಥಿನಿಯರ ಜೀವ ಉಳಿಯಲು ಸಾಧ್ಯವಾಯಿತು.

ವಿದ್ಯಾರ್ಥಿನಿಯರ ಜೀವ ಉಳಿಸಿದವರಲ್ಲಿ  ಆದ್ಯಪಾಡಿಯ ಶರತ್‌ ಶೆಟ್ಟಿ ಉದಯವಾಣಿಯೊಂದಿಗೆ ಮಾತನಾಡಿ, ಇಬ್ಬರು ಸ್ನೇಹಿತರೊಂದಿಗೆ ಬೆಳಗ್ಗೆ 11 ಗಂಟೆಗೆ ಚಹಾ ಕುಡಿಯಲು ಮುಖ್ಯ ರಸ್ತೆಯಲ್ಲಿ  ಕಾವೂರು ಕಡೆ ಹೋಗುತ್ತಿದ್ದಾಗ ಕಾರು ನದಿಯಲ್ಲಿ ಮುಳುಗುತ್ತಿರುವುದನ್ನು ಕಂಡೆವು. ಶನಿವಾರ ರಾತ್ರಿ ಬಿದ್ದಿರ ಬಹುದು ಎಂದುಕೊಂಡೆವು. ಆಷ್ಟರಲ್ಲಿ ಯುವಕನೊಬ್ಬ ಓಡಿ ಬಂದು ಕಾರಿನಲ್ಲಿ ಜನ ಇದ್ದಾರೆ ಎಂದು ಮಾಹಿತಿ ನೀಡಿದ. ತತ್‌ಕ್ಷಣ ನಮ್ಮ ಕಾರನ್ನು ತಿರುಗಿಸಿ ಕಾರು ಮುಳುಗುತ್ತಿದ್ದ  ಕಡೆ ಹೋದೆವು. ನನಗೆ ಮತ್ತು ಕುಮಾರ್‌ಗೆ ಈಜು ಬರುತ್ತಿದ್ದರಿಂದ  ತಡ ಮಾಡದೆ ನದಿಯಲ್ಲಿ ಈಜುತ್ತಾ ಕಾರು ಸಮೀಪಿಸಿದೆವು. ಆದಾಗಲೇ ಕಾರಿನ ಮುಂಭಾಗ ಮುಳುಗಿದ್ದರಿಂದ ಯುವತಿಯರು ಹಿಂದಿನ ಸೀಟಿನಲ್ಲಿ ಅರ್ದ ಮುಳುಗಿದ ಸ್ಥಿತಿಯಲ್ಲಿದ್ದರು. ಮುಂಬಾಗದ ಬಾಗಿಲು ತೆರೆದು ಅವರ ರಕ್ಷಣೆಗೆ ಯತ್ನಿಸುತ್ತಿದ್ದಂತೆ ಮತ್ತಷ್ಟು ನೀರು ನುಗ್ಗಿತ್ತು. ತತ್‌ಕ್ಷಣ ಇಬ್ಬರನ್ನೂ ನೀರಿನಿಂದ ಮೇಲೆ ತಂದೆವು ಎಂದರು.

ಕಾರು ಮಗುಚಿ ಬಿದ್ದಿರಲಿಲ್ಲ ಹಾಗೂ ನದಿಯಲ್ಲಿ  ನೀರು ಇಳಿಕೆಯಾಗುತ್ತಿದ್ದರಿಂದ ಜೀವ ಹಾನಿ ಯಾಗುವುದು ತಪ್ಪಿತು. ಸ್ವಲ್ಪ ತಡವಾಗಿದ್ದರೂ ನೀರಿನಲ್ಲಿ  ಮುಳುಗುತ್ತಿದ್ದರು. ಅಷ್ಟು ಅಗಲ ರಸ್ತೆಯಲ್ಲಿ ಕಾರು ನದಿಗೆ ಜಾರಿ ಬಿದ್ದಿರುವುದೇ ಅಶ್ಚರ್ಯ. ಕಾರು ಕಲಿಯುತ್ತಿರುವ ಸಂದರ್ಭ ನಿಯಂತ್ರಣ ತಪ್ಪಿ ಬಿದ್ದಿರಬಹುದು ಎಂದು ಶರತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next