ಗುಂಡ್ಲುಪೇಟೆ: ಮನೆಯೇ ಮೊದಲ ಪಾಠಶಾಲೆ. ಅಲ್ಲಿಂದಲೇ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಲು ಪೋಷಕರು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಹೇಳಿದರು.
ಪಟ್ಟಣದ ಶ್ರೀವಿನಾಯಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆಯಾಗಿದ್ದು, ಅವರಿಗೆ ತಾಯಿಗೆ ಮೊದಲ ಗುರು. ಆದ್ದರಿಂದ ಮನೆಯಿಂದಲೇ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿದಾಗ ಮಾತ್ರ ಅವರಿಂದ ನಾವು ಭವ್ಯ ಭಾರತವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲು ಪ್ರೇರೇಪಿಸಿ: ನಮ್ಮ ಪುಟ್ಟ ಕಂದಮ್ಮಗಳಿಗೆ ನಮ್ಮ ಆಚಾರ, ವಿಚಾರ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವು ಪಠಣ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪೋಷಕರು ಮುಂದಾಗಬೇಕು. ಇತ್ತೀಚಿಗೆ ಟಿವಿ ಮತ್ತು ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿದೆ. ಅವರನ್ನು ಆಕರ್ಷಿಸುವಲ್ಲಿ ಟಿವಿ ಮತ್ತು ಮೊಬೈಲ್ ಯಶಸ್ಸು ಸಾಧಿಸುತ್ತಿದೆ. ಪೋಷಕರು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ವಿದ್ಯಾಭ್ಯಾಸದ ಕಡೆ ಹೆಚ್ಚು ಆದ್ಯತೆ ನೀಡಲು ಪ್ರೇರೇಪಿಸಬೇಕು ಎಂದು ಹೇಳಿದರು.
ಶಿಸ್ತು ಕಲಿಸಲು ಶಾಲೆ ಪಾತ್ರ ಅಪಾರ: ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಲ್ಲಿ ಶಿಸ್ತು ಕಲಿಸುವಲ್ಲಿ ಶಾಲೆಯ ಪಾತ್ರ ಅಪಾರವಿದೆ. ಉತ್ತಮವಾದ ಪರಿಸರವನ್ನು ಹೊಂದಿರುವ ಈ ಶಾಲೆಯು ಸಾಮಾಜಿಕ ಕಳಕಳಿಯೊಂದಿಗೆ ತನ್ನ ಸೇವೆ ಸಲ್ಲಿಸುತ್ತಿದೆ. ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡುವುದರೊಂದಿಗೆ ಅವರಲ್ಲಿ ಹೆಚ್ಚು ಓದುವ ಮನೋಭಾವನೆಯನ್ನು ವಿದ್ಯಾಸಂಸ್ಥೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಹೆಚ್.ನಂಜಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಟಿ.ನಂದೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಪಿ.ಮಂಜಣ್ಣ, ಶಿಕ್ಷಣ ಸಂಯೋಜಕ ಪಿ.ಡಿ.ಮಲ್ಲಿಕಾರ್ಜುನ ಸ್ವಾಮಿ, ಶಾಲೆ ಪ್ರಾಂಶುಪಾಲೆ ನೀತಿ ಪಿ.ಕೆ., ಮುಖ್ಯ ಶಿಕ್ಷಕ ಡಿ.ಜಿ.ಲೋಕೇಶ್ ಮತ್ತು ಶಿಕ್ಷಕರು ಹಾಜರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಸಾರ್ವಜನಿಕರ ಮನಸೂರೆಗೊಳಿಸಿತು.