ನವದೆಹಲಿ: ಅವಿವಾಹಿತ ಮಹಿಳೆಗೂ ಸುರಕ್ಷಿತ ಗರ್ಭಪಾತದ ಹಕ್ಕನ್ನು ನಿರಾಕರಿಸುವುದು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಇತ್ತೀಚೆಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈಗ ವೈದ್ಯಕೀಯ ಗರ್ಭಪಾತ ಕಾಯ್ದೆ(ಎಂಟಿಪಿ) ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಮರುಪರಿಶೀಲಿಸಲು ನಿರ್ಧರಿಸಿದೆ.
ಅವಿವಾಹಿತ ಮಹಿಳೆಗೂ ವೈದ್ಯಕೀಯ ಸಲಹೆಯ ಮೇರೆಗೆ 24 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬಹುದೇ ಎಂಬ ಬಗ್ಗೆ ನ್ಯಾಯಪೀಠ ಪರಿಶೀಲಿಸಲಿದೆ.
ಗರ್ಭ ಧರಿಸಿ 24 ವಾರಗಳಾದರೂ ವೈದ್ಯರ ಒಪ್ಪಿಗೆಯ ಮೇರೆಗೆ ವಿವಾಹಿತರಿಗೆ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿರುವಾಗ ಇದೇ ಅವಕಾಶವನ್ನು ಅವಿವಾಹಿತ ಮಹಿಳೆಯರಿಗೆ ಏಕೆ ಕೊಡಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾ.ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಜತೆಗೆ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠವು, ಈ ಪರಿಶೀಲನಾ ಪ್ರಕ್ರಿಯೆಯಲ್ಲಿ ಕೋರ್ಟ್‌ಗೆ ನೆರವಾಗುವಂತೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ಸೂಚಿಸಿದೆ.