Advertisement

ಕೆಲಸಕ್ಕೆ ಹೋಗ್ಬೇಕಾ?; ಮಕ್ಕಳ ಚಿಂತೆ ಬಿಡಿ !

05:41 PM Jun 25, 2022 | Team Udayavani |

ಬಾಗಲಕೋಟೆ: ನೀವು ನಿತ್ಯವೂ ದುಡಿಯಲು ಹೋಗಬೇಕಾ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಬಿಟ್ಟು ಹೇಗೆ ಹೋಗೋದು ಎಂಬ ಚಿಂತೆಯೇ. ಹಾಗಾದರೆ, ಮಕ್ಕಳನ್ನು ನೋಡಿಕೊಳ್ಳುವ ಚಿಂತೆ ನಿಮಗೆ ಬೇಡ. ಅದಕ್ಕಾಗಿ ಜಿಪಂ ಹೊಸ ಯೋಜನೆ ಆರಂಭಿಸಿದೆ. ನೀವು, ಕೆಲಸಕ್ಕೆ ಹೋಗಿ ಬರುವವರೆಗೂ ನಿಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವ ಕರ್ತವ್ಯ ನಿರ್ವಹಿಸುತ್ತಿದೆ.

Advertisement

ಹೌದು, ನಿತ್ಯವೂ ಸರ್ಕಾರಿ, ಖಾಸಗಿ ನೌಕರಿಗೆ ಹೋಗುವ ಪೋಷಕರು, ನಿತ್ಯ ಬೇರೆ ಬೇರೆ ಕಡೆ ದುಡಿಯಲು ಹೋಗುವ ಮಹಿಳೆಯರ ಮಕ್ಕಳಿಗಾಗಿ ಜಿಲ್ಲಾಡಳಿತ, ಜಿಪಂ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯ, ಸರ್ಚ್‌ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಜಿಪಂ ಕಚೇರಿ ಆವರಣದಲ್ಲಿ ಶಿಶುಪಾಲನೆ ಕೇಂದ್ರ ಆರಂಭಿಸಲಾಗಿದೆ. ಸದ್ಯ ಈ ಕೇಂದ್ರದಲ್ಲಿ 7 ಜನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದು, ಒಟ್ಟು 17 ಜನ ಪೋಷಕರು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಹೆಸರು ನೋಂದಾಯಿಸಿದ್ದಾರೆ.

ಏನಿದು ಕೇಂದ್ರ?: ಒಬ್ಬಂಟಿ ಮಹಿಳೆಯರು ಅಥವಾ ಪುರುಷರು, ನಿತ್ಯ ಸರ್ಕಾರಿ ನೌಕರಿ, ಖಾಸಗಿ ಸೇವೆ ಅಥವಾ ಬೇರೆ ಬೇರೆ ಕಡೆ ದುಡಿಯಲು ಹೋಗುತ್ತಾರೆ. ಆದರೆ, ಪುಟ್ಟ ಪುಟ್ಟ ಮಕ್ಕಳನ್ನು ನೌಕರಿ, ಕೆಲಸಕ್ಕೆ ಹೋಗುವಾಗ ಕರೆದುಕೊಂಡು ಹೋಗುವುದು ಸಮಸ್ಯೆಯಾಗುತ್ತದೆ. ಮಕ್ಕಳು ಅಳುತ್ತಿದ್ದರೆ, ಖಾಸಗಿ ಸೇವೆಯಲ್ಲಿರುವವರು ಕೆಲಸ ನಿರ್ವಹಿಸುವುದೇ ಕಷ್ಟ. ಹೀಗಾಗಿ ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಹೊತ್ತ ಕೆಲಸಕ್ಕೆ ಬರುವ ಮಹಿಳೆಯರನ್ನು ಹಲವೆಡೆ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ಬನ್ನಿ ಎಂದು ಕೆಲಸವೇ ಬಿಡಿಸುವ ಪ್ರಸಂಗ ನಡೆಯುತ್ತವೆ.

ಆದರೆ, ಅವರು ದುಡಿಯದೇ ಇದ್ದರೆ ಬದುಕು ನಡೆಯಲ್ಲ. ಹೀಗಾಗಿ ಏನು ಮಾಡಬೇಕೆಂಬ ಚಿಂತೆಯಲ್ಲೇ ಸಾಲ ಮಾಡಿ ಬದುಕು ನಿರ್ವಹಿಸುತ್ತಾರೆ. ಅಂತವರಿಗಾಗಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಚ್‌ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯಡಿ ಜಿ.ಪಂ.ನ ಸಭಾ ಭವನದ ಎದುರಿಗೆ ಇರುವ, ಈ ಮೊದಲು ಸದಸ್ಯರ ವಿಶ್ರಾಂತಿಗಾಗಿ ಮೀಸಲಿದ್ದ ಕೊಠಡಿಯಲ್ಲೇ ಈಗ, ಮಕ್ಕಳ ಶಿಶುಪಾಲನಾ ಕೇಂದ್ರ ಆರಂಭಿಸಲಾಗಿದೆ.

ನೋಂದಣಿ ಕಡ್ಡಾಯ: ಉದ್ಯೋಗಸ್ಥ ಪೋಷಕರು ಮತ್ತು ದುಡಿಯುವ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನೆ ಕೇಂದ್ರದಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಬಿಡಬೇಕಾದರೆ ಮೊದಲು ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಪೋಷಕರು, ಪಾಲಕರ ಸಂಪೂರ್ಣ ವಿವರ ಪಡೆಯಲಾಗುತ್ತದೆ. ಅಲ್ಲದೇ ಮಕ್ಕಳ ಪಾಲನೆಗಾಗಿ, ಈ ಕೇಂದ್ರದಲ್ಲಿ ಬಿಡಲು ಪಾಲಕರೂ ಒಪ್ಪಿಕೊಂಡು ಬಿಡಬೇಕು. ಆಗ ಈ ಕೇಂದ್ರದ ಸಿಬ್ಬಂದಿ, ತಮ್ಮ ಸ್ವಯಂ ಮಕ್ಕಳಂತೆ ಉದ್ಯೋಗಸ್ಥ
ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

Advertisement

ಇಬ್ಬರು ತಾಯಂದಿರು: ಜಿಲ್ಲಾಡಳಿತ ಭವನದ ಜಿ.ಪಂ. ಸದಸ್ಯರ ಕೊಠಡಿಯಲ್ಲಿ ಆರಂಭಗೊಂಡ ಶಿಶುಪಾಲನೆ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸರ್ಚ್‌ ಸ್ವಯಂ ಸೇವಾ ಸಂಸ್ಥೆಯಿಂದ ಲಕ್ಷ್ಮಿ ಎನ್‌. ಗಾಯಕವಾಡ ಮತ್ತು ಪೂರ್ಣಿಮಾ ಮಸೂತಿ ಎಂಬ ಇಬ್ಬರು ತಾಯಂದಿರನ್ನು ನೇಮಕ ಮಾಡಲಾಗಿದೆ. ಇವರು ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಇಲ್ಲಿಗೆ ಬಿಟ್ಟು ಹೋಗುವ ಮಕ್ಕಳನ್ನು ಬೆಳಗ್ಗೆ 10ರಿಂದ ಸಂಜೆ 5:30ರ (ರಜೆ ದಿನ ಹೊರತುಪಡಿಸಿ) ವರೆಗೆ ನೋಡಿಕೊಳ್ಳುತ್ತಾರೆ. ಜತೆಗೆ ಆ ಮಕ್ಕಳಿಗೆ ರಾಗಿ ಗಂಜಿ ಸಹಿತ ವಿವಿಧ ಸಿಹಿ ತಿನಿಸುಗಳನ್ನು ಇಲಾಖೆಯಿಂದಲೇ ವ್ಯವಸ್ಥೆ ಮಾಡಲಾಗಿದೆ.

0 ದಿಂದ 6 ವರ್ಷದ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಡಬಹುದು. ನಿತ್ಯ ದುಡಿಯಲು ಹೋಗುವ ಮಹಿಳೆಯರ ಮಕ್ಕಳು, ಉದ್ಯೋಗಸ್ಥ-ಸರ್ಕಾರಿ ನೌಕರರ ಮಕ್ಕಳನ್ನು ಇಲ್ಲಿಗೆ ಬಿಡಬಹುದು. ಯಾವುದೇ ಶುಲ್ಕವಿಲ್ಲದೇ ಸರ್ಚ್‌ ಸ್ವಯಂ ಸೇವಾ ಸಂಸ್ಥೆಯಡಿ ಮಕ್ಕಳ ಪಾಲನೆ ಮಾಡಲಾಗುತ್ತದೆ. ಜತೆಗೆ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಆರೋಗ್ಯ, ದೈಹಿಕ ಅರಿವಿನ ಸಾಮಾಜಿಕ, ಭಾವನಾತ್ಮಕ ಬೆಳವಣಿಗೆ ಹೊಂದುವುದು, ಕಲಿಕಾ ಸಾಮಗ್ರಿ, ಆಟಿಕೆ ಸಾಮಗ್ರಿ, ಚಿತ್ರಪಟಗಳು, ಮಕ್ಕಳ ಸ್ನೇಹಿ ವಾತಾವರಣ ವ್ಯವಸ್ಥೆ ಮಾಡುವುದು ಈ ಕೇಂದ್ರದ ಮುಖ್ಯ ಆಶಯ. ಸದ್ಯ ಒಂದು ತಿಂಗಳ ಹಿಂದೆ ಆರಂಭಗೊಂಡ ಈ ಕೇಂದ್ರದಲ್ಲಿ 7 ಜನ ಮಕ್ಕಳು, ಇಲ್ಲಿ ನಿತ್ಯ ಪಾಲನೆಗೊಳ್ಳುತ್ತಿದ್ದಾರೆ.

ಉದ್ಯೋಗಸ್ಥ ಪೋಷಕರು, ದುಡಿಯುವ ಮಹಿಳೆಯರ ಮಕ್ಕಳ ಪಾಲನೆಗಾಗಿ ಆರಂಭಿಸಿದ ಮಕ್ಕಳ ಪಾಲನೆ ಕೇಂದ್ರ ಸಂಪರ್ಕಿಸಲು, ಸರ್ಚ್‌ ಶಿಶುಪಾಲನೆ ಕೇಂದ್ರ, ಜಿಲ್ಲಾಡಳಿತ ಭವನ, ಜಿ.ಪಂ. ಮುಖ್ಯ ಕಚೇರಿ, ನವನಗರ, (ಮೊ: 9448801473, 8088871164)ಗೆ ಒಮ್ಮೆ ಭೇಟಿ ಕೊಡಿ.

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next