Advertisement

ಅರ್ಜಿ ಸಲ್ಲಿಕೆಗೆ ನೂಕುನುಗ್ಗಲು

11:04 AM Feb 28, 2019 | Team Udayavani |

ಬೇತಮಂಗಲ: ಮೋದಿ ಸರ್ಕಾರದ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಂಡಿಸಿದ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ್‌ ಯೋಜನೆಯಡಿ ವಾರ್ಷಿಕ 6 ಸಾವಿರ ರೂ.ಗಳ ನೆರವು ಪಡೆಯಲು ರೈತರು ಅರ್ಜಿ ಸಲ್ಲಿಸಲು ಮುಗಿ ಬಿದ್ದಿದ್ದಾರೆ.

Advertisement

ಲೋಕಸಭಾ ಚುನಾವಣೆಗೆ ಯಾವ ಕ್ಷಣದಲ್ಲಿ ದಿನಾಂಕ ಘೋಷಣೆಯಾಗಲಿದೆ ಎಂಬ ಗೊಂದಲದೊಂದಿಗೆ ನೀತಿ ಸಂಹಿತೆ ಜಾರಿಗೆಯಾದರೆ ಸರ್ಕಾರದ ಸೌಲಭ್ಯಕ್ಕೆ ಕಚೇರಿಗಳಲ್ಲಿ ವಿಳಂಬವಾಗುತ್ತದೆ ಎಂಬ ಭೀತಿಯಲ್ಲಿ ರೈತರಿದ್ದಾರೆ. ಅಲ್ಲದೇ, ಪಿಎಂ-ಕಿಸಾನ್‌ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕ ನಿಗದಿ ಮಾಡದೆ ಇರುವುದರಿಂದ ಗೊಂದಲದಲ್ಲಿದ್ದಾರೆ. 

ಸಣ್ಣ- ಅತಿ ಸಣ್ಣ ರೈತರು ಸರ್ಕಾರ ಸೌಲಭ್ಯಕ್ಕೆ (ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಹಣಿ ಮತ್ತು ಇತರೆ ದಾಖಲೆ)ಗಳಿಗಾಗಿ ನಾಡ ಕಚೇರಿ ಮತ್ತು ತಹಶೀಲ್ದಾರ್‌ ಕಚೇರಿಗಳ ಮೊರೆ ಹೋಗಿದ್ದಾರೆ. ಎಲ್ಲಾ ದಾಖಲೆಗಳಿರುವ ರೈತರು ರೈತ ಸಂಪರ್ಕ ಕೇಂದ್ರದ ಬಳಿ ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 300ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

 ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ನಿಧಿಯಡಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಬಡ ರೈತರಿಗೆ 6 ಸಾವಿರ ರೂ.,ವಾರ್ಷಿಕ ಸಹಾಯ ಧನ ನೀಡಲಾಗುತ್ತಿದೆ. ಹೀಗಾಗಿ ರೈತರು ಸರದಿ ಸಾಲಿನಲ್ಲಿ ರೈತ ಸಂಪರ್ಕ ಕೇಂದ್ರದ ಬಳಿ ಜಮಾಯಿಸಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
 
ಬೇತಮಂಗಲ ಹೋಬಳಿ ರೈತ ಸಂಪರ್ಕ ಕೇಂದ್ರದಿಂದ ಸುಮಾರು 5 ಸಾವಿರಕ್ಕೂ ಅಧಿಕ ರೈತರ ಫ‌ಲಾನುಭವಿಗಳ ಪಟ್ಟಿ ಅಂದಾಜಿಸಲಾಗಿದೆ. ಈ ಹೋಬಳಿಯ 5 ಸಾವಿರ ರೈತರು 5 ಎಕರೆ ಜಮೀನಿಗಿಂತ ಕಡಿಮೆ ಹೊಂದಿದ್ದಾರೆ.

ಯೋಜನೆಗೆ ಯಾರು ಅರ್ಹರಲ್ಲ: ಸರ್ಕಾರಿ ಹುದ್ದೆಗಳಲ್ಲಿರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ, ಪಡಿತರ ಚೀಟಿಯಲ್ಲೂ ತಾಳೆ ಮಾಡಿ ಪತ್ತೆ ಮಾಡಲಾಗುತ್ತದೆ. ಒಂದು ವೇಳೆ ಅರ್ಜಿ ನೀಡಿ ಆನ್‌ಲೈನ್‌ ನೋಂದಣಿ ಮಾಡಿದರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ

Advertisement

ತಹಶೀಲ್ದಾರ್‌ರಿಂದ ಅರ್ಜಿ ಪರಿಶೀಲನೆ ಗ್ರಾಪಂ ಪ್ರಕಟಿಸಿದ ಪಟ್ಟಿಯಲ್ಲಿ ರೈತರ ಹೆಸರು ಇದ್ದರೆ ಅನುಬಂಧಸಿ ಅರ್ಜಿಯಲ್ಲಿ ಜಮೀನು ವಿವರ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ, ಫೋಟೋ ಒಂದು ಪ್ರತಿ, ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು ಪಂಗಡ ಮಾತ್ರ) ಆದಾಯ ಪ್ರಮಾಣ ಪತ್ರ(ಇದ್ದಲ್ಲಿ), ಪಡಿತರ ಚೀಟಿ(ಇದ್ದಲ್ಲಿ) ಅರ್ಜಿ ಯೊಂದಿಗೆ ಸಲ್ಲಿಸಲು ಸೂಚನೆ ನೀಡಲಾಗಿದೆ. ರೈತರ ಹೆಸರು ಪ್ರಕಟಣೆಯಲ್ಲಿ ಇಲ್ಲದಿದ್ದರೆ ಅನುಬಂಧ ಡಿ ಅರ್ಜಿಯಲ್ಲಿ ಸಲ್ಲಿಸಲು ಕೋರಲಾಗಿದೆ. ಈ ಅರ್ಜಿಗಳನ್ನು ತಹಶೀಲ್ದಾರ್‌ ಪರಿಶೀಲನೆ ನಡೆಸಿ ಆಯ್ಕೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿ ವಸಂತರೆಡ್ಡಿ ತಿಳಿಸಿದ್ದಾರೆ.

ಸಂಜೆ 7ರವರೆಗೂ ಅರ್ಜಿ ಸ್ವೀಕರಿಸಲಾಗುತ್ತದೆ ಕೃಷಿ ಸಮ್ಮಾನ್‌ ನಿಧಿಯಡಿ ರೈತರಿಂದ ನಿತ್ಯ ನೂರಾರು ಅರ್ಜಿಗಳು ಬರುತ್ತಿವೆ. ಈಗಾಗಲೇ ಆನ್‌ಲೈನ್‌ನಲ್ಲಿ 270 ಅರ್ಜಿ ಸಲ್ಲಿಸಲಾಗಿದೆ. ಮಂಗಳವಾರ 200 ಅರ್ಜಿಗಳನ್ನು ಫೀಡ್ಸ ಮಾಡಲಾಗಿದೆ. ವಾರ್ಷಿಕ 6 ಸಾವಿರ ರೂ. ಮೊತ್ತವನ್ನು 3 ಕಂತುಗಳಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ 7 ರಿಂದ ಸಂಜೆ 7ರವರೆಗೂ ಕಚೇರಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

ಕೃಷಿ ಸಮ್ಮಾನ್‌ಗೆ ರೈತರು ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಈ ಬಗ್ಗೆ ಗೊಂದಲ ಬೇಡ. ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ. ನೀತಿ ಸಂಹಿತೆ ಜಾರಿಗೆ ಬರುವವರೆಗೂ ರೈತರು ಅರ್ಜಿ ಸಲ್ಲಿಸಲು ಅವಕಾಶವಿದೆ. ಬಳಿಕ, ಚುನಾವಣೆ ನಂತರ ರೈತರು ಅರ್ಜಿ ಸಲ್ಲಿಸಬಹುದು.
 ಕೆ.ರಮೇಶ್‌, ಕೆಜಿಎಫ್ ತಹಶೀಲ್ದಾರ್‌

ಸರ್ಕಾರದ ಸೌಲಭ್ಯವನ್ನು ತಕ್ಷಣ ಪಡೆದುಕೊಳ್ಳಲು ಕಚೇರಿಗಳಿಗೆ ನಿತ್ಯ ಅಲೆಯುತ್ತಿದ್ದೇವೆ. ನಮಗೆ ನಿರ್ದಿಷ್ಟ(ಕೊನೆ) ದಿನಾಂಕದ ಬಗ್ಗೆಯೂ ಮಾಹಿತಿ ದೊರೆಯುತ್ತಿಲ್ಲ. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಗೊಂದಲದಲ್ಲಿದ್ದೇವೆ. 
 ಕೃಷ್ಣಮೂರ್ತಿ, ಹಂಗಳ ರೈತ 

 ಕೆ.ಆರ್‌.ಪುರುಷೋತ್ತಮರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next