ಚೆನ್ನೈ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಪ್ರಥಮ ರಾತ್ರಿಯೇ ಪತ್ನಿಯನ್ನು ಕೊಂದು, ನಂತರ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನ ಮಿಂಜೂರ್ ಸಮೀಪ ನಡೆದಿದೆ ಎಂದು ವರದಿ ತಿಳಿಸಿದೆ.
ಮೃತರನ್ನು ನೀತಿವಾಸನ್(24ವರ್ಷ) ಮತ್ತು ಪತ್ನಿ ಸಂಧ್ಯಾ(20ವರ್ಷ) ಎಂದು ಗುರುತಿಸಲಾಗಿದೆ. ಇಬ್ಬರು ಸಂಬಂಧಿಗಳಾಗಿದ್ದರು ಎಂದು ವರದಿ ವಿವರಿಸಿದೆ. ಕೋವಿಡ್ 19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕೇವಲ 20 ಮಂದಿ ಸಂಬಂಧಿಕರ ಸಮ್ಮುಖದಲ್ಲಿ ಬುಧವಾರ ವಿವಾಹ ನೆರವೇರಿತ್ತು.
ಅದೇ ದಿನ ರಾತ್ರಿ ದಂಪತಿಯ ಕೋಣೆಯೊಳಗಿಂದ ಮಹಿಳೆ ಕೂಗಿಕೊಂಡ ಶಬ್ದ ಸಂಬಂಧಿಕರಿಗೆ ಕೇಳಿಸಿತ್ತು. ಕೂಡಲೇ ಅವರೆಲ್ಲಾ ಒಟ್ಟು ಸೇರಿ ಕೋಣೆಯ ಬಾಗಿಲನ್ನು ಒಡೆದು ನೋಡಿದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ವರ ನೀತಿವಾಸನ್ ನಾಪತ್ತೆಯಾಗಿದ್ದ.
ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯ ನಡೆಸಿದಾಗ ವರ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಕಟ್ಟೂರು ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಪೋನ್ನೇರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ನೂತನ ವಧು-ವರ ಯಾವ ಕಾರಣಕ್ಕಾಗಿ ಜಗಳ ಮಾಡಿಕೊಂಡು, ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾಗಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.