ಕೊಲ್ಕತ್ತಾ : ಪಂಚರಾಜ್ಯ ಚುನಾವಣೆಯಲ್ಲೇ ಹೈ ವೋಲ್ಟೇಜ್ ವಿಧಾನ ಸಭಾ ಚುನಾವಣೆ ಎಂದು ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಚುನಾವಣೆ ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಚುನಾವಣೆ ಪೂರ್ವದಲ್ಲಿಯೂ, ಚುನಾವಣೋತ್ತರದಲ್ಲಿಯೂ ರಾಜ್ಯ ರಾಜಕೀಯ ವಲಯದಲ್ಲಿ ಪಶ್ಚಿಮ ಬಂಗಾಳ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯಿಂದ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅನೇಕ ನಾಯಕರು ಸೇರ್ಪಡೆಗೊಂಡು ಪಶ್ಚಿಮ ಬಂಗಾಳದ ರಾಜ್ಯ ರಾಜಕಾರಣದಲ್ಲಿ ಬಹಳ ದೊಡ್ಡ ಅಚ್ಚರಿಯನ್ನು ಉಂಟು ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತಾದರೂ, ಆ ಎಲ್ಲಾ ನಿರೀಕ್ಷೆಗಳು ಫಲಿತಾಂಶ ಬಂದ ಮೇಲೆ ಹುಸಿಯಾದವು.
ಇದನ್ನೂ ಓದಿ : ಲಸಿಕೆ ಅಭಿಯಾನಕ್ಕೆ ಹೊಸ ಮಾರ್ಗ! ಕೋವಿಡ್ ಲಸಿಕೆ ಸರ್ಟಿಫಿಕೇಟ್ ತೋರಿಸದಿದ್ರೆ “ಮದ್ಯ” ಇಲ್ಲ!
ಪಶ್ಚಿಮ ಬಂಗಾಳದ ಚುನಾವಣೆಯ ಸಮೀಕ್ಷೆಯ ಉತ್ತರವನ್ನು ಸುಳ್ಳು ಮಾಡಿ ತೃಣಮೂಲ ಕಾಂಗ್ರೆಸ್ ಮತ್ತೆ ಆಡಳಿತವನ್ನು ಹಿಡಿದಿದೆ. ಪಕ್ಷಾಂತರಗೊಂಡ ತೃಣಮೂಲ ಕಾಂಗ್ರೆಸ್ ನ ಮಾಜಿ ನಾಯಕರು ಅಚ್ಚರಿಯಾಗುವಂತೆ ಈ ಚುನಾವಣೆಯ ಫಲಿತಾಂಶ ಬಂದಿದೆ.
ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ನಾಯಕ ದೀಪೇಂದು ಬಿಸ್ವಾಸ್ ಅವರು ಇಂದು (ಸೋಮವಾರ, ಮೇ 31) ಕ್ಷಮೆ ಕೋರಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ಟಿಎಂಸಿಗೆ ಮತ್ತೆ ಮರಳಲು ಬಿಜೆಪಿಗೆ ಸೇರ್ಪಡೆಗೊಂಡ ದೀಪೇಂದು ಬಿಸ್ವಾಸ್ ಅವರು ಯೋಜಿಸುತ್ತಿದ್ದಾರೆ. ಬಿಸ್ವಾಸ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ, ಬಿಜೆಪಿಗೆ ಸೇರಿ ತಪ್ಪು ಮಾಡಿದ್ದು, ಪಕ್ಷಕ್ಕೆ ಮರಳಲು ಬಯಸುತ್ತೇನೆ ಎಂದು ಪತ್ರದ ಮೂಲಕ ಹೇಳಿಕೊಂಡಿದ್ದಾರೆ.
ದೀಪೇಂದು ಬಿಸ್ವಾಸ್ ಉತ್ತರ 24 ಪರಗಣ ಬಸಿರ್ಹತ್ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ. ಮಾರ್ಚ್ ಆರಂಭದಲ್ಲಿ, ಮಮತಾ ಬ್ಯಾನರ್ಜಿ, ಅವರಿಗೆ ಚುನಾವಣಾ ಟಿಕೆಟ್ ನೀಡದ ಕಾರಣ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುಮಾರು ಹದಿನೈದು ಮಂದಿ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರಸ್ ನ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ಈಗ ಬಿಜೆಪಿಯಿಂದ ಮತ್ತೆ ತೃಣಮೂಲಕ್ಕೆ ಸೇರ್ಪಡೆಗೊಳ್ಳುವ ಯೋಚನೆಯಲ್ಲಿ ಟಿಎಂಸಿಯ ಪ್ರಮುಖ ನಾಯಕರುಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುತ್ತಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ : 5ಜಿ ತಂತ್ರಜ್ಞಾನದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜ್ಯೂಹಿ ಚಾವ್ಲಾ