ನಂದಿಗ್ರಾಮ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ಅವರ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಅವರ ಪಕ್ಷ ಟಿಎಂಸಿ ಕೂಡ ಹೇಳಿಕೆಯನ್ನು ಖಂಡಿಸಿದ್ದು, ವಿವಾದದಿಂದ ಅಂತರ ಕಾಯ್ದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಅಖಿಲ್ ಗಿರಿ ಕ್ಷಮೆಯಾಚಿಸಿದ್ದಾರೆ. ನಂದಿಗ್ರಾಮದ ಹಳ್ಳಿಯೊಂದರಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಗಿರಿ, “ನಾನು ನೋಡಲು ಚೆನ್ನಾಗಿಲ್ಲ ಎಂದು ಅವರು(ಬಿಜೆಪಿ) ಹೇಳುತ್ತಾರೆ. ಯಾರನ್ನೂ ಅವರ ಬಾಹ್ಯ ನೋಟದಿಂದ ತೀರ್ಮಾನಿಸಬಾರದು. ನಾವು ರಾಷ್ಟ್ರಪತಿ ಕಚೇರಿಯನ್ನು ಗೌರವಿಸುತ್ತೇವೆ. ಆದರೆ ನಮ್ಮ ರಾಷ್ಟ್ರಪತಿ ನೋಡಲು ಹೇಗಿದ್ದಾ ರೆ?,’ ಎಂದು ವ್ಯಂಗ್ಯವಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
“ನಮಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಹೆಚ್ಚಿನ ಗೌರವ ಇದೆ. ನಮ್ಮ ಪಕ್ಷ ಅಖಿಲ್ ಗಿರಿ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತದೆ. ಮಹಿಳಾ ಸಬಲೀಕರಣದ ಈ ಯುಗದಲ್ಲಿ, ಇಂತಹ ಸ್ತ್ರೀದ್ವೇಷ ಸ್ವೀಕಾರಾರ್ಹವಲ್ಲ,’ ಎಂದು ಟಿಎಂಸಿ ಟ್ವೀಟ್ ಮಾಡಿದೆ.
“ರಾಷ್ಟ್ರಪತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅಖಿಲ್ ಗಿರಿ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಶಾಸಕ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು,’ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬರೆದ ಪತ್ರದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಸೌಮಿತ್ರ ಖಾನ್ ಆಗ್ರಹಿಸಿದ್ದಾರೆ.