ಜಾದವಪುರ : ಪಶ್ಚಿಮ ಬಂಗಾಲದ ಜಾದವಪುರದ ಟಿಎಂಸಿ ಅಭ್ಯರ್ಥಿಯಾಗಿರುವ, ರಾಜಕಾರಣಿಯಾಗಿ ಪರಿವರ್ತಿತ ನಟಿ ಮಿಮಿ ಚಕ್ರವರ್ತಿ ಅವರು ನಿನ್ನೆ ಗುರುವಾರ ಚುನಾವಣಾ ಪ್ರಚಾರದ ವೇಳೆ ಕೈಗೆ ಗ್ಲೌಸ್ ತೊಟ್ಟುಕೊಂಡು ಜನರ ಕೈಕುಲುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಮತದಾರನ್ನು ಅವಮಾನಿಸುವ ಟಿಎಂಸಿ ವೈಖರಿ ಎಂದು ಬಿಜೆಪಿ ಟೀಕಿಸಿದೆ.
ಮಿಮಿ ಚಕ್ರವರ್ತಿ ಕೈಗೆ ಗ್ಲೌಸ್ ತೊಟ್ಟುಕೊಂಡು ಮತದಾರರ ಕೈಕುಲುತ್ತಿರುವ ಫೋಟೋವನ್ನು ಈಚೆಗೆ ಬಿಜೆಪಿಗೆ ಸೇರಿರುವ ಮೇಜರ್ ಸುರೇಂದ್ರ ಪೂಣಿಯಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರಲ್ಲದೆ ಅದರ ಜತೆಗೆ “ನೋವು ಮತ್ತು ಜುಗುಪ್ಸೆ ಉಂಟಾಗಿದೆ. ಈ ರೀತಿಯ ಜನರು ಸಂಸತ್ತಿನಲ್ಲಿರುವುದಕ್ಕೆ ಭಾರತೀಯ ಪ್ರಜಾಸತ್ತೆ ಅರ್ಹವಲ್ಲ’ ಎಂಬ ಬರಹವನ್ನು ಕೂಡ ಸೇರಿಸಿದ್ದಾರೆ.
ಆದರೆ 30ರ ಹರೆಯದ ಟಿಎಂಸಿ ಅಭ್ಯರ್ಥಿ ಮಿಮಿ ಅವರನ್ನು ಸಮರ್ಥಿಸಿಕೊಂಡು ಮಿಮಿ ಅವರ ತಂಡ ಕೊಟ್ಟಿರುವ ಉತ್ತರ ಹೀಗಿದೆ : ಕೆಲ ದಿನಗಳ ಹಿಂದೆ ಚುನಾವಣಾ ಪ್ರಚಾರಾಭಿಯಾನದ ವೇಳೆ ಬೆರಳಿಗೆ, ಉಗುರಿಗೆ ಗಾಯಮಾಡಿಕೊಂಡಿದ್ದ ಮಿಮಿ ಅವರು ಯಾರಿಗೂ ಮುಜುಗರವಾಗಬಾರದೆಂಬ ಕಾರಣಕ್ಕೆ ಕೈಗೆ ಗ್ಲೌಸ್ ತೊಟ್ಟಿಕೊಂಡಿದ್ದಾರೆ’ ಎಂದು ಹೇಳಿದೆ.
ಅಂದ ಹಾಗೆ ಪಶ್ಚಿಮ ಬಂಗಾಲ ಲೋಕಸಭಾ ಚುನಾವಣೆಯ ಎಲ್ಲ 7 ಹಂತಗಳಲ್ಲಿ ಮತದಾನ ಮಾಡಲಿದ್ದು ನಿನ್ನೆ ಗುರುವಾರ ನಡೆದಿದ್ದ ಮೊದಲ ಹಂತದಲ್ಲಿ ನಡೆದಿದ್ದ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.