Advertisement

ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿಬಾಳೆ ಸಸಿ, ಅಣಬೆ ಉತ್ಪಾದನೆ

05:34 PM Jul 09, 2018 | |

ಶಿವಮೊಗ್ಗ: ಸಮೀಪದ ವಿದ್ಯಾನಗರದಲ್ಲಿ ನಿರ್ಮಿಸಲಾಗಿರುವ ತೋಟಗಾರಿಕಾ ಇಲಾಖೆಯ ಜೈವಿಕ ಕೇಂದ್ರದ ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಉತ್ಕೃಷ್ಟ ಗುಣಮಟ್ಟದ (ಪಚ್ಚೆಬಾಳೆ) ಬಾಳೆಸಸಿಗಳನ್ನು ಉತ್ಪಾದಿಸಲಾಗುತ್ತಿದೆ. ಇದುವರೆಗೆ ಲಕ್ಷಕ್ಕೂ ಅಧಿಕ ಅಂಗಾಂಶ ಬಾಳೆ ಸಸಿಗಳು, 3250 ಕೆಜಿ ಅಣಬೆ ಬೀಜ, 15 ಸಾವಿರ ಸಿದ್ಧ ಹಣ್ಣಿನ ಚೀಲಗಳನ್ನು ಹಾಗೂ 100 ಕೆಜಿ ಅಣಬೆ ಮಾರಾಟ ಮಾಡಲಾಗಿದೆ ಎಂದು ಜೈವಿಕ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕಿ ಪ್ರತಿಭಾ ವೈ.ಬಿ. ತಿಳಿಸಿದ್ದಾರೆ.

Advertisement

ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಬಾಳೆಸಸಿಗಳನ್ನು ಗಿಡ ಒಂದಕ್ಕೆ 11 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಒಂದೇ ಗುಣಮಟ್ಟದ, ಏಕಕಾಲದಲ್ಲಿ ಫಸಲು ಬರುವಂತಹ ಸಸಿಗಳು ಇದಾಗಿದ್ದು ರೈತರು ಖಚಿತ ವರಮಾನವನ್ನು ಇದರಿಂದ ನಿರೀಕ್ಷಿಸಬಹುದಾಗಿದೆ. ಅಣಬೆ ಪ್ರಯೋಗಾಲಯದಲ್ಲಿ ಉತ್ತಮ ಗುಣಮಟ್ಟದ ವಿವಿಧ ತಳಿಗಳ ಅಣಬೆ ಬೀಜಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಪ್ರತಿ ಕೆಜಿ ಅಣಬೆ ಬೀಜವನ್ನು 60 ರೂ.ನಂತೆ ಹಾಗೂ ಸಿದ್ಧ ಹಣ್ಣಿನ ಚೀಲಗಳನ್ನು ಪ್ರತಿ ಬ್ಯಾಗ್‌ಗೆ 20 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿಗೆ ಅಗತ್ಯವಾದ ಜೈವಿಕ ತಂತ್ರಜ್ಞಾನಗಳನ್ನು ರೈತರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಂಶೋಧನಾ ಸಂಸ್ಥೆಗಳಿಗೆ ಒಂದೇ ಸೂರಿನಡಿ ಒದಗಿಸುವ ಕಾರ್ಯವನ್ನು ಜೈವಿಕ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ ಹಾಗೂ ದಾವಣಗೆರೆ ಜಿಲ್ಲೆಯ 309 ಅಧಿಕಾರಿಗಳಿಗೆ ಅಣಬೆ ಬೆಳೆ ಕುರಿತು ತರಬೇತಿ ನೀಡಲಾಗಿದೆ ಎಂದು ಜೈವಿಕ ಕೇಂದ್ರದ ತೋಟಗಾರಿಕಾ ನಿರ್ದೇಶಕ ಎಚ್‌.ಎಸ್‌. ರಾಮಕೃಷ್ಣ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ: 08182-240004, 240422ನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next