Advertisement

ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿ ಮೆಟ್ಟಿಲು: ಎಚ್‌ಡಿಕೆ

06:25 AM Dec 01, 2018 | |

ಚಾಮರಾಜನಗರ/ಹನೂರು: ತಾಳಬೆಟ್ಟದಿಂದ-ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ತಿರುಪತಿ ಮಾದರಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲು ಇನ್ನು 10 ದಿನಗಳೊಳಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಸಮೀಪದ ಮಲೆಮಹದೇಶ್ವರ ಬೆಟ್ಟದಲ್ಲಿ ಸುತ್ತೂರು ವೀರಸಿಂಹಾಸನ ಮಠದಿಂದ ನಿರ್ಮಿಸಲಾಗಿರುವ 63 ಕೊಠಡಿಗಳ ಅತಿಥಿಗೃಹ ಸಮುತ್ಛಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಮುಜರಾಯಿ ಇಲಾಖೆಗೆ ಅತಿ ಹೆಚ್ಚಿನ ಆದಾಯ ತಂದು ಕೊಡುವ 2ನೇ ದೇವಾಲಯವಾಗಿದ್ದು, ಭಕ್ತಾದಿಗಳೇ ಅತಿ ಹೆಚ್ಚಿನ ಹಣವನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹೀಗಾಗಿ, ತಿರುಪತಿ ಮಾದರಿಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಬರಲು 16 ಕಿ.ಮೀ.ದೂರದಿಂದ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಅಲ್ಲದೆ, ಮಾರ್ಗ ಮಧ್ಯೆ ಅಲ್ಲಲ್ಲಿ ಶೌಚಾಲಯ, ವಿಶ್ರಾಂತಿ ಗೃಹ ತೆರೆಯಲಾಗುವುದು. ಈ ಬಗ್ಗೆ ಸರ್ಕಾರದಲ್ಲಿ ತೀರ್ಮಾನ ಕೈಗೊಂಡು ಮುಂದಿನ 10 ದಿನಗಳೊಳಗಾಗಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದೇನೆ. ದೇವರ ಆಶೀರ್ವಾದ ಪಡೆಯುತ್ತೇನೆ. ನಾಡಿಗೆ ಒಳ್ಳೆಯದಾಗಲು ಸ್ವಾಮಿಯ ಆಶೀರ್ವಾದ ಬೇಕು ಎಂದರು.

ರೆಸಾರ್ಟ್‌ ರಾಜಕೀಯ ನಡೆಯಲಿ ಬಿಡಿ: ಎಚ್‌ಡಿಕೆ
ಇದೇ ವೇಳೆ, ಬಿಜೆಪಿಯ ರೆಸಾರ್ಟ್‌ ರಾಜಕೀಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರೆಸಾರ್ಟ್‌ಗಳಿರುವುದೇ ಚಟುವಟಿಕೆಗಳನ್ನು ನಡೆಸುವುದಕ್ಕೆ. ಹಾಗಾಗಿ, ರೆಸಾರ್ಟ್‌ ರಾಜಕೀಯ ನಡೆಯಲಿ ಬಿಡಿ ಎಂದರು. ಡಿಕೆಶಿ-ಬಿಎಸ್‌ವೈ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಅವರು ಅಭಿವೃದ್ಧಿ ಬಗ್ಗೆ ಚರ್ಚಿಸಲು ಭೇಟಿ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಕೂಡ ಸ್ಪಷ್ಪಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next