Advertisement

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

08:29 AM Oct 05, 2024 | Team Udayavani |

ಹೊಸದಿಲ್ಲಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಂಶ ಇರುವ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಐವರು ಸದಸ್ಯರ ಸ್ವತಂತ್ರವಾದ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇದೇ ವೇಳೆ, ನ್ಯಾಯಾಲಯವನ್ನು “ರಾಜಕೀಯ ರಣಾಂಗಣ’ವಾಗಿ ಬಳಸಲು ನಾವು ಅನುಮತಿ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

Advertisement

ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ, ಆರೋಪ ಕುರಿತ ತನಿಖೆಗೆಂದು ಸೆ.26ರಂದು ಆಂಧ್ರ ಪ್ರದೇಶ ಸರಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಬರ್ಖಾಸ್ತುಗೊಳ್ಳಲಿದ್ದು, ಅದರ ಬದಲಿಗೆ ಹೊಸ ಎಸ್‌ಐಟಿ ಕಾರ್ಯನಿರ್ವಹಿಸಲಿದೆ.

ಸಮಿತಿಯಲ್ಲಿ ಯಾರಿರುತ್ತಾರೆ?: ಹೊಸ ಸ್ವತಂತ್ರ ಎಸ್‌ಐಟಿಯಲ್ಲಿ ಸಿಬಿಐ ಮತ್ತು ಆಂಧ್ರಪ್ರದೇಶ ಪೊಲೀಸ್‌ ಇಲಾಖೆಯ ತಲಾ ಇಬ್ಬರು ಅಧಿಕಾರಿಗಳು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ)ದ ಒಬ್ಬ ಹಿರಿಯ ಅಧಿಕಾರಿ ಇರಲಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾ| ಬಿ.ಆರ್‌.ಗವಾಯಿ ಮತ್ತು ನ್ಯಾ| ಕೆ.ವಿ.ವಿಶ್ವನಾಥನ್‌ ಅವರಿದ್ದ ನ್ಯಾಯಪೀಠ ಹೇಳಿದೆ.

ಕೋರ್ಟ್‌ನಲ್ಲಿ ರಾಜಕೀಯ ಜಗಳಕ್ಕೆ ಅವಕಾಶವಿಲ್ಲ: ಸುಪ್ರೀಂ
ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿತು. ಜತೆಗೆ ನ್ಯಾಯಾಲಯವನ್ನು ರಾಜಕೀಯ ಹೋರಾಟದ ಕಣವಾಗಿ ಬಳಸಲು ನಾವು ಅನುಮತಿಸುವುದಿಲ್ಲ. ಆದರೆ ಕೋಟ್ಯಂತರ ಜನರ ಭಾವನೆಗಳಿಗಾದ ಘಾಸಿಯನ್ನು ಶಮನಗೊಳಿಸುವ ಸಲುವಾಗಿ, ನಾವು ಸ್ವತಂತ್ರವಾದ ವಿಶೇಷ ತನಿಖಾ ತಂಡದ ಮೂಲಕ ತನಿಖೆಗೆ ಆದೇಶಿಸುವುದು ಸೂಕ್ತ ಎಂದು ಭಾವಿಸಿದ್ದೇವೆ. ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲೇ ತನಿಖೆ ನಡೆದರೆ ಉತ್ತಮ. ಇದು ರಾಜಕೀಯ ಡ್ರಾಮಾವಾಗಿ ಬದಲಾಗುವುದು ನಮಗೆ ಇಷ್ಟವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ತಿರುಪತಿ ಲಡ್ಡು ಕಲಬೆರಕೆ ವಿವಾದದ ಕುರಿತು ಸರ್ವೋಚ್ಚ ನ್ಯಾಯಾಲಯವೇ ವಿಶೇಷ ತನಿಖಾ ತಂಡವನ್ನು ರಚಿಸಿರುವುದು ಸ್ವಾಗತಾರ್ಹ.
ಚಂದ್ರಬಾಬು ನಾಯ್ಡು,
– ಆಂಧ್ರಪ್ರದೇಶ ಮುಖ್ಯಮಂತ್ರಿ

Advertisement

ಸುಳ್ಳು ಆರೋಪ ಮಾಡಿದ್ದ ಸಿಎಂ ಚಂದ್ರ ಬಾಬು ನಾಯ್ಡು ಜನರ ಕ್ಷಮೆ ಕೇಳಬೇಕು. ತಿರುಪತಿ ವೆಂಕಟೇಶ್ವರ ದೇವರಲ್ಲಿಗೆ ತೆರಳಿ ತಪ್ಪಾಯಿತು ಎಂದು ಪ್ರಾರ್ಥನೆ ಸಲ್ಲಿಸಬೇಕು. ಹೊಸ ತನಿಖಾ ಸಮಿತಿಗೆ ನಮ್ಮ ಬೆಂಬಲವಿದೆ.
– ಜಗನ್ಮೋಹನ ರೆಡ್ಡಿ, ಆಂಧ್ರ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next