Advertisement

ಗುರುವಿಗೇ ತಿರುಮಂತ್ರ ಹಾಕಿದ ಹುಲಿ

10:55 AM May 25, 2017 | |

ಅನೇಕ ವರ್ಷಗಳ ಹಿಂದೆ ಕಾಡಿನಲ್ಲಿ ಹುಲಿ ಇತ್ತು. ಅದು ಒಂಟಿಯಾಗಿ ಬೆಳೆದಿತ್ತು. ಅದಕ್ಕೆ ಜೊತೆಗಾರುರು ಯಾರೂ ಇರಲಿಲ್ಲ. ಎಲ್ಲರೂ ಪಕ್ಕದ ಕಾಡಿಗೆ ಇದೊಂದನ್ನು ಬಿಟ್ಟು ತೆರಳಿದ್ದರು. ಅದು ಸದಾ ಕಾಲ ಮರದಡಿ ನೆರಳಿನಲ್ಲಿ ಸೋಮಾರಿಯಾಗಿ ಮಲಗಿಕೊಂಡಿರುತ್ತಿತ್ತು. ಹೀಗೇ ಮಲಗಿರುವಾಗ ಅದರತ್ತ ಕಾಡುಬೆಕ್ಕೊಂದು ಬಂದಿತು.”ಏನು ಹುಲಿರಾಯರೇ, ಕ್ಷೇಮವೇ? ಹಾಯಾಗಿ ನಿದ್ದೆ ಮಾಡುತ್ತಿರುವಿರಲ್ಲಾ… ಈಗ ತಾನೇ ಭರ್ಜರಿ ಭೋಜನ ಮುಗಿಸಿರುವ ಹಾಗೆ ಕಾಣುತ್ತಿದೆ.’ 

Advertisement

ಕಾಡುಬೆಕ್ಕಿನ ಮಾತಿಗೆ ಹುಸಿನಕ್ಕ ಹುಲಿ “ಅಯ್ಯೋ ನನಗೆ ಬೇಟೆಯಾಡಲು ಬಂದರೆ ತಾನೇ ಭರ್ಜರಿ ಭೋಜನ ಮಾಡುವುದಕ್ಕೆ! ಹಸಿವಿನಿಂದ ಸುಸ್ತಾಗಿ ಇಲ್ಲಿ ಕುಳಿತಿದ್ದೇನೆ’ ಎಂದಿತು. ಆಶ್ಚರ್ಯಗೊಂಡ ಕಾಡುಬೆಕ್ಕಿಗೆ ಹುಲಿಯ ಸ್ಥಿತಿ ನೋಡಿ ಬೇಸರವಾಯಿತು. ಅದು ಬೇಟೆಯ ವಿದ್ಯೆಯನ್ನು ಕಲಿಸಿಕೊಡಲು ಮುಂದಾಯಿತು. ಆ ದಿನದಿಂದ ಹುಲಿಗೆ ಕಠಿಣ ತರಬೇತಿ ಪ್ರಾರಂಭವಾಯಿತು. ಅನೇಕ ತಂತ್ರಗಳನ್ನು ಕಾಡು ಬೆಕ್ಕು, ಹುಲಿಗೆ ಕಲಿಸಿತು. ದಿನೇ ದಿನೇ ಕಲಿತ ವಿದ್ಯೆಯನ್ನು ಅಬ್ಯಾಸ ಮಾಡುತ್ತಾ ಮಾಡುತ್ತಾ ಹುಲಿರಾಯ ಬೇಟೆಯಲ್ಲಿ ಪಳಗಿಬಿಟ್ಟಿತು. ಅದೊಂದು ದಿನ ಹುಲಿಗೆ ತೀವ್ರ ಹಸಿವು. ಅದು ತನ್ನ ಗುರು ಕಾಡು ಬೆಕ್ಕಿನ ಬಳಿಗೆ ತೆರಳಿ ತನಗೆ ಆಹಾರ ಬೇಕೆಂದು ಕೇಳಿತು. ಕಾಡುಬೆಕ್ಕು “ಹಾಗಾದರೆ ನಿನ್ನ ಬೇಟೆಯ ಸಾಮರ್ಥಯವನ್ನು ಪರೀಕ್ಷಿಸಲು ಇದೇ ಸುಸಂದರ್ಭ’ ಎಂದಿತು. ಗಹಗಹಿಸಿ ನಕ್ಕ ಹುಲಿ ಕಾಡು ಬೆಕ್ಕಿನತ್ತ ದಾವಿಸಿತು. ಗಾಬರಿಯಾಗ ಕಾಡುಬೆಕ್ಕು ತನ್ನ ಬಳಿ ಏಕೆ ಬರುತ್ತಿದ್ದೀಯೆಂದು ಕೇಳಿದಾಗ “ನನ್ನ ಮೊದಲ ಪ್ರಯೋಗ ನಿನ್ನ ಮೇಲೆ ಆಗಲಿ. ನಿನ್ನನ್ನೇ ಬೇಟೆಯಾಡಿ ಹಸಿವು ತೀರಿಸಿಕೊಳ್ಳುತ್ತೇನೆ’ ಎಂದಿತು ಹುಲಿ. ಭಯಗೊಂಡ ಕಾಡುಬೆಕ್ಕು “ಕಲಿತ ವಿದ್ಯೆಯನ್ನು ಗುರುವಿನ ಮೇಲೆ ಪ್ರಯೋಗಿಸುತ್ತಿರುವೆಯಲ್ಲಾ ಇದು ಸರಿಯೇ?’ ಎಂದು ಕೇಳಿತು. ಕಾಡುಬೆಕ್ಕಿನ ಯಾವ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮ ಹುಲಿಗಿರಲಿಲ್ಲ. ನಿನ್ನ ಎಲ್ಲಾ ವಿದ್ಯೆಗಳೂ ನನಗೆ ಸಿದ್ಧಿಸಿದೆ ನೀನು ಏನೇ ಮಾಡಿದರೂ ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದಾಳಿ ಮಾಡಲು ಮುಂದಾಯಿತು. “ಅಯ್ಯೋ ಹುಲಿರಾಯ, ನಿನಗೆ ನಾನು ಎಲ್ಲಾ ವಿದ್ಯೆಗಳನ್ನೂ ಕಲಿಸಿರುವೆ ಎಂದು ತಿಳಿದುಕೊಂಡಿರುವೆಯಲ್ಲಾ. ಅದು ತಪ್ಪು ಒಂದು ವಿದ್ಯೆಯನ್ನು ನಿನಗೆ ಕಲಿಸಿರಲಿಲ್ಲ. ಬೇಟೆಯಿಂದ ತಪ್ಪಿಸಿಕೊಳ್ಳುವ ವಿದ್ಯೆ  ನಿನಗಿನ್ನೂ ತಿಳಿದಿಲ್ಲ. ನನಗೆ ತಿಳಿದಿದೆ’ ಎಂದು ನಕ್ಕು ಒಡನೆಯೇ ಹತ್ತಿರವೇ ಇದ್ದ ಮರವನ್ನು ಸರಸರನೇ ಏರಿತು. ಹುಲಿರಾಯ ಪೆಚ್ಚಾಗಿ ತನ್ನನ್ನು ತಾನೇ ಹಳಿದುಕೊಳ್ಳುತ್ತಾ ಕಾಡಿನಲ್ಲಿ ಮರೆಯಾಯಿತು.

– ಅಮರಯ್ನಾ ಪತ್ರಿಮಠ, ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next