Advertisement

ತಿರುಪತಿ ತಿರುಮಲ ದೇವಸ್ಥಾನಮ್ಸ್‌ ಹೊಂದಿರುವ ಆಸ್ತಿ ಎಷ್ಟು ಗೊತ್ತೇ?

08:14 PM Sep 25, 2022 | Team Udayavani |

ತಿರುಪತಿ:ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯ ಎಂಬ ಖ್ಯಾತಿ ಗಳಿಸಿರುವ ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಹೊಂದಿರುವ ಆಸ್ತಿ ಎಷ್ಟು ಗೊತ್ತೇ? ಈ ಪ್ರಶ್ನೆಗೆ ಉತ್ತರ ಲಭ್ಯವಾಗಿದೆ.

Advertisement

ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್‌ ನೀಡಿದ ಮಾಹಿತಿ ಪ್ರಕಾರ, ದೇಗುಲ ಆಡಳಿತ ಮಂಡಳಿ ದೇಶದಲ್ಲಿ 960 ಆಸ್ತಿಗಳನ್ನು ಹೊಂದಿದೆ. ಅವುಗಳ ವ್ಯಾಪ್ತಿ 7,123 ಎಕರೆ. ಅವುಗಳ ಮಾರುಕಟ್ಟೆ ಮೌಲ್ಯ ಬರೋಬ್ಬರಿ 85,705 ಕೋಟಿ ರೂ.. 1974ರಿಂದ 2014ರವರೆಗೆ ವಿವಿಧ ಕಾರಣಗಳಿಗಾಗಿ ಟಿಟಿಡಿಯ ಆಡಳಿತದ ಚುಕ್ಕಾಣಿ ಹೊಂದಿದ್ದ ಟ್ರಸ್ಟ್‌ನ ವ್ಯಕ್ತಿಗಳು ಬೇರೆ ಬೇರೆ ಸರ್ಕಾರದ ಅವಧಿಯಲ್ಲಿ 113 ಆಸ್ತಿಯನ್ನು ವಿವಿಧ ಕಾರಣಗಳಿಗಾಗಿ ವಿಲೇವಾರಿ ಮಾಡಿದ್ದಾರೆ. 2014ರಿಂದೀಚೆಗೆ ಟಿಟಿಡಿ ಆಸ್ತಿ ವಿಲೇವಾರಿ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ಮೂಲಗಳ ಪ್ರಕಾರ, ಟಿಟಿಡಿ ಹೊಂದಿರುವ ಆಸ್ತಿಯ ನೈಜ ಮೌಲ್ಯ 2 ಲಕ್ಷ ಕೋಟಿ ರೂ. ಆಗಿರುವ ಸಾಧ್ಯತೆ ಇದೆ.

14 ಸಾವಿರ ಕೋಟಿ ರೂ.:
ದೇಶದ ವಿವಿಧ ಸರ್ಕಾರಿ ಬ್ಯಾಂಕ್‌ಗಳಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಠೇವಣಿಯಾಗಿ ಇರಿಸಲಾಗಿದೆ. 14 ಟನ್‌ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಇರಿಸಲಾಗಿದೆ ಎಂದು ಸುಬ್ಟಾ ರೆಡ್ಡಿ ಹೇಳಿದ್ದಾರೆ.

ಹೊಸ ದೇಗುಲ:
ಹೊಸ ದೇಗುಲ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಅವರು, ನವಿ ಮುಂಬೈನಲ್ಲಿ ಹತ್ತು ಎಕರೆ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ, ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇಗುಲ ಸಮೀಪದ 60 ಎಕರೆ ಜಮೀನಿನಲ್ಲಿ ದೇಗುಲ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ್ದಾರೆ.

ಐರೋಪ್ಯದಲ್ಲೂ “ಶ್ರೀನಿವಾಸ ಕಲ್ಯಾಣ’
ಸನಾತನ ಹಿಂದೂ ಧರ್ಮವನ್ನು ಉತ್ತೇಜಿಸುವಂಥ ತನ್ನ ಯೋಜನೆಯ ಅಂಗವಾಗಿ ಟಿಟಿಡಿ ಈಗ ಯುಕೆ ಹಾಗೂ ಇತರೆ ಐರೋಪ್ಯ ರಾಷ್ಟ್ರಗಳಲ್ಲೂ “ಶ್ರೀನಿವಾಸ ಕಲ್ಯಾಣ’ ಪೂಜೆಯನ್ನು ನಡೆಸಲು ನಿರ್ಧರಿಸಿದೆ. ತಿರುಪತಿ ತಿಮ್ಮಪ್ಪನ ವೈಭವವನ್ನು ಸಾಗರೋತ್ತರದಲ್ಲೂ ವ್ಯಾಪಿಸಿ ಎಂಬ ಆಂಧ್ರ ಸಿಎಂ ಜಗನ್‌ ರೆಡ್ಡಿ ಅವರ ಸಲಹೆ ಮೇರೆಗೆ ಟಿಟಿಡಿ ಈ ನಿರ್ಧಾರ ಕೈಗೊಂಡಿದೆ. ಅದರಂತೆ, ಅ.15ರಿಂದ ಬೇಸಿಂಗ್‌ಸ್ಟೋಕ್‌, ಮ್ಯಾಂಚೆಸ್ಟರ್‌, ಬೆಲ್‌ಫಾಸ್ಟ್‌, ಡಬ್ಲಿನ್‌, ಜೂರಿಚ್‌, ಆ್ಯಂಸ್ಟರ್‌ಡ್ಯಾಂ, ಫ್ರಾಂಕ್‌ಫ‌ರ್ಟ್‌, ಪ್ಯಾರಿಸ್‌, ಲಂಡನ್‌ ಮತ್ತು ಎಡಿನ್‌ಬರ್ಗ್‌ನಲ್ಲಿ ಶ್ರೀನಿವಾಸ ಕಲ್ಯಾಣ ನಡೆಯಲಿದೆ.

Advertisement

ವಿಐಪಿ ದರ್ಶನ ಸಮಯ ಬದಲಾವಣೆ
ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಟಿಟಿಡಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಅದರಂತೆ, ವಿಐಪಿ ದರ್ಶನದ ಸಮಯ ಬೆಳಗ್ಗೆ 5.30ರ ಬದಲಾಗಿ ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿದೆ. ಸ್ಲಾಟೆಡ್‌ ಸರ್ವ ದರ್ಶನ(ಎಸ್‌ಎಸ್‌ಡಿ) ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗಿದೆ. ಇದರಿಂದಾಗಿ ಸಾಮಾನ್ಯ ಭಕ್ತರು ಗಂಟೆಗಟ್ಟಲೆ ದರ್ಶನಕ್ಕಾಗಿ ಕಾಯಬೇಕಾದ ಸ್ಥಿತಿ ಇರುವುದಿಲ್ಲ. ಎಸ್‌ಎಸ್‌ಡಿ ಟೋಕನ್‌ಗಳನ್ನು ಸೀಮಿತ ಸಂಖ್ಯೆಯಲ್ಲಿ ವಿತರಿಸಲಾಗುತ್ತದೆ. ಹಾಗಾಗಿ, ಯಾವುದೇ ದರ್ಶನ ಟಿಕೆಟ್‌ ಪಡೆಯದೇ ಬರುವ ಯಾತ್ರಿಗಳಿಗೆ ತೊಂದರೆ ಆಗುವುದಿಲ್ಲ. ಹಾಗೆಯೇ ತಿರುಪತಿಯಲ್ಲಿ ಕಾಟೇಜುಗಳ ಹಂಚಿಕೆ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next