Advertisement

Tirumala Tirupati: ಲಡ್ಡು ಪ್ರಸಾದ ಪ್ರಮಾದ!

09:24 AM Sep 21, 2024 | Team Udayavani |

ಭಕ್ತಿ, ಶ್ರದ್ಧೆಯ ಪ್ರತಿರೂಪವಾಗಿದ್ದ ತಿರುಪತಿ ಲಡ್ಡು ಈಗ ಅನುಮಾನ, ಅಪವಿತ್ರತೆ ಕಾರಣದಿಂದ ಚರ್ಚೆಗೆ ಕಾರಣವಾಗಿದೆ. ಶ್ರೀವಾರಿ ಎಂದು ಕರೆಯಲಾಗುವ ತಿರುಪತಿ ಲಡ್ಡುವಿನಲ್ಲಿ ಬಳಸಲಾಗುವ ತುಪ್ಪದಲ್ಲಿ ದನದ ಚರ್ಬಿ, ಮೀನೆಣ್ಣೆ ಬಳಕೆ ಈಗ ಭಕ್ತರ ನಂಬಿಕೆಗೆ ಆಘಾತ ಉಂಟು ಮಾಡಿದೆ. ವಿಶಿಷ್ಟ ಸ್ವಾದದ ಈ ಲಡ್ಡು ಪ್ರಸಾದದ ಐತಿಹ್ಯ, ತಯಾರಿಕೆ ಮತ್ತಿತರ ಸಂಗತಿಗಳ ಸುತ್ತಮುತ್ತ….

Advertisement

300 ವರ್ಷ ಇತಿಹಾಸ!
ತಿರುಮಲ ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದವರಿಗೆ ಪ್ರಸಾದವಾಗಿ ನೀಡುವ ಲಡ್ಡುಗೆ 300 ವರ್ಷಗಳ ಇತಿಹಾಸವಿದೆ. 1715 ಆಗಸ್ಟ್‌ 2ರಂದು ಮೊದಲ ಬಾರಿಗೆ ತಿರುಪತಿಯಲ್ಲಿ ಪ್ರಸಾದ ವಾಗಿ ಲಡ್ಡು ವಿತರಿಸಲಾಯಿತು. ಅಂದರೆ ಈಗ ಲಡ್ಡುಗೆ ಬರೋಬ್ಬರಿ 309 ವರ್ಷಗಳಾಯಿತು. ಇದಕ್ಕೆ ಧಾರ್ಮಿಕವಾಗಿ “ಶ್ರೀವಾರಿ ಲಡ್ಡು’ ಎಂದೂ ಕರೆಯಲಾಗುತ್ತದೆ. ಕಡಲೆ ಹಿಟ್ಟು, ಸಕ್ಕರೆ, ತುಪ್ಪ ಮತ್ತು ಒಣ ಹಣ್ಣುಗಳನ್ನು ಬಳಸಿ ಕೊಂಡು ಲಡ್ಡು ತಯಾರಿಸಲಾಗುತ್ತದೆ. ಆದರೆ ಪಲ್ಲವರ ಕಾಲ ದಲ್ಲೂ ತಿರುಪತಿಯಲ್ಲಿ ದೇವರಿಗೆ ಲಡ್ಡುವನ್ನು ಹುಡಿಹುಡಿಯಾಗಿ ಅರ್ಪಿಸುವ ಸೇವೆ ಚಾಲ್ತಿಯಲ್ಲಿತ್ತು ಎಂಬ ಅಂಶವು ದೇಗುಲದ 1803ರ ದೈನಂದಿನ ದಾಖಲೆಯಲ್ಲಿ ಉಲ್ಲೇಖ ವಾಗಿದೆ. ಮುಂದೆ ವಿಜಯನಗರ ಕಾಲದಲ್ಲೂ ಈ ವ್ಯವಸ್ಥೆ ಮುಂದುವರಿಯಿತು ಎನ್ನುತ್ತವೆ ದಾಖಲೆಗಳು. ಆದರೆ 1715ರಲ್ಲಿ ಈಗಿನ ಮಾದರಿ ಲಡ್ಡು ವಿತರಣೆ ಶುರುವಾಗಿದ್ದರ ಬಗ್ಗೆ ದಾಖಲೆಗಳಿವೆ. ಹಾಗಾಗಿ ಐತಿಹಾಸಿಕವಾಗಿಯೂ ಮಹತ್ವವನ್ನು ಹೊಂದಿರುವ ಲಡ್ಡು ಪ್ರಸಾದಕ್ಕೆ ಈಗ ಪ್ರಮಾದ ಎದುರಾಗಿರುವುದು ಭಕ್ತರಲ್ಲಿ ಕಳವಳ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಪೋಟು, ದಿಟ್ಟಂ ಅಡುಗೆ ಮನೆ
ಪೋಟು ಎಂದು ತಿರುಪತಿಯಲ್ಲಿ ಲಡ್ಡು ತಯಾರಿಸುವ ಅಡುಗೆ ಮನೆ. ಇದು ದೇವಾಲಯದ ಸಂಪಂಗಿ ಪ್ರದಕ್ಷಿಣೆ ಪ್ರಾಕಾರದ ಒಳಗೆ ಇದೆ. ಮೊದಲು ಇಲ್ಲಿ ಸೌದೆ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಬಳಿಕ 1984ರಿಂದ ಅಡುಗೆ ಅನಿಲ ಬಳಸಿ ಲಡ್ಡು ತಯಾರಿಸಲಾಗುತ್ತಿದೆ. ಇಲ್ಲಿ ದಿನವೊಂದಕ್ಕೆ 8 ಲಕ್ಷ ಲಡ್ಡು ತಯಾರಿ ಸಾಮರ್ಥ್ಯವಿದೆ. ದಿಟ್ಟಂ ಎಂದರೆ ಲಡ್ಡು ತಯಾರಿಕೆಗೆ ಬೇಕಾಗುವ ಪದಾರ್ಥಗಳ ಪಟ್ಟಿ. ಈ ಪಟ್ಟಿಯಲ್ಲಿ ಇತಿಹಾಸದಲ್ಲಿ 6 ಬಾರಿ ಬದಲಾವಣೆ ಮಾಡಲಾಗಿದೆ. ಅಡುಗೆಯಲ್ಲಿ 600ಕ್ಕೂ ಅಧಿಕ ಕಾರ್ಮಿಕರ ಕೆಲಸ ಮಾಡುತ್ತಾರೆ. ಈ ಪೈಕಿ 150 ಮಂದಿ ಖಾಯಂ ನೌಕರರು, 250 ಮಂದಿ ಬಾಣಸಿಗರು.



3 ಲಕ್ಷದವರೆಗೂ ಲಡ್ಡು

ತಿರುಪತಿಯಲ್ಲಿ ದಿನಕ್ಕೆ 3 ಲಕ್ಷದವರೆಗೂ ಲಡ್ಡು ತಯಾರಿಸಲಾಗುತ್ತದೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತದೆ. ದರ್ಶನಕ್ಕೆ ಬರುವ ಭಕ್ತರೂ ಕನಿಷ್ಠ ಮೂರ್ನಾಲ್ಕು ಲಡ್ಡುಗಳನ್ನು ಖರೀದಿಸುತ್ತಾರೆ. ಬ್ರಹ್ಮೋತ್ಸವದ ಸಮಯದಲ್ಲಂತೂ ಕೋಟ್ಯಂತರ ಲಡ್ಡು ತಯಾರಿಸಲಾಗುತ್ತದೆ. ಆಗ ಹೆಚ್ಚಿನ ಜನರು ಈ ಲಡ್ಡುವನ್ನು ಪ್ರಸಾದವಾಗಿ ಖರೀದಿಸುತ್ತಾರೆ. ಈ ಲಡ್ಡುಗೆ ಜಿಐ ಟ್ಯಾಗ್‌ ಕೂಡ ದೊರೆತಿದೆ.

ಲಡ್ಡು ತಯಾರಿಕೆಗೆ ಏನೇನು ಬಳಕೆ?
ವರ್ಲ್ ವೈಡ್‌ ಜರ್ನಲ್‌ 2015ರಲ್ಲಿ ತಿರುಪತಿ ಲಡ್ಡು ಕುರಿತು ಸಂಶೋಧನೆ ನಡೆಸಿತ್ತು. ಅದರ ಪ್ರಕಾರ, ತಿರುಪತಿ ದೇಗುಲದಲ್ಲಿ ಸರಿ ಸುಮಾರು 1 ಟನ್‌ ಕಡಲೆ ಹಿಟ್ಟು, ಟನ್‌ ಸಕ್ಕರೆ, 700 ಕೆ.ಜಿ. ಗೋಡಂಬಿ, 150 ಕೆ.ಜಿ. ಏಲಕ್ಕಿ ಮತ್ತು 300ರಿಂದ 500 ಲೀ.ವರೆಗೆ ತುಪ್ಪ, 500 ಕೆ.ಜಿ. ಕಲ್ಲು ಸಕ್ಕರೆ ಮತ್ತು 540 ಕೆ.ಜಿ. ಒಣ ದ್ರಾಕ್ಷಿಯನ್ನು ಬಳಸಲಾಗುತ್ತದೆ.

320 ರೂ. ಕೆ.ಜಿ.ಗೆ ಶುದ್ಧ ತುಪ್ಪ?
ಮಾರುಕಟ್ಟೆಯಲ್ಲಿ ಶುದ್ಧ ತುಪ್ಪ ಕೆ.ಜಿ.ಗೆ 900 ರೂ. ವರೆಗೆ ಇರುವಾಗ 320 ರೂ.ಗೆ ತುಪ್ಪ ಸಿಗಲು ಸಾಧ್ಯವೇ ಇಲ್ಲ. ಹಾಗೇನಾದರೂ ಸಿಕ್ಕರೆ ಅದು ಕಲಬೆರಕೆಯಾಗಿರುತ್ತದೆ. ಈ ಹಿಂದಿನ ವೈಎಸ್‌ಆರ್‌ಸಿಪಿ ಸರಕಾರ ಈ ವಿಷಯದಲ್ಲಿ ಭಾರೀ ಕೆಳಮಟ್ಟಕ್ಕೆ ಇಳಿದಿದೆ ಎಂದು ಟಿಡಿಪಿಯ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಆರೋಪಿಸಿದ್ದಾರೆ.

Advertisement

ಭಕ್ತರಿಗೆ 3 ವಿಧದ ಲಡ್ಡು
ತಿರುಪತಿಯಲ್ಲಿ 3 ವಿಧವಾದ ಲಡ್ಡು ತಯಾರಿಸಲಾಗುತ್ತದೆ.
ಆಸ್ಥಾನಂ ಲಡ್ಡು: ಇದನ್ನು ವಿಶೇಷ ಹಬ್ಬಗಳ ಸಂದರ್ಭದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಜತೆಗೆ ಗಣ್ಯರಿಗೆ ಮಾತ್ರ ವಿತರಿಸಲಾಗುತ್ತದೆ. ಈ ಒಂದು ಲಡ್ಡು 750 ಗ್ರಾಂ ತೂಕವಿರುತ್ತದೆ.
ಕಲ್ಯಾಣೋತ್ಸವಂ ಲಡ್ಡು: ಇದನ್ನು ದೇವರ ಕಲ್ಯಾಣೋತ್ಸವ ಮತ್ತು ಆರ್ಜಿತ ಸೇವೆಗಳಲ್ಲಿ ಭಾಗವಹಿಸುವವರಿಗೆ ಮಾತ್ರ ವಿತರಿಸಲಾಗುತ್ತದೆ.
ಪ್ರೋಕ್ತಂ ಲಡ್ಡು: ದೇವರ ದರ್ಶನದ ಇದನ್ನು ಎಲ್ಲ ದಿನ, ಎಲ್ಲ ಭಕ್ತರಿಗೆ ವಿತರಿಸಲಾಗುತ್ತದೆ.

ಕಲಬೆರಕೆ ಹೇಗೆ?
ಸಸ್ಯಜನ್ಯಗಳನ್ನು ತುಪ್ಪದಲ್ಲಿ ಕಲಬೆರಕೆ ಮಾಡುವುದು ಸರಳ. ಆದರೆ, ಪ್ರಾಣಿಜನ್ಯ ಕಲಬೆರಕೆ ಅಷ್ಟು ಸುಲಭವಲ್ಲ. ಕಸಾಯಿ ಖಾನೆಗಳಿಂದ ಪಡೆದ ಟ್ಯಾಲೋ (ಚರ್ಬಿ) ಅಥವಾ ಇತರ ಪ್ರಾಣಿ ಗಳ ದೇಹದ ಕೊಬ್ಬನ್ನು ತುಪ್ಪದೊಂದಿಗೆ ವಿವಿಧ ಪ್ರಮಾಣ ದಲ್ಲಿ ಬೆರೆಸಲಾಗುತ್ತದೆ. ಪ್ರಾಣಿಗಳ ದೇಹದ ಕೊಬ್ಬು ಗಟ್ಟಿಯಾಗಿರು ವುದರಿಂದ ಮೇಲ್ನೋಟಕ್ಕೆ ತುಪ್ಪದಲ್ಲಿ ಕಂಡು ಹಿಡಿಯುವುದು ಅಷ್ಟು ಸರಳವಲ್ಲ. ಪ್ರಾಣಿಗಳ ದೇಹದ ಕೊಬ್ಬಿನೊಂದಿಗೆ ಕಲಬೆರಕೆಯಾದ ತುಪ್ಪದ ರಾಸಾಯನಿಕ ಗುಣಲಕ್ಷಣಗಳು ಶುದ್ಧ ತುಪ್ಪದ ರೀತಿಯಲ್ಲೇ ಗೋಚರಿ ಸುತ್ತದೆ. ಆದ್ದರಿಂದ ಪತ್ತೆಹಚ್ಚು ವುದು ಕಷ್ಟ. ಪ್ರಾಣಿಗಳ ಕೊಬ್ಬು ಮಾತ್ರವಲ್ಲದೇ, ವನಸ್ಪತಿ ಬೆರೆಸಿಯೂ ತುಪ್ಪವನ್ನು ಕಲಬೆರಕೆ ಮಾಡಲಾಗುತ್ತದೆ.

ದನದ ಕೊಬ್ಬಿನ ತುಪ್ಪ ಪೂರೈಸಿದ್ದು ಯಾರು?
ಲಡ್ಡುಗೆ ದನದ ಕೊಬ್ಬು, ಮೀನೆಣ್ಣೆ ಬಳಸಲಾಗಿದೆ ಎಂಬ ವರದಿ ಬಹಿರಂಗವಾಗುತ್ತಿದ್ದಂತೆ, ತಮಿಳುನಾಡು ದಿಂಡಿಗಲ್‌ನ ಎ.ಆರ್‌.ಡೇರಿ ಫ‌ುಡ್‌ ಸುದ್ದಿಯಲ್ಲಿದೆ. ಜೂನ್‌, ಜುಲೈಯಲ್ಲಿ ಈ ಕಂಪನಿಯೇ ಟಿಟಿಡಿಗೆ ತುಪ್ಪವನ್ನು ಪೂರೈಸಿತ್ತು. ಜುಲೈ ತಿಂಗಳಲ್ಲಿ ತುಪ್ಪದ ಸ್ಯಾಂಪಲ್‌ನಲ್ಲೇ ಕಲಬೆರಕೆಯಾಗಿರುವುದು ಪತ್ತೆಯಾಗಿದೆ. ಆದರೆ ಈ ಆರೋಪವನ್ನು ಎ.ಆರ್‌.ಡೇರಿ ಫ‌ುಡ್‌ ನಿರಾಕರಿಸಿದೆ. ಟಿಟಿಡಿ ಪೂರೈಕೆದಾರರನ್ನು ಬದಲಿಸಿದ್ದರಿಂದ ನಾವು ತುಪ್ಪ ಪೂರೈಕೆಯನ್ನು ನಿಲ್ಲಿಸಿದ್ದೇವೆ. ಕೊಬ್ಬು ಪತ್ತೆಯಾಗಿರುವ ತುಪ್ಪ ನಮ್ಮ ಕಂಪನಿಗೇ ಸೇರಿದ್ದು ಎಂದು ರಿಪೋರ್ಟ್‌ನಲ್ಲಿ ಎಲ್ಲೂ ಹೇಳಿಲ್ಲ ಎಂದು ಎ.ಆರ್‌.ಡೇರಿ ಹೇಳಿಕೊಂಡಿದೆ.

ಟಿಟಿಡಿ ತುಪ್ಪ ಖರೀದಿ
ಟಿಟಿಡಿ ಮಂಡಳಿ ಪ್ರತೀ ವರ್ಷವೂ ಇ-ಟೆಂಡರ್‌ ಮೂಲಕ ತುಪ್ಪವನ್ನು ಖರೀದಿಸುತ್ತದೆ. ವರ್ಷಕ್ಕೆ ಅಂದಾಜು 5 ಲಕ್ಷ ಕೆ.ಜಿ. ತುಪ್ಪವನ್ನು ಖರೀದಿಸಲಾ ಗುತ್ತದೆ. ಅಂದರೆ ತಿಂಗಳಿಗೆ 42 ಸಾವಿರ ಕೆ.ಜಿ. ತುಪ್ಪವನ್ನು ಲಡ್ಡುಗಾಗಿ ಬಳಸಲಾ ಗುತ್ತದೆ. ಮೊದಲಿ ನಿದಂಲೂ ಟಿಟಿಡಿಗೆ ಕರ್ನಾಟಕದ ಕೆಎಂಎಫ್ ತುಪ್ಪವನ್ನು ಪೂರೈಸುತ್ತಿತ್ತು. ಆದರೆ ಕಡಿಮೆ ಬೆಲೆಯ ಕಾರಣಕ್ಕಾಗಿ ಕೆಎಂಎಫ್ ನಂದಿನಿ ತುಪ್ಪದ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು.

1715ಆಗಸ್ಟ್‌ 2: ತಿರುಪತಿ ಯಲ್ಲಿ ಶ್ರೀವಾರಿ ಲಡ್ಡು ಅರ್ಪಣೆ ಆರಂಭ
2014 ಶ್ರೀವಾರಿ ಲಡ್ಡುಗೆ ಜಿ.ಐ. ಟ್ಯಾಗ್‌ ಮಾನ್ಯತೆ ದೊರೆತದ್ದು
500 ಕೋಟಿ: ಲಡ್ಡು ತಯಾರಿಕೆಯಿಂದ ಟಿಟಿಡಿಗೆ ಬರುವ ವರಮಾನ
175 ಗ್ರಾಂ: ಪ್ರತೀ ಲಡ್ಡು ಇರಬೇಕಾದ ತೂಕ
50ರೂ ಈಗ 1 ಲಡ್ಡು ದರ
320ರೂ ಹಿಂದೆ ಟಿಟಿಡಿ ಪ್ರತೀ ಕೆ.ಜಿ. ತುಪ್ಪಕ್ಕೆ ಪಾವತಿಸುತ್ತಿದ್ದ ದರ
475ರೂ ಈಗ ಕೆಎಂಎಫ್ ನಂದಿನಿ ತುಪ್ಪಕ್ಕೆ ಪಾವತಿ ಸುತ್ತಿರುವ ಬೆಲೆ
350 ಟನ್‌: ಕಳೆದ 1 ತಿಂಗಳಿಂದ ಕೆಎಂಎಫ್ ಪೂರೈಸಿ ನಂದಿನಿ ತುಪ್ಪ
ದರ್ಶನ ಟಿಕೆಟ್‌, ಆಧಾರ್‌ ಕಾರ್ಡ್‌ ತೋರಿಸಿದರೆ ಎಷ್ಟು ಬೇಕಾದರೂ ಲಡ್ಡು ಲಭ್ಯ

ವರದಿಯಲ್ಲಿ ಏನಿದೆ?
ತಿರುಪತಿ ಲಡ್ಡು ಸ್ಯಾಂಪಲ್‌ಗ‌ಳನ್ನು ಗುಜರಾತ್‌ನ ಪ್ರಯೋಗಾಲಯ ದಲ್ಲಿ ಪರೀಕ್ಷಿಸಲಾಗಿದೆ. ಲಡ್ಡುಗೆ ಬಳಸಲಾದ ತುಪ್ಪದಲ್ಲಿ ಸೋಯಾ ಬಿನ್‌, ಕುಸುಬೆ, ಆಲಿವ್‌, ಗೋಧಿ ಹುರುಳಿ, ಮೆಕ್ಕೆಜೋಳ, ಹತ್ತಿ ಬೀಜಗಳು, ತಾಳೆ ಎಣ್ಣೆ ಜತೆಗೆ, ಮೀನೆಣ್ಣೆ, ದನದ ಕೊಬ್ಬು ಮತ್ತು ಹಂದಿ ಕೊಬ್ಬಿನ ಅಂಶಗಳಿರುವುದಾಗಿ ಎನ್‌ಡಿಡಿಬಿ ಕಾಫ್ ಲ್ಯಾಬ್‌ ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next