Advertisement

ಮರಳು ಲೂಟಿ ಮಾಡಲು ಬಿಡಲ್ಲ

01:06 PM May 25, 2020 | Naveen |

ತೀರ್ಥಹಳ್ಳಿ: ಸಾರ್ವಜನಿಕ ಸ್ವತ್ತಾಗಿರುವ ಮರಳನ್ನು ಯಾರೂ ಲೂಟಿ ಮಾಡಲು ಬಿಡುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

Advertisement

ಜಿಲ್ಲಾಡಳಿತ ನಿಗದಿಪಡಿಸಿರುವ ಸರ್ಕಾರಿ ಮರಳು ಕ್ವಾರಿಗಳಲ್ಲಿ ನಿಗದಿತ ದರಕ್ಕಿಂತ ಗುತ್ತಿಗೆದಾರರು ಹೆಚ್ಚುವರಿ ದರ ಪಡೆಯುತ್ತಿದ್ದಾರೆ ಎಂಬ ಲಾರಿ ಮಾಲೀಕರು ಮತ್ತು ಸಾರ್ವಜನಿಕರ ದೂರಿನ ಮೇರೆಗೆ ತಾಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಸ್ಥಳೀಯವಾಗಿ ತಾಲೂಕಿನ ಜನತೆಗೆ ಕಡಿಮೆ ಬೆಲೆಗೆ ಮರಳು ಸಿಗುವಂತಾಗಬೇಕು. ಮರಳು ಲಭ್ಯತೆಯ ಕುರಿತು ಯಾವುದೇ ಗೊಂದಲಗಳು ಇರಬಾರದು. ಮರಳು ಗುತ್ತಿಗೆದಾರರ ವಿರುದ್ಧ ನನಗೆ ರಾಜಕೀಯ ದುರುದ್ದೇಶವಿಲ್ಲ. ನನ್ನ ಪಕ್ಷದವರು ಕೂಡ ಈ ಮರಳು ಗುತ್ತಿಗೆದಾರರಿದ್ದಾರೆ. ಆದರೆ ಈ ರೀತಿ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ದೂರು ಬಂದರೆ ಸುಮ್ಮನಿರಲು ಆಗುವುದಿಲ್ಲ ಎಂದು ಗುತ್ತಿಗೆದಾರರಿಗೆ ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಶ್ಮಿ ಮಾತನಾಡಿ, ಗುತ್ತಿಗೆದಾರರು ಈಗಾಗಲೇ ಹೆಚ್ಚುವರಿ ದರ ಪಡೆಯುತ್ತಿರುವ ಬಗ್ಗೆ ಸಾಬೀತಾಗಿದ್ದು, ಕಾರಣ ಕೇಳಿ ಇಲಾಖೆ ವತಿಯಿಂದ ನೋಟಿಸ್‌ ಜಾರಿಗೊಳಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಸ್ಪಷ್ಟೀಕರಣವನ್ನು ಕೂಡ ಗುತ್ತಿಗೆದಾರರಿಂದ ಪಡೆದು ಎಚ್ಚರಿಕೆ ನೀಡಿದ್ದೇವೆ. ನಿಗದಿಗಿಂತ ಹೆಚ್ಚುವರಿ ಹಣ ಪಡೆದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಲ್‌ ಇನ್ಸ್‌ಪೆಕ್ಟರ್‌ ಗಣೇಶಪ್ಪ ಮಾತನಾಡಿ, ಇನ್ನು ಮುಂದೆ ಮರಳು ಕ್ವಾರಿಗಳಲ್ಲಿ ಎಎಸ್‌ಐ ಹುದ್ದೆಯ ಅಧಿಕಾರಿಗಳನ್ನು ನೇಮಿಸಿ ಕಾನೂನು ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾಲೂಕು ದಂಡಾಧಿಕಾರಿ ಡಾ| ಶ್ರೀಪಾದ್‌ ಮಾತನಾಡಿದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ಪಪಂ ಮುಖ್ಯಾಧಿಕಾರಿ ನಾಗೇಂದ್ರ, ತಾಪಂ ಸದಸ್ಯ ಕುಕ್ಕೆ ಪ್ರಶಾಂತ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.