Advertisement

ಟ್ರಾಫಿಕ್‌ ಜಾಮ್‌ನಿಂದ ಬೇಸತ್ತು ಬಾಂಬ್‌ ಬೆದರಿಕೆ! ಬಿಟೆಕ್‌ ವಿದ್ಯಾರ್ಥಿ ಬಂಧನ

11:16 AM Dec 23, 2022 | Team Udayavani |

ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆಗೆ ಬೇಸತ್ತ ಎಂಜಿನಿಯರ್‌ ವಿದ್ಯಾರ್ಥಿಯೊಬ್ಬ ಏರ್‌ ಪೋರ್ಟ್‌ಗೆ ಬಾಂಬ್‌ ಇಟ್ಟಿರುವುದಾಗಿ ಟ್ವೀಟ್‌ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಕೂಡ್ಲು ಗೇಟ್‌ ನಿವಾಸಿ ವೈಭವ್‌ ಗಣೇಶ್‌ (21) ಬಂಧಿತ ವಿದ್ಯಾರ್ಥಿ. ಆರೋಪಿಯಿಂದ ಟ್ವೀಟ್‌ ಮಾಡಲು ಬಳಸಿದ್ದ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

Advertisement

ವಿಮಾನ ನಿಲ್ದಾಣದ ಟರ್ಮಿನಲ್‌ ಮ್ಯಾನೇಜರ್‌ ರೂಪಾ ಮ್ಯಾಥ್ಯೂವ್‌ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವೈಭವ್‌ ಗಣೇಶ್‌ ಪೋಷಕರು ಪಂಜಾಬ್‌ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೂಡ್ಲು ಗೇಟ್‌ ಬಳಿ ವಾಸವಾಗಿದ್ದಾರೆ. ವೈಭವ್‌ ಗಣೇಶ್‌ ಪಂಜಾಬ್‌ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌ ಓದುತ್ತಿದ್ದಾನೆ.

ಪ್ರತಿ ಬಾರಿ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕೂಡ್ಲು ಗೇಟ್‌ ಬಳಿಯ ಮನೆಗೆ ಕ್ಯಾಬ್‌ನಲ್ಲಿ ಹೋಗುತ್ತಿದ್ದ. ಈ ಮಾರ್ಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಅದರಿಂದ ಬೇಸತ್ತಿದ್ದ ವೈಭವ್‌ ಗಣೇಶ್‌, ಪೋಷಕರ ಜತೆಯೂ ಟ್ರಾಫಿಕ್‌ ಜಾಮ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಂಬುದು ಗೊತ್ತಾಗಿದೆ.

ಟ್ವಿಟರ್‌ನಲ್ಲಿ ಬಾಂಬ್‌ ಬೆದರಿಕೆ: ಡಿ.10ರಂದು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಮನೆಗೆ ಹೋಗುವಾಗ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಅದರಿಂದ ಆಕ್ರೋಶಗೊಂಡಿದ್ದ ಆರೋಪಿ, “ವಿ-ಫ್ಯೂಚರ್‌ ಎಫ್ಟಿಸುಫ್ಮಾನ್‌’ ಹೆಸರಿನ ಟ್ವಿಟರ್‌ ಖಾತೆಯಲ್ಲಿ ರಾತ್ರಿ 10.15ರ ಸುಮಾರಿಗೆ ಟ್ವೀಟ್‌ ಮಾಡಿದ್ದಾನೆ. “ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡುತ್ತೇನೆ.

ಹೀಗಾಗಿ ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮರು ನಿರ್ಮಿಸಬೇಕಾಗುತ್ತದೆ ‘ ಎಂದು ಆರೋಪಿ ಟ್ವೀಟ್‌ ಮಾಡಿದ್ದ. ಒಂದೆರಡು ದಿನಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ. ಡಿ.12ರಂದು ವಿಮಾನ ನಿಲ್ದಾಣ ಸಿಬ್ಬಂದಿ ಗಮನಿಸಿ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಏರ್‌ಪೋರ್ಟ್‌ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ ದಾಖಲಿಸಿದ್ದರು.

Advertisement

ಬಳಿಕ ಏರ್‌ಪೋರ್ಟ್‌ ಮ್ಯಾನೇಜರ್‌ ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ದೇವನಹಳ್ಳಿಯ ಜೆಎಂಎಫ್ ಸಿ ಕೋರ್ಟ್‌, ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಆರೋಪಿಯನ್ನು ಬಂಧಿಸಲಾಗಿದೆ.

ಪ್ರತಿ ಬಾರಿ ಟ್ರಾಫಿಕ್‌ ಜಾಮ್‌ಗೆ ಸಿಲುಕುತ್ತಿದ್ದ ವಿದ್ಯಾರ್ಥಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ, ಕೆಲ ದಿನಗಳ ಹಿಂದೆ ಟ್ವಿಟರ್‌ನಲ್ಲಿ ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸಲಾಗಿದೆ. ಆತ ಎಂಜಿನಿಯರಿಂಗ್‌ ವಿದ್ಯಾರ್ಥಿ ಎಂಬದು ಗೊತ್ತಾಗಿದೆ. ಪಂಜಾಬ್‌ನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದು, ಪ್ರತಿ ಬಾರಿ ವಿಮಾನ ನಿಲ್ದಾಣದಿಂದ ಕೂಡ್ಲು ಗೇಟ್‌ನ ಮನೆಗೆ ಹೋಗುವಾಗ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕುತ್ತಿದ್ದ. ಅದರಿಂದ ಬೇಸತ್ತು ಟ್ವೀಟ್‌ ಮಾಡಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next