ಬಾಗಲಕೋಟೆ: ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಪರೀಕ್ಷೆ ವಿಭಾಗದ ನಿರ್ಲ ಕ್ಷ್ಯದಿಂದ ಜಿಲ್ಲೆಯ ಪದವಿ ಕಾಲೇಜುಗಳ ಉಪನ್ಯಾಸಕರು ಹೈರಾಣಾಗಿದ್ದಾರೆ. ಸೋಮವಾರ ಬೆಳಗ್ಗೆ 9ಕ್ಕೆ ಪದವಿ ಪರೀಕ್ಷೆಗಳಿದ್ದು, ತಡರಾತ್ರಿವರೆಗೂ ಪ್ರಶ್ನೆಪತ್ರಿಕೆಗಳೇ ಬಂದಿರಲಿಲ್ಲ. ಇದರಿಂದ ಉಪನ್ಯಾಸಕರು ಪೇಚಿಗೆ ಸಿಲುಕಿದ್ದಾರೆ.
ಸೋಮವಾರ ಬೆಳಗ್ಗೆ 9ಕ್ಕೆ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳಲ್ಲಿ ಬಿಎ 1, 3 ಹಾಗೂ 5ನೇ ಸೆಮಿಸ್ಟರಿಯ ಭಾರತೀಯ ಕಾನೂನು ವಿಷಯ ಕುರಿತು ಪರೀಕ್ಷೆ ಇವೆ. ಜಿಲ್ಲೆಯಲ್ಲಿ ಒಟ್ಟು 24 ಪರೀಕ್ಷಾ ಕೇಂದ್ರಗಳಿವೆ. ಪದವಿ ಪರೀಕ್ಷೆಗೆ ರಾಣಿ ಚನ್ನಮ್ಮ ವಿವಿಯಿಂದ ಪ್ರಶ್ನೆ ಪತ್ರಿಕೆಗಳೇ ಜಿಲ್ಲೆಗೆ ಬಂದಿಲ್ಲ. ಇದರಿಂದ ಪರೀಕ್ಷೆ ಹೇಗೆ ನಡೆಸುವುದು ಎಂಬ ತೀವ್ರ ಗೊಂದಲದಲ್ಲಿ ಕಾಲೇಜು ಆಡಳಿತ ಮಂಡಳಿಯವರು ತಲೆಕೆಡಿಸಿಕೊಂಡಿದ್ದಾರೆ.
ಪದವಿ ಪ್ರಶ್ನೆ ಪತ್ರಿಕೆಗಳ ವಿತರಣೆ ಕೇಂದ್ರವನ್ನಾಗಿ ನಗರದ ಎಸ್.ಸಿ. ನಂದಿಮಠ ಕಾನೂನು ಕಾಲೇಜು ಆವರಣದಲ್ಲಿರುವ ಎಸ್.ಆರ್. ಕಂಠಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಜವಾಬ್ದಾರಿ ನೀಡಿದ್ದು, ರಾಣಿ ಚನ್ನಮ್ಮ ವಿವಿಯಿಂದ ಈ ಅಧ್ಯಯನ ಕೇಂದ್ರಕ್ಕೆ ನ. 24ರಂದು ಬೆಳಗ್ಗೆ 10:30ಕ್ಕೆ ಪ್ರಶ್ನೆ ಪತ್ರಿಕೆಗಳನ್ನು ವಿತರಣೆ ಮಾಡುವುದಾಗಿ ವಿವಿ ಮೊದಲೇ ಆದೇಶಿಸಿತ್ತು. ಹೀಗಾಗಿ ಜಿಲ್ಲೆಯ ಪದವಿ ಕಾಲೇಜುಗಳ ಪ್ರಾಚಾರ್ಯರು, ಕೆಲ ಉಪನ್ಯಾಸಕರು ಬೆಳಗ್ಗೆಯಿಂದಲೇ ಅಧ್ಯಯನ ಕೇಂದ್ರದ ಆವರಣದಲ್ಲಿ ಕಾಯುತ್ತ ಕುಳಿತಿದ್ದರು.
ರಾತ್ರಿಯಾದರೂ ಪ್ರಶ್ನೆ ಪತ್ರಿಕೆಗಳು ಬಾಗಲಕೋಟೆಗೆ ಬಂದಿರಲಿಲ್ಲ. ಹೀಗಾಗಿ ಬೆಳಗ್ಗೆ 9ಕ್ಕೆ ಪರೀಕ್ಷೆಗಳಿದ್ದು, ಹೇಗೆ ನಡೆಸುವುದು ಎಂಬ ತೀವ್ರ ಆತಂಕದಲ್ಲಿ ಪ್ರಾಚಾರ್ಯರಿದ್ದರು. ಕಳೆದ ವಾರವೂ ರಾಣಿ ಚನ್ನಮ್ಮ ವಿವಿಯಿಂದ ಪ್ರಶ್ನೆ ಪತ್ರಿಕೆಗಳು ಬಂದಿರಲಿಲ್ಲ. ಆಗ ಕೇವಲ ಒಂದು ಪ್ರಶ್ನೆ ಪತ್ರಿಕೆಯನ್ನು ಇ ಮೇಲ್ ಮೂಲಕ ಕಳುಹಿಸಿದ್ದು, ಅದನ್ನೇ ಪ್ರಿಂಟ್ ಮಾಡಿ, ಝರಾಕ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪದವಿ ಪರೀಕ್ಷೆಗಳ ಕುರಿತು ರಾಣಿ ಚನ್ನಮ್ಮ ವಿವಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹಲವು ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.