Advertisement

BMTC: ಬಿಎಂಟಿಸಿಯಲ್ಲಿ ಬರಲಿದೆ ಟೈರ್‌ ಇಂಟಲಿಜೆಂಟ್‌

08:55 AM Sep 02, 2024 | Team Udayavani |

ಬೆಂಗಳೂರು:  ಸಾಮಾನ್ಯವಾಗಿ ನಿಮ್ಮ ವಾಹನದಲ್ಲಿರುವ ಪೆಟ್ರೋಲ್‌ ಅಥವಾ ಡೀಸೆಲ್‌ ಅಥವಾ ಚಾರ್ಜ್‌ ಎಷ್ಟು? ಅದರಲ್ಲಿ ಇನ್ನೂ ಎಷ್ಟು ಕಿ.ಮೀ. ಸಂಚರಿಸಬಹುದು ಎಂಬುದು ಡ್ಯಾಶ್‌ಬೋರ್ಡ್‌ನಲ್ಲಿ ಕಾಣುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ವಾಹನದ ಟೈರ್‌ ಇನ್ನೆಷ್ಟು ದಿನ ಬಾಳಿಕೆ ಬರಲಿದೆ? ಉತ್ತಮ ಬಾಳಿಕೆ ಜತೆಗೆ ಸುಧಾರಿತ ರಸ್ತೆ ಯಾವುದು ಎಂಬುದರ ಮಾಹಿತಿಯನ್ನೂ ನೀಡುವ ತಂತ್ರಜ್ಞಾನವೊಂದು ಬಂದಿದೆ. ಈ ಅತ್ಯಾಧುನಿಕ ಇಂಟೆಲಿಜೆಂಟ್‌ ಟೈರ್‌ ನಿರ್ವಹಣಾ ವ್ಯವಸ್ಥೆ ಅಳವಡಿಕೆಗೆ ಬಿಎಂಟಿಸಿ ಚಿಂತನೆ ನಡೆಸಿದೆ.

Advertisement

ಯಾವುದೇ ವಾಹನಗಳ ಟೈರ್‌ಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡುವ ತಂತ್ರಜ್ಞಾನವನ್ನು ಎಬಿಸಿಆರ್‌ಎಲ್‌ ಎಂಬ ಸ್ಟಾರ್ಟ್‌ಅಪ್‌ ಅಭಿವೃದ್ಧಿಪಡಿಸಿದೆ. ಇದು ಸರ್ಕಾರದ ಸಹಯೋಗದಲ್ಲಿ ಸ್ಥಾಪಿಸಿದ ಸೆಂಟರ್‌ ಆಫ್ ಎಕ್ಸಿಲೆನ್ಸ್‌ ಸೆಮಿಕಂಡಕ್ಟರ್‌ ಫ್ಯಾಬಲೆಸ್‌ ಎಕ್ಸಿಲರೇಟರ್‌ ಲ್ಯಾಬ್‌ (ಎಸ್‌ಎಫ್ಎಎಲ್‌-ಸಫ‌ಲ್‌) ನೆರವಿನಲ್ಲಿ ಅಸ್ತಿತ್ವಕ್ಕೆ ಬಂದ ಸ್ಟಾರ್ಟ್‌ಅಪ್‌ ಆಗಿದ್ದು, “ಟೈರ್‌ಸಿನ್ಯಾಪ್ಸ್‌’ ಚಿಪ್‌ ಹೊರತಂದಿದೆ.

ಟೈರ್‌ಗಳ ಮೇಲೆ ಕಣ್ಗಾವಲಿಡುವ ಈ ಚಿಪ್‌ಗ್ಳನ್ನು ಅಳವಡಿಸುವ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯೊಂದಿಗೆ ಪ್ರಾಥಮಿಕ ಮಾತುಕತೆ ನಡೆದಿದ್ದು, ಪರೀಕ್ಷಾರ್ಥವಾಗಿ ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ “ವಾಯುವಜ್ರ’ ವೋಲ್ವೋ ಮತ್ತು ಈಚೆಗೆ ರಸ್ತೆಗಿಳಿದ ವಿದ್ಯುತ್‌ಚಾಲಿತ ಬಸ್‌ಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದು ಯಶಸ್ವಿಯಾದರೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಈ ಪ್ರಯೋಗ ನಡೆಸಲು ಚಿಂತನೆ ನಡೆದಿದೆ.

ಈ ತಂತ್ರಜ್ಞಾನದ ಅಳವಡಿಕೆಯಿಂದ ಟೈರ್‌ಗಳ ಬಾಳಿಕೆ ನಿಖರವಾಗಿ ತಿಳಿಯಬಹುದು. ಜತೆಗೆ ಆ ಟೈರ್‌ಗಳ ಮೇಲೆ ಎಷ್ಟು ಲೋಡ್‌ ಹಾಕಬಹುದು ಮತ್ತು ವಾಹನ ಸಾಗುವ ರಸ್ತೆ ಕಳಪೆ ಗುಣಮಟ್ಟ ದ್ದಾಗಿದ್ದರೆ, ಅದರ ಬಗ್ಗೆಯೂ ಇದು ಮುನ್ಸೂಚನೆ ನೀಡುವುದರೊಂದಿಗೆ ಪರ್ಯಾಯ ರಸ್ತೆಯ ಮಾಹಿತಿಯನ್ನೂ ನೀಡಲಿದೆ. ಅದನ್ನು ಆಧರಿಸಿ ಟೈರ್‌ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ಎಬಿಸಿಆರ್‌ಎಲ್‌ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಷಾರ್‌ ಕಾಂತಿ ಭಟ್ಟಾಚಾರ್ಯ “ಉದಯವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಒಂದು ಬಸ್‌ನ ಟೈರ್‌ ಅನ್ನು 50 ಸಾವಿರ ಕಿ.ಮೀ. ನಂತರ ಬದಲಾಯಿಸಲಾಗುತ್ತದೆ. ಇದನ್ನು ಮ್ಯಾನ್ಯುವಲ್‌ ಆಗಿ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಮುಂಚಿತವಾಗಿಯೇ ಟೈರ್‌ ಬದಲಾಯಿಸಲಾಗುತ್ತದೆ. ಟೈರ್‌ಗಳ ಸಾಮರ್ಥ್ಯದ ಮೇಲೆ ಲೋಡ್‌ ಇರಬೇಕು. ಅದರ ನಿರ್ವಹಣೆ ಯನ್ನೂ ಈ ತಂತ್ರಜ್ಞಾನದಿಂದ ನಿಖರವಾಗಿ ಮಾಡ ಬಹುದು. ಇದರಿಂದ ಪರೋಕ್ಷವಾಗಿ ಸಾರಿಗೆ ನಿಗಮ ಗಳಿಗೆ ಉಳಿತಾಯ ಆಗಲಿದೆ. ಪ್ರಾಥಮಿಕ ಹಂತದ ಚರ್ಚೆ ನಡೆದಿದ್ದು, ಬರುವ ಮಾರ್ಚ್‌ ವೇಳೆಗೆ ಪರೀ ಕ್ಷಾರ್ಥವಾಗಿ ಕೆಲವು ಬಸ್‌ಗಳಲ್ಲಿ ಅಳವಡಿಸುವ ಚಿಂತನೆ ಇದೆ ಎಂದು ತುಷಾರ್‌ ಕಾಂತಿ ಭಟ್ಟಾಚಾರ್ಯ ಸ್ಪಷ್ಟಪಡಿಸಿದರು.

Advertisement

ಇದು ಬಸ್‌ಗಳು ಮಾತ್ರವಲ್ಲ; ದ್ವಿಚಕ್ರ, ನಾಲ್ಕು ಚಕ್ರ ಸೇರಿದಂತೆ ಎಲ್ಲ ಪ್ರಕಾರದ ವಾಹನಗಳ ಟೈರ್‌ ನಿರ್ವಹಣೆಗೂ ಅಳವಡಿಸಬಹುದು. ವಿಶೇಷವಾಗಿ ವಿದ್ಯುತ್‌ಚಾಲಿತ ವಾಹನಗಳಿಗೆ ಈ ಚಿಪ್‌ ಅಳವಡಿಸಿದರೆ, ಟೈರ್‌ಗಳ ನಿರ್ವಹಣೆಯಿಂದ ಕಡಿಮೆ ವಿದ್ಯುತ್‌ನಲ್ಲಿ ಹೆಚ್ಚು ಸಂಚರಿಸಲು ಅನುಕೂಲ ಆಗಲಿದೆ. ಅಷ್ಟೇ ಅಲ್ಲ, ಬ್ಯಾಟರಿ ಮೇಲಿನ ಒತ್ತಡ ಕೂಡ ತಗ್ಗಲಿದೆ. ಇದಕ್ಕಾಗಿ ಕೆಲವು ಒಇಎಂ (ಒರಿಜಿನಲ್‌ ಇಕ್ವಿಪ್‌ಮೆಂಟ್‌ ಮ್ಯಾನ್ಯುಫ್ಯಾಕ್ಚರರ್)ಗಳೊಂದಿಗೂ ಮಾತುಕತೆ ನಡೆದಿದೆ ಎಂದೂ ಅವರು ಹೇಳಿದರು.

ಇಂಟೆಲಿಜೆಂಟ್‌ ಟೈರ್‌ ಮಾನಿಟರಿಂಗ್‌ ಸಲ್ಯುಷನ್‌ ಚಿಪ್‌ ಅಳವಡಿಸುವ ಬಗ್ಗೆ ಬಿಎಂಟಿಸಿಯೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ. ಪರೀಕ್ಷಾರ್ಥವಾಗಿ ಕೆಲವು ವೋಲ್ವೋ ಮತ್ತು ವಿದ್ಯುತ್‌ಚಾಲಿತ ಬಸ್‌ಗಳಿಗೆ ಅಳವಡಿಸಲು ನಾವು ಉದ್ದೇಶಿಸಿದ್ದೇವೆ. ಈ ನಿಟ್ಟಿನಲ್ಲಿ ಮಾರ್ಚ್‌ ವೇಳೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಕಂಪನಿಯ ಉತ್ಪನ್ನಗಳು 2025ರ ಅಂತ್ಯಕ್ಕೆ ಅಥವಾ 2026ರ ಆರಂಭದಲ್ಲಿ ಮಾರುಕಟ್ಟೆಗೆ ಬರಲಿವೆ.-ತುಷಾರ್‌ ಕಾಂತಿ ಭಟ್ಟಾಚಾರ್ಯ, ಸಹ ಸಂಸ್ಥಾಪಕರು, ಎಬಿಸಿಆರ್‌ಎಲ್‌

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next