ಡೆಹ್ರಾಡೂನ್: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಉತ್ತರಾಖಂಡ್ ನ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ರಾತ್ರಿ ಉತ್ತರಾಖಂಡ್ ನ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರನ್ನು ರಾಜಭವನದಲ್ಲಿ ಭೇಟಿಯಾದ ತೀರಥ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.
ಇದರೊಂದಿಗೆ ತೀರಥ್ ಸಿಂಗ್ ಉತ್ತರಾಖಂಡ್ ಇತಿಹಾಸದ ಅತೀ ಕಡಿಮೆ ದಿನ ಅಧಿಕಾರ ನಡೆಸಿದ ಮುಖ್ಯಮಂತ್ರಿಯಾದರು. ತೀರಥ್ ಸಿಂಗ್ ಅವರು ಕೇವಲ 115 ದಿನಗಳ ಕಾಲ ಮಾತ್ರ ಸಿಎಂ ಆಗಿದ್ದರು.
ಸಂಸದರಾಗಿರುವ ತೀರಥ್ ಇನ್ನು ಎರಡು ತಿಂಗಳಲ್ಲಿ ವಿಧಾನಸಭೆಗೆ ಆಯ್ಕೆಯಾಗಬೇಕು. ಸದ್ಯಕ್ಕೆ ಕೋವಿಡ್ ಇರುವುದರಿಂದ ಉಪಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಹೀಗಾಗಿ ರಾಜ್ಯದಲ್ಲಿ “ಸಾಂವಿಧಾನಿಕ ಬಿಕ್ಕಟ್ಟನ್ನು ತಪ್ಪಿಸುವ” ಸಲುವಾಗಿ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತೀರಥ್ ಸಿಂಗ್ ರಾವತ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಸದ್ಯ ಜೀವಿಸುವುದೇ ಪ್ರಧಾನ ಅನಂತರವೇ ದೇವರ ಚಿಂತನೆ : ಮದ್ರಾಸ್ ಹೈಕೋರ್ಟ್‌ನ ಮಹತ್ವದ ಅಭಿಮತ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಶನಿವಾರ ವೀಕ್ಷಕರಾಗಿ ಡೆಹ್ರಾಡೂನ್‌ಗೆ ಹೋಗುವಂತೆ ಕೇಳಿದೆ. ಪಕ್ಷದ ಹೈಕಮಾಂಡ್ ಮಧ್ಯಾಹ್ನ 3 ಗಂಟೆಗೆ ಡೆಹ್ರಾಡೂನ್‌ನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಶಾಸಕರ ಸಭೆ ಕರೆದಿದೆ.
ತ್ರಿವೇಂದ್ರ ಸಿಂಗ್ ರಾವತ್ ಅವರ ಸ್ಥಾನಕ್ಕೆ ತೀರಥ್ ಸಿಂಗ್ ರಾವತ್ ಮಾರ್ಚ್ 10 ರಂದು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.