ಮಧುಗಿರಿ: ನಗರದ ಏಕಶಿಲಾ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಖುಷಿ ಹಾಗೂ ದೇಶಪ್ರೇಮದ ಅನುಭವ ನೀಡಿದೆ ಎಂದು ಮಾಜಿ ಸೈನಿಕ ಹಾಗೂ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.
ಪಟ್ಟಣದ ಏಕಶಿಲಾ ಬೆಟ್ಟದ ಮೇಲೆ ತ್ರಿವರ್ಣಧ್ವಜ ಹಾರಿಸಿ ಮಾತನಾಡಿದ ಅವರು, ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಲಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3900 ಅಡಿ ಎತ್ತರದಲ್ಲಿದೆ. ಅಂತಹ ಜಾಗದಲ್ಲಿ ಧ್ವಜಾರೋಹಣ ಖುಷಿ ನೀಡಿದೆ. ಇನ್ನೂ 3 ದಿನ ಈ ಕಾರ್ಯಕ್ರಮ ಯಾವುದೇ ಅಪಶಕುನವಿಲ್ಲದೆ ಯಶಸ್ವಿಯಾಗಿ ನಡೆಸಲು ಎಲ್ಲರಲ್ಲೂ ಮನವಿ ಮಾಡಿದರು.
ಸಿಬ್ಬಂದಿ ನೇಮಕ: ಡಿವೈಎಸ್ಪಿ ವೆಂಕಟೇಶ್‌ನಾಯ್ಡು ಮಾತನಾಡಿ, ಆ.15ರಂದು ಏಕಶಿಲಾ ಬೆಟ್ಟದಲ್ಲಿ ಪ್ರವಾಸಿಗರು ಹೆಚ್ಚಾಗಲಿದ್ದು, ಆರ್ಕಿಯಾಲಜಿ ಇಲಾಖೆಯಿಂದ ಈಗಾಗಲೇ ಸಿಬ್ಬಂದಿ ನೇಮಕವಾಗಿದೆ. ಬೆಟ್ಟ ಹತ್ತುವವರ ವಿಳಾಸ, ಮೊಬೈಲ್ ನಂಬರ್ ಪಡೆಯಲಿದ್ದು, ಸಂಜೆಗೆ ಅದರ ಪರಿಶೀಲನೆ ಮಾಡಲಿದ್ದಾರೆ ಎಂದು ವಿವರಿಸಿದರು.
ಗೈಡ್‌ನ ಸಹಾಯ ಪಡೆಯಿರಿ: ನಮ್ಮ ಇಲಾಖೆಯಿಂದಲೂ ಪೇದೆಗಳನ್ನು ನಿಯೋಜಿಸಲಿದ್ದು, ಬೆಟ್ಟದ ಮೇಲೆ ಬಿರುಗಾಳಿ ಹೆಚ್ಚಿದೆ. ಮಳೆ ನಿಂತಿದ್ದರೂ ಬಂಡೆಗಳು ತೇವಾಂಶದಿಂದ ಕೂಡಿರುವುದು ಅಪಾಯಕಾರಿ. ಬೆಟ್ಟ ಹತ್ತುವವರು ಎಲ್ಲಾ ರೀತಿಯ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಾಧ್ಯವಾದರೆ ಸ್ಥಳೀಯ ಗೈಡ್‌ನ ಸಹಾಯ ಪಡೆದು ಬೆಟ್ಟ ಹತ್ತಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶಾ ಚಾರ್, ತಾಲೂಕು ಪಂಚಾಯ್ತಿ ಇಒ ಲಕ್ಷ್ಮಣ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ರಕ್ತದಾನಿ ಶಿಕ್ಷಕರ ಬಳಗದ ಅಧ್ಯಕ್ಷ ಶಶಿಕುಮಾರ್, ಎಡಿಗಳಾದ ವಿಶ್ವನಾಥ್‌ಗೌಡ, ಲಕ್ಷ್ಮೀನರಸಯ್ಯ, ರಂಗಸ್ವಾಮಿ, ಡಿಎಚ್‌ಒ ಡಾ.ರಮೇಶ್‌ಬಾಬು, ಎಡಿ ಮಧುಸೂದನ್, ಪಿಡಿಒಗಳಾದ ನವೀನ್, ಜುಂಜೇಗೌಡ, ಶಿವಕುಮಾರ್, ರವಿಚಂದ್ರ, ಕುಮಾರಸ್ವಾಮಿ, ವಿಐಗಳಾದ ಪರಮೇಶ್, ನಾಗೇಶ್, ಮಹೇಶ್, ರವಿ, ಗಂಗಾಧರ್, ಸುನೀಲ, ಮಧುಗಿರಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.