Advertisement

ಟಿಪ್ಪು ಕಾಲದ ಕೋಟೆ ಗೋಡೆಗಳ ಕುಸಿತ

05:18 PM Oct 15, 2017 | Team Udayavani |

ಶ್ರಿರಂಗಪಟ್ಟಣ: ಪಟ್ಟಣದ ಸುತ್ತಮುತ್ತ ಟಿಪ್ಪು ಕಾಲದಲ್ಲಿ ನಿರ್ಮಾಣಗೊಂಡಿರುವ ಕೋಟೆಗಳು ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬೀಳುತ್ತಿವೆ. ಪಟ್ಟಣ ಪುರಸಭೆ ಕಚೇರಿ ಹಿಂಭಾಗ ದಲ್ಲಿರುವ ಕಂದಕ್ಕೆ ಹೊಂದಿಕೊಂಡಿರುವ 40 ಅಡಿ ಎತ್ತರದ ಕೋಟೆ, ಆನೆ ಕೋಟೆ ಬಾಗಿಲು ಬಳಿ ನವೀಕರಿಸಿದ ಕೋಟೆ, ಕಾವೇರಿ ಪುರ
ಬಡಾವಣೆಯ ಕಂದಕದ ಗೋಡೆ ಸೇರಿದಂತೆ ಪಟ್ಟಣದ ಸುತ್ತಲೂ ಇರುವ ಕೋಟೆ ಗೋಡೆಗಳು ಸತತ ಮಳೆಗೆ ಕುಸಿಯುತ್ತಿವೆ.

Advertisement

ಕಳಪೆ ಕಾಮಗಾರಿ: ವಾರದಿಂದ ಸತತ ಮಳೆಯಾಗುತ್ತಿರುವ ಕಾರಣ ಮಣ್ಣು ಶಿಥಿಲಗೊಂಡು, ಗೋಡೆಗಳು
ಕುಸಿಯಲಾರಂಭಿಸಿವೆ. ಶಿಥಿಲಾವಸ್ಥೆ ಯಲ್ಲಿರುವ ಹಳೆಯ ಕೋಟೆ ಗೋಡೆಗಳು ಕುಸಿದು ಬೀಳುತ್ತಿರುವುದು ಇತಿಹಾಸಕಾರರಲ್ಲಿ ಆತಂಕ ಮೂಡಿಸಿದೆ. ಕುಸಿದಿದ್ದ ಹಳೆಯ ಕೋಟೆ ಗೋಡೆಗಳನ್ನು ಹೊಸದಾಗಿ ನವೀಕರಿಸಲಾಗಿತ್ತಾದರೂ ಕೆಲ ವರ್ಷಗಳಲ್ಲೇ ಮತ್ತೆ ಅವು ಕುಸಿದು ಬಿದ್ದಿರುವುದು ಕಳಪೆ ಕಾಮಗಾರಿ ನಡೆದಿರುವ ಬಗ್ಗೆ
ಅನುಮಾನಗಳು ಮೂಡುವಂತೆ ಮಾಡಿದೆ.

15 ಮೀಟರ್‌ನಷ್ಟು ಕುಸಿತ: ಧ್ವನಿಬೆಳಕು ನಡೆಯುವ ಆನೆ ಕೋಟೆ ಬಾಗಿಲು ಬಳಿಯ ನವೀಕರಿಸಿದ ಕೋಟೆ ಗೋಡೆ ಎರಡು ಕಡೆಗಳಲ್ಲಿ ಸುಮಾರು 15 ಮೀಟರ್‌ನಷ್ಟು ಕುಸಿದಿದೆ. ನಿರ್ವಹಣೆ ಇಲ್ಲದಿರುವುದೇ ಗೋಡೆ ಕುಸಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಯಷ್ಟೆ ಇದೇ ಸ್ಥಳದಲ್ಲಿ ಕೋಟೆಯ ಗೋಡೆ ಕುಸಿತವಾಗಿತ್ತು. ಆ ಸಮಯದಲ್ಲಿ ಕೋಟೆಯನ್ನು ನವೀಕರಣ ಮಾಡಲಾಗಿತ್ತು.

ಆ ಗೋಡೆ ಮತ್ತೆ ಕುಸಿದಿದೆ ಪರಿಶೀಲನೆ: ಕಾವೇರಿಪುರ ಬಡಾವಣೆ ಬಳಿ ಇರುವ ಕಂದಕದ ಕೋಟೆ ಗೋಡೆಗಳು
ಎರಡು ಕಡೆ ಕುಸಿದು ಬಿದ್ದಿದೆ. ರಾಜ್ಯ ಪುರಾತತ್ವ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಒಮ್ಮೆ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಅಂದರೆ ಕೋಟೆ ನಾಡು ಎಂದೇ ಪ್ರಸಿದ್ಧಿ. ಇಲ್ಲಿರುವ ಕಂದಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಕಂದಕಗಳ ಮೇಲೆ ಗಿಡ-ಗಂಟಿಗಳು ಬೆಳೆದುಕೊಂಡಿವೆ. ಹಲವೆಡೆ ನೀರು ಹರಿಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕೋಟೆ ಗೋಡೆಗಳು ಕುಸಿದು ಬೀಳುವಂತಾಗಿದೆ. 

ಸಂರಕ್ಷಣೆ ಅಗತ್ಯ: ಶ್ರೀರಂಗಪಟ್ಟಣದಲ್ಲಿರುವ ಒಂದೊಂದು ಕೋಟೆಯೂ ಒಂದೊಂದು ಇತಿಹಾಸವನ್ನು ಹೇಳುತ್ತದೆ. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೋಟೆಗಳನ್ನು ರಕ್ಷಣೆ ಮಾಡುವುದು ಪುರಾತತ್ವ ಇಲಾಖೆ ಅಧಿಕಾರಿಗಳ ಕರ್ತವ್ಯ. ಕೋಟೆಗಳ ಹಿಂದಿರುವ ಇತಿಹಾಸವನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಲು ಸೂಕ್ತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಶ್ರೀರಂಗಪಟ್ಟಣವನ್ನು ಆಳಿದ ರಾಜ-ಮಹಾರಾಜರು ಪಟ್ಟಣದ ಸುತ್ತಲೂ ಇರುವ ಕೋಟೆಗಳನ್ನು ನಿರ್ಮಿಸಿದ್ದರಿಂದ ಶ್ರೀರಂಗಪಟ್ಟಣಕ್ಕೆ ಕೋಟೆಗಳ ನಾಡು ಎಂಬ ಹೆಸರು ಬಂದಿದೆ.

Advertisement

ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಇತಿಹಾಸವನ್ನು ನೆನೆಪಿಸುವ ಸಾಕ್ಷಿಪ್ರಜ್ಞೆಗಳಾಗಿ ಕೋಟೆಗಳಿವೆ. ಈಗಲಾದರೂ ಪುರತತ್ವ ಇಲಾಖೆ ಎಚ್ಚೆತ್ತು ಕೋಟೆಯ ಗೋಡೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next