Advertisement

ಟಿಪ್ಪು ಜಯಂತಿಗೆ ಮತ್ತೆ ಸಂಘರ್ಷದ ಬಣ್ಣ​​​​​​​

06:35 AM Oct 22, 2017 | Team Udayavani |

ಟಿಪ್ಪು ಜಯಂತಿ ಆಚರಣೆಯ ವಿವಾದದ ಕಾವು ಮತ್ತೆ ಭುಗಿಲೆದ್ದಿದೆ. ಯಥಾಪ್ರಕಾರದಂತೆ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಪ್ರತಿರೋಧದ ದನಿ ಹೊರಡಿಸಿದೆ. ಈ ನಡುವೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು “ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ’ ಸರ್ಕಾರಕ್ಕೆ ಬರೆದ ಪತ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ನಳೀನ್‌ ಕುಮಾರ್‌ ಕಟೀಲು ಸೇರಿ ಹಲವು ಬಿಜೆಪಿ ನಾಯಕರು ಸಹಮತ ವ್ಯಕ್ತಪಡಿಸಿರುವ ಬೆನ್ನಲ್ಲೇ, “ಕಾರ್ಯಕ್ರಮಕ್ಕೆ ಬರೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಬಿಜೆಪಿಯವರು ಮೊದಲು ಟಿಪ್ಪುವಿನ ಇತಿಹಾಸ ಓದಲಿ’ ಅಂತ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದಕ್ಕೆ ಜೆಡಿಎಸ್‌ ಕೂಡ ದನಿಗೂಡಿಸಿದೆ. ಒಟ್ಟಿನಲ್ಲಿ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ತೀವ್ರ ಚರ್ಚೆಗೆ ಕಾರಣವಾಗಿದೆ…

Advertisement

ಅವರು ಇತಿಹಾಸ ಓದಿ ಮಾತನಾಡಲಿ 
ಬೆಂಗಳೂರು: “
ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೆಸರನ್ನು ನಮೂದಿಸುವುದು ಸರ್ಕಾರದ ಶಿಷ್ಟಾಚಾರ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅನಂತಕುಮಾರ್‌ ಹೆಗಡೆ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೇಂದ್ರ ಸಚಿವರಾಗಿ ಕಾರ್ಯಕ್ರಮಕ್ಕೆ ಬರಬೇಕು. ಆದರೆ, ಬರಲೇ ಬೇಕೆಂದು ಹೇಳಲು ಸಾಧ್ಯವಿಲ್ಲ. ಬಿಜೆಪಿಯವರು ಟಿಪ್ಪು ಸುಲ್ತಾನ್‌ ಇತಿಹಾಸ ಓದಿಕೊಂಡು ಮಾತನಾಡಲಿ. ಬ್ರಿಟಿಷರ ವಿರುದ್ಧ ಟಿಪ್ಪು ನಾಲ್ಕು ಬಾರಿ ಯುದ್ಧ ನಡೆಸಿದ್ದು, ಇದನ್ನು ತಿಳಿಯದಂತೆ ಮಾತನಾಡುತ್ತಿದ್ದಾರೆ’ಎಂದು ತಿರುಗೇಟು ನೀಡಿದರು.

ಸಚಿವ ಸ್ಥಾನದಿಂದ ಹೊರಹಾಕಬೇಕು
ಬೆಂಗಳೂರು
: “ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮಕ್ಕೆ ತಮ್ಮನ್ನು ಕರೆಯಬೇಡಿ, ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ’ ಎಂದು ಹೇಳಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.  ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, “ಅಂತಹವರ ಬಗ್ಗೆ ಮಾತನಾಡುವುದೇ ಅಪ್ರಬುದ್ಧ’ ಎಂದು ಹೇಳಿದರು. 

“ಅನಂತ ಕುಮಾರ್‌ ಹೆಗಡೆ ಅನೇಕ ಬಾರಿ ತಾವು ಇಸ್ಲಾಂ ಧರ್ಮವನ್ನು ವಿರೋಧಿಸಿ  ಕೊಂಡೇ ಬಂದಿರುವುದಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಪಡೆಯುವ ವೇಳೆ ಎಲ್ಲಾ ಜಾತಿ, ಧರ್ಮೀಯರ ಬಗ್ಗೆ ವಿಶ್ವಾಸ ಇರಿಸಿಕೊಳ್ಳುವ ಬಗ್ಗೆ ಪ್ರಮಾಣ ಸ್ವೀಕರಿಸಿ ನಂತರ ಹೀಗೆ ಮಾತನಾಡೋರನ್ನು ಸಚಿವ ಸ್ಥಾನ ದಿಂದ ಹೊರಹಾಕಬೇಕು’ ಎಂದರು. “ಮುಸ್ಲಿಮರನ್ನು ಬಿಡುವುದು ಈ ದೇಶದಲ್ಲಿ ಅಷ್ಟು ಸುಲಭವಲ್ಲ. 35 ಕೋಟಿ ಮುಸ್ಲಿಮರನ್ನು ಓಡಿಸೋಕೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

Advertisement

ಹೆಸರು ಹಾಕಿದ್ರೆ ಟಿಪ್ಪು ಇತಿಹಾಸ
ಜಾಲಾಡುತ್ತೇನೆ: ಅನಂತಕುಮಾರ್‌
ಶಿರಸಿ
: “ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದೇ ಆದರೆ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟಿಪ್ಪುವಿನ ಇತಿಹಾಸ ಜಾಲಾಡಿ ಬರುತ್ತೇನೆ. ತಾಕತ್ತಿದ್ದರೆ ಹೆಸರು ಹಾಕಲಿ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಸವಾಲು ಹಾಕಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ನಾಡು ಕಂಡ ಮತಾಂಧ ವ್ಯಕ್ತಿ ಟಿಪ್ಪು ಸುಲ್ತಾನ. ನ.10ರಂದು ಅವನ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಜಯಂತಿ ಆಚರಣೆಯೇ ದುರ್ದೈವ. ಕಳೆದ ಸಲವೇ ಬಿಜೆಪಿ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಾನೇ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವುದು ಬೇಡ ಎಂದು ಪತ್ರ ಬರೆದಿದ್ದೆ. ನಾನೇ ಹೇಳಿದಾಗ ಹೆಸರು ಹಾಕಬೇಕೆಂಬ ಶಿಷ್ಟಾಚಾರ ಇಲ್ಲ. ಆದರೂ ಶಿಷ್ಟಾಚಾರದ ಹೆಸರಿನಲ್ಲಿ ಹಠಮಾರಿತನ ತೋರಿದರೆ ಸಿಎಂ ಇರುವ ವೇದಿಕೆಗೇ ತೆರಳಿ ಟಿಪ್ಪುವಿನ ಇತಿಹಾಸ ಬಿಚ್ಚಿಟ್ಟು ಬರುತ್ತೇನೆ’ ಎಂದರು.

ಯಾರೇ ಅಧಿಕಾರಕ್ಕೆ ಬಂದರೂ ಆಚರಣೆ ತಡೆಯಲು ಬಿಡಲ್ಲ’
ಧಾರವಾಡ:
“ಯಾರೇ ಅಧಿಕಾರಕ್ಕೆ ಬಂದರೂ ಟಿಪ್ಪು ಜಯಂತಿ ಆಚರಿಸುವುದನ್ನು ತಡೆಯಲು ಅಥವಾ ಸಂಪೂರ್ಣ ನಿಲ್ಲಿಸಲು ಸಾಧ್ಯವೇ ಇಲ್ಲ’ ಎಂದು ಸಚಿವ ವಿನಯ್‌ ಕುಲಕರ್ಣಿ ಸಂಸದ ಪ್ರಹ್ಲಾದ ಜೋಶಿ ಅವರಿಗೆ ತಿರುಗೇಟು ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂಸದ ಪ್ರಹ್ಲಾದ ಜೋಶಿ ಮತ್ತು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ
ಅವರು ಟಿಪ್ಪು ಜಯಂತಿ ಅಚರಣೆ ಕುರಿತು ನೀಡಿರುವ ಹೇಳಿಕೆ ಉತ್ತಮ ಬೆಳವಣಿಗೆಯಲ್ಲ. ತಮ್ಮ ಸರ್ಕಾರ ಬಂದರೆ ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ ಎಂದು ಹೇಳಿದರೆ, ಇನ್ನೊಬ್ಬರ ಸರ್ಕಾರ ಬಂದಾಗ ನಿಮ್ಮ ದೇವರು ಮತ್ತು ಮಹಾಪುರುಷರ ಜಯಂತಿ ನಿಲ್ಲಿಸುತ್ತಾರೆ. ಆಗೇನು ಮಾಡುತ್ತೀರಿ?’ ಎಂದು ಪ್ರಶ್ನಿಸಿದರು. “ಭಾರತ ಸರ್ವ ಧರ್ಮಗಳ ನಾಡು. ಬರೀ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ಹಿಂದೂ ಧರ್ಮವನ್ನು ಅವರು ಮಾತ್ರ ಠಸ್ಸೆ ಹೊಡೆದು ಗುತ್ತಿಗೆ ತೆಗೆದುಕೊಂಡಿಲ್ಲ. ಹಿಂದೂಸ್ತಾನದಲ್ಲಿ ಹುಟ್ಟಿದ ಎಲ್ಲರೂ ಒಂದರ್ಥದಲ್ಲಿ ಹಿಂದೂಗಳೇ ಆಗಿದ್ದಾರೆ. ಹೀಗಾಗಿ ಇಲ್ಲಿ ಎಲ್ಲರೂ ಸಮಾನತೆ ಯಿಂದ ಬದುಕಬೇಕು ಎಂದು ಹೇಳಿದರು.

ಆಹ್ವಾನ ಪತ್ರಿಕೆಯಲ್ಲಿ ಹೆಸರು ಬೇಕಿಲ್ಲ
ಬೆಂಗಳೂರು
: “ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಹೆಸರು ಹಾಕಬಾರದೆಂದು ಬಿಜೆಪಿ ನಾಯಕರು ಹೇಳುತ್ತಿರುವಾಗ ಸರ್ಕಾರ ಅವರ ಹೆಸರು ಹಾಕುವ ಅಗತ್ಯವಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. “ಅವರನ್ನು ಆಹ್ವಾನಿಸಿದರೂ, ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದ ಮೇಲೆ ಶಿಷ್ಟಾಚಾರ ಉಲ್ಲಂಘನೆಯ ಪ್ರಶ್ನೆ ಬರುವುದಿಲ್ಲ’ ಎಂದು ಹೇಳಿದ್ದಾರೆ.

ಯುವ ಮೋರ್ಚಾದಿಂದ ಹೋರಾಟ: ಸಂಸದ
ಮೈಸೂರು:
“ಕೆಟ್ಟ ಕೆಲಸಗಳಿಂದಲೇ ಇತಿಹಾಸದಲ್ಲಿ ದಾಖಲಾಗಿರುವ ಟಿಪ್ಪು ಜಯಂತಿಗೆ ಬಿಜೆಪಿಯ ವಿರೋಧವಿದೆ. ಈ ಬಾರಿ ಟಿಪ್ಪು ಜಯಂತಿ ಆಚರಣೆ ನಿಲ್ಲಿಸಲು ಬಿಜೆಪಿ ಯುವ ಮೋರ್ಚಾದಿಂದ ಹೋರಾಟ ನಡೆಸುತ್ತೇವೆ’ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಟಿಪ್ಪು ಆಚರಣೆ ಸಂಬಂಧ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಲುವಿಗೆ ನನ್ನ ಸಹಮತ ಇದೆ. ಎರಡು ವರ್ಷಗಳಿಂದ ನಾನು, ಕೊಡಗಿನ ಶಾಸಕರಾದ ಕೆ.ಜಿ. ಬೋಪಯ್ಯ,ಅಪ್ಪಚ್ಚು ರಂಜನ್‌ ಕೊಡಗು ಜಿಲ್ಲಾಡಳಿತಕ್ಕೆ ಇದೆ ರೀತಿಯ ಪತ್ರ ಬರೆದಿದ್ದೇವೆ. ಆದರೆ, ಶಿಷ್ಠಾಚಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದವರು ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಹಾಕುತ್ತಿದ್ದಾರೆ’ ಎಂದರು. ಟಿಪ್ಪು ಜಯಂತಿ ಆಚರಣೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಾಮ್‌ ಕೆಲಸ ಮಾಡುತ್ತಿದ್ದಾರೆ. ಹರಾಮ್‌ ಎಂದರೆ ಮುಸ್ಲಿಂ ಧರ್ಮದಲ್ಲಿ ವ್ಯಕ್ತಿ ಆರಾಧನೆಗೆ ವಿರುದಟಛಿ ಇರುವುದು. ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಸಿದ್ದರಾಮಯ್ಯ, ಮುಸ್ಲಿಂ ಧರ್ಮಕ್ಕೆ ವಿರುದಟಛಿವಾದ ಕೆಲಸ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಈ ಹರಾಮ್‌ ಕೆಲಸವನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಈ ವರ್ಷದ ಟಿಪ್ಪುಜಯಂತಿಯೇ ಕೊನೇ ಜಯಂತಿ ಆಗಲಿದೆ. ಸಿದ್ದರಾಮಯ್ಯ ಸರ್ಕಾರದ ಜೊತೆ ಟಿಪ್ಪು ಜಯಂತಿಯೂ ಈ ರಾಜ್ಯದಿಂದ ಹೊರಹೋಗಲಿದೆ ಎಂದು ವಾಗ್ಧಾಳಿ ನಡೆಸಿದರು.

ಆಹ್ವಾನ ಪತ್ರಿಕೆಯಲ್ಲಿ ಹೆಸರು ಬೇಡ: ಈಗ ಕಟೀಲು, ಶೋಭಾ ಸರದಿ ಬೆಂಗಳೂರು/ಉಡುಪಿ/ಮಂಗಳೂರು: ಟಿಪ್ಪು ಜಯಂತಿ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ವಿವಾದ ತೀವ್ರಸ್ವರೂಪ ಪಡೆಯುತ್ತಿದೆ. ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಸಂಸದರಾದ ನಳೀನ್‌ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಕೂಡ ಅದೇ ದಾರಿ ತುಳಿದಿದ್ದಾರೆ. “ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ’ ಶೋಭಾ ಕರಂದ್ಲಾಜೆ ಅವರು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ, ನಳೀನ್‌ಕುಮಾರ್‌ ಕಟೀಲು ಅವರು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

“ಟಿಪ್ಪು ಸುಲ್ತಾನ್‌ ಕನ್ನಡ ವಿರೋಧಿ ಮತ್ತು ಹಿಂದೂ ವಿರೋಧಿ. ಹೀಗಾಗಿ ಆತನ ಜನ್ಮದಿನದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಬಳಸದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ಮಧ್ಯೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಸೂಚಿಸಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ಟ್ವೀಟ್‌ ಮೂಲಕವೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗೆ ತಾವು ಬರೆದಿದ್ದ ಪತ್ರವನ್ನು ಟ್ವಿಟರ್‌ನಲ್ಲಿ ಹಾಕಿರುವ ಅವರು, ಒಬ್ಬ ಮತಾಂಧ, ಕ್ರೂರ ಕೊಲೆಗಾರ, ಸಾಮೂಹಿಕ ಅತ್ಯಾಚಾರ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ವೈಭವೀಕರಿಸುವ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಬೇಡಿ ಎಂದು ಹೇಳಿರುವ ಅವರು, ತಮ್ಮ ಟ್ವೀಟ್‌ಅನ್ನು ರಾಜ್ಯ ಸರ್ಕಾರದ ಟ್ವಿಟರ್‌ಗೆ ಟ್ಯಾಗ್‌ ಮಾಡಿದ್ದಾರೆ. ಇನ್ನೊಂದೆಡೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಸೋಮವಾರ (ಅ. 23) ಶಿವಾನಂದ ವೃತ್ತದ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ
ಸಮಾವೇಶ ಏರ್ಪಡಿಸಲಾಗಿದೆ.

ಭಾರತ ಕೋಮು ಸೌಹಾರ್ದತೆಗೆ ಹೆಸರಾಗಿರುವ ಜಾತ್ಯತೀತ ರಾಷ್ಟ್ರ.ಟಿಪ್ಪು ಸುಲ್ತಾನ್‌ ಜಯಂತಿ ಸಂವಿಧಾನಬದ್ಧವಾಗಿಯೇ ಆಚರಿಸಲು ತೀರ್ಮಾನಿಸಲಾಗಿದ್ದು, ಇದನ್ನು ವಿರೋಧಿಸುವ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ
– ಕೆ.ಎಚ್‌.ಮುನಿಯಪ್ಪ, ಸಂಸದ

ನ.10ರಂದು ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಒಬ್ಬ ಕನ್ನಡ ದ್ರೋಹಿಯ ಜಯಂತಿಯನ್ನು ಸರ್ಕಾರ ಆಚರಣೆ ಮಾಡುತ್ತಿರುವುದು ದುರ್ದೈವದ ಸಂಗತಿ. ಒಂದು ವೇಳೆ ಸರ್ಕಾರ ಟಿಪ್ಪು ಜಯಂತಿ ಆಚರಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು.
– ಪ್ರಮೋದ ಮುತಾಲಿಕ್‌, ಶ್ರೀರಾಮ ಸೇನೆ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next