ಬೆಂಗಳೂರು: ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಮಾಹಿತಿ ಕೈ ಬಿಡುವ ಬಗ್ಗೆ ಒಬ್ಬ ಅಜ್ಞಾನಿ ಮಾತ್ರ ಮಾತನಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಇತಿಹಾಸ ಗೊತ್ತಿಲ್ಲದವರು , ತಿಳುವಳಿಕೆ ಕಡಿಮೆ ಇರುವವರು ಈ ರೀತಿ ಮಾತನಾಡುತ್ತಾರೆ ಎಂದು ಹೇಳಿದರು.
ಟಿಪ್ಪು ಕ್ಷಿಪಣಿ ತಂತ್ರಜ್ಞಾನಿ ಎಂದು ಅಬ್ದುಲ್ ಕಲಾಂ ಹೇಳಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಬಗ್ಗೆ ಹಾಡಿ ಹೊಗಳಿದ್ದರು. ಯಡಿಯೂರಪ್ಪ ಪುಸ್ತಕಗಳನ್ನು ಓದಿದ್ದಾರಾ? ಅವರೇನು ಇತಿಹಾಸ ತಜ್ಞರಾ?ಬಿಜೆಪಿಯವರಿಗೆ ಬೇರೆ ಯಾವ ವಿಚಾರಗಳು ಇಲ್ಲ. ಹೀಗಾಗಿ, ಅನಗತ್ಯವಾಗಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ಟಿಪ್ಪು ಮಾಹಿತಿ ಕೈ ಬಿಡುತ್ತಾರೆ ಅಂದ್ರೆ ನಾವು ಅಧಿಕಾರಕ್ಕೆ ಬಂದಾಗ ಸಾವರ್ಕರ್ ಮಾಹಿತಿ ಬಿಡಬೇಕಾ? ಈ ರೀತಿಯ ರಾಜಕೀಯ ಮಾಡಬಾರದು. ಶೃಂಗೇರಿ ದೇವಸ್ಥಾನ ರಕ್ಷಣೆ ಟಿಪ್ಪು ಮಾಡಿದ್ದರು. ಟಿಪ್ಪು ಸುಲ್ತಾನ್ ಮೇಲೆ ಕೆಲವೊಂದು ಟೀಕೆಗಳು ಇರಬಹುದು. ಬ್ರಿಟೀಷರ ಮೇಲೆ ಟಿಪ್ಪು ಸುಲ್ತಾನ್ ಯುದ್ಧ ಮಾಡಿದ್ದಾರೆ. ಇತಿಹಾಸ ತಜ್ಞರ ಬಳಿ ಯಡಿಯೂರಪ್ಪ ಚರ್ಚೆ ಮಾಡಲಿ, ಅದನ್ನು ಬಿಟ್ಟು ಪಠ್ಯ ಪುಸ್ತಕದಲ್ಲಿ ಅವರ ವಿಚಾರ ಕೈ ಬಿಡುತ್ತೇವೆ ಎಂದರೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಹೀಗಾಗಿ, ಜನರ ಗಮನ ಬೇರೆಡೆ ಸೆಳೆಲು ಇಂತಹ ವಿಚಾರ ಪ್ರಸ್ತಾಪ ಮಾಡಿ ವಿವಾದದ ಸ್ವರೂಪ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಸಾಧನೆಗಳನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.