Advertisement

ಆಕ್ಸಿಜನ್‌ ಬೆಡ್‌ಗೆ ಟೈಮರ್‌ ಅಳವಡಿಸಿ

12:26 PM May 12, 2021 | Team Udayavani |

ಹಾವೇರಿ: ರೆಮ್‌ಡೆಸಿವಿಯರ್‌ ಹಾಗೂ ಆಮ್ಲಜನಕ ಬಳಕೆ ಕುರಿತು ಆಡಿಟ್‌ ಮಾಡಿ ಪ್ರತಿ ಆಕ್ಸಿಜನ್‌ ಬೆಡ್‌ಗೆ ಟೈಮರ್‌ ಅಳವಡಿಸಬೇಕೆಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

Advertisement

ಬೆಂಗಳೂರು ವಿಕಾಸಸೌಧದಿಂದ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫ  ರೆನ್ಸ್‌ ಮೂಲಕ ಕೋವಿಡ್‌ ಸ್ಥಿತಿಗತಿ ಕುರಿತ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಆಮ್ಲಜನಕ ಅತ್ಯಂತ ಅಮೂಲ್ಯವಾಗಿದ್ದು, ಬಂಗಾರ ಇದ್ದಂತೆ. ಆದರೆ, ಜಿಲ್ಲೆಯಲ್ಲಿ ಹೆಚ್ಚು ಬಳಸುತ್ತಿರುವುದು ಕಂಡು ಬರುತ್ತಿದೆ. ವೈದ್ಯರ ಸಲಹೆಯಂತೆ ಅಗತ್ಯ ಸಮಯದವರೆಗೆ ರೋಗಿಗಳಿಗೆ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ಪ್ರತಿ ಆಕ್ಸಿಜನ್‌ ಬೆಡ್‌ಗಳಿಗೆ ಟೈಮರ್‌ ಅಳವಡಿಸಬೇಕೆಂದು ಸೂಚನೆ ನೀಡಿದರು.

ಒಬ್ಬ ಕೋವಿಡ್‌ ರೋಗಿಗೆ ಎಷ್ಟು ತಾಸು ಆಕ್ಸಿಜನ್‌ ಬೇಕು ಎಂದು ವೈದ್ಯರು ನಿರ್ಧರಿಸಿ ಸಮಯ ನಿಗ ದಿ ಮಾಡಿ ಟೈಮರ್‌ ಅಳವಡಿಸಬೇಕು. ನಿಗದಿತ ಸಮಯ ಪೂರೈಸಿ ಸ್ವಯಂ ಚಾಲಿತವಾಗಿ ಅಲಾರಾಮ್‌ ಆಗಬೇಕು. ನಂತರ ವೈದ್ಯರು ತಪಾಸಣೆ ನಡೆಸಿ ಅವಶ್ಯಕತೆ ಇದ್ದರೆ ಮಾತ್ರ ಆಕ್ಸಿಜನ್‌ ಪೂರೈಕೆ ಮುಂದುವರಿಸಬಹುದು. ಇದರಿಂದ ಅಗತ್ಯ ಇಲ್ಲದಿದ್ದರೂ ಆಕ್ಸಿಜನ್‌ ನೀಡುವುದನ್ನು ತಪ್ಪಿಸಬಹುದೆಂಬ ಪ್ರಯೋಗ ರಾಜ್ಯದಲ್ಲೇ ಮೊದಲನೆಯದಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಬೇಕೆಂದು ಸಲಹೆ ನೀಡಿದರು.

ರಾಣಿಬೆನ್ನೂರಿನಲ್ಲಿ ರೆಮ್‌ಡೆಸಿವಿಯರ್‌ ಹಾಗೂ ಆಕ್ಸಿಜನ್‌ ಸಿಲಿಂಡರ್‌ ಖಾಸಗಿಯಾಗಿ ಹೆಚ್ಚು ಪೂರೈಕೆಯಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ. ಈ ಕುರಿತಂತೆ ಎರಡನೇ ಅಲೆಯ ಮೊದಲ ದಿನದಿಂದ ಇಂದಿನವರೆಗೆ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳ ವಿವರ, ರೆಮ್‌ಡೆಸಿವಿಯರ್‌, ಆಮ್ಲಜನಕ ಪೂರೈಕೆ ವಿವರ ಹಾಗೂ ಚಿಕಿತ್ಸಾ ಮಾಹಿತಿ ಕುರಿತು ಪೂರ್ಣವಾಗಿ ಆಡಿಟ್‌ ಮಾಡಿ ವರದಿ ಸಲ್ಲಿಸಲು ಸೂಚನೆ ನೀಡಿದರು.

ಶಿಗ್ಗಾವಿ, ಬ್ಯಾಡಗಿ ಹಾಗೂ ಹಾನಗಲ್ಲ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಮಾಹಿತಿ ಪಡೆದ ಸಚಿವರು, ಹಾನಗಲ್ಲ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಲು ಸೂಚನೆ ನೀಡಿದರು. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಏಳರಿಂದ ಎಂಟು ದಿವಸ ಪೂರೈಸಿದವರ ತಪಾಸಣೆ ನಡೆಸಿ ಗುಣಮುಖರಾದವರಿಗೆ ಹೋಂ ಐಸೋಲೇಷನ್‌ಗೆ ಕಳುಹಿಸಬೇಕೆಂದು ಸೂಚನೆ ನೀಡಿದರು. ತಾಲೂಕು ತಹಶೀಲ್ದಾರ್‌ಗಳಿಗೆ ಮೈಚಳಿ ಬಿಟ್ಟು ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಕ್ಕಾ ಮಾಹಿತಿ ಪಡೆದುಕೊಳ್ಳಿ. ರೆಮ್‌ಡೆಸಿವಿಯರ್‌ ಆಕ್ಸಿಜನ್‌ ಕೊರತೆಯಾಗದಂತೆ ಎಚ್ಚರ ವಹಿಸಿ, ಕಾಲಕಾಲಕ್ಕೆ ಬೇಡಿಕೆ ಸಲ್ಲಿಸಿ, ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

Advertisement

ತಕ್ಷಣದಿಂದಲೇ ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಗೆ 1186 ವೈಯಲ್‌ ರೆಮ್‌ಡೆಸಿವಿಯರ್‌ ಕಳುಹಿಸಿಕೊಡುವಂತೆ ಸೂಚನೆ ನೀಡಿದ ಸಚಿವರು, ಸಿಎಸ್‌ ಆರ್‌ ಫಂಡ್‌ನ‌ಲ್ಲಿ ಜಿಲ್ಲೆಗೆ 100 ಆಕ್ಸಿಜನ್‌ ಕಾನ್ಸಂಟ್ರೇಟರ್‌ ಪೂರೈಸಲಾಗುವುದು. 294 ಜಂಬೋ ಸಿಲಿಂಡರ್‌ ಪೂರೈಸಲಾಗುವುದು. ಜಿಲ್ಲೆಯಲ್ಲಿ ಆಕ್ಸಿಜನ್‌ ಹಾಗೂ ರೆಮ್‌ ಡೆಸಿವಿಯರ್‌ ಸೇರಿ ಕೋವಿಡ್‌ ಚಿಕಿತ್ಸೆಗೆ ಯಾವುದೇ ಕೊರತೆ ಕಂಡು ಬಂದರೆ ತಕ್ಷಣ ಸಂರ್ಪಕಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಮಹಮ್ಮದ ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಕೆ.ಜಿ.ದೇವರಾಜು, ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಪ್ರಭಾರ ಡಿಎಚ್‌ಒ ಡಾ|ಜಯಾನಂದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next