Advertisement

ಸರ್ಕಾರಕ್ಕೆ ಕಾಲಹರಣ, ವಿಪಕ್ಷಕ್ಕೆ ಸಂಕಟ

12:12 AM Jul 20, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಆಡಳಿತ ಪಕ್ಷದ ಸದಸ್ಯರು ಸಾಧ್ಯವಾದಷ್ಟು ಎಳೆಯುವ ಪ್ರಯತ್ನ ಮಾಡಿದರೆ, ಪ್ರತಿಪಕ್ಷ ಬಿಜೆಪಿಯವರು ರಾಜ್ಯಪಾಲರು ನೀಡಿದ ಆದೇಶದ ಸಮಯಕ್ಕಾಗಿ ಕಾಲ ಕಳೆಯುವ ಸಂಕಟ ಎದುರಿಸಿದ್ದು ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ಕಂಡು ಬಂದ ದೃಶ್ಯ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಳಗ್ಗೆ 11.30ಕ್ಕೆ ವಿಶ್ವಾಸಮತ ಯಾಚನೆಯ ಪ್ರಸ್ತಾಪ ಮಾಡಿ ತಮ್ಮ ಭಾಷಣವನ್ನು ಮುಂದುವರಿಸಿದರು. ಆಗ ಪ್ರತಿಪಕ್ಷದಲ್ಲಿ ಕುಳಿತಿದ್ದ ಬಿಜೆಪಿ ಸದಸ್ಯರು ಅವರು ಮಾಡುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸುವುದಕ್ಕಿಂತಲೂ ಮಧ್ಯಾಹ್ನ 1.30 ಗಂಟೆ ಯಾವಾಗ ಆಗುತ್ತದೆ ಎನ್ನುವುದರ ಕಡೆಯೇ ಹೆಚ್ಚು ಗಮನ ಹರಿಸಿದಂತಿತ್ತು.

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪ್ರಸ್ತಾವನೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ “ಆಪರೇಷನ್‌ ಕಮಲ’ದ ರುವಾರಿಗಳಾರು?, ಅವರ ನಡವಳಿಕೆ ಹೇಗಿತ್ತು ಎಂದು ಬಿಜೆಪಿ ಶಾಸಕರ ಹೆಸರುಗಳನ್ನು ಹೇಳಿ ಆರೋಪ ಮಾಡಿದರೂ, ಬಿಜೆಪಿ ಸದಸ್ಯರಿಗೆ ತುಟಿ ಪಿಟಕ್‌ ಎನ್ನದೇ ಎಲ್ಲವನ್ನೂ ಮೌನವಾಗಿ ಆಲಿಸುವ ಅನಿವಾರ್ಯತೆ ಶುಕ್ರವಾರವೂ ಮುಂದುವರೆದಂತಿತ್ತು.

ಕೋಲಾರ ಶಾಸಕ ಶ್ರೀನಿವಾಸಗೌಡ ಅವರು, ತಮಗೆ ಬಿಜೆಪಿ ಶಾಸಕರು ಹಣದ ಆಮಿಷ ಒಡ್ಡಿ ತಮ್ಮ ಮನೆಗೆ ಐದು ಕೋಟಿ ರೂ. ತಂದು ಇಟ್ಟಿದ್ದರು ಎಂದು ಬಿಜೆಪಿಯ ಶಾಸಕರಾದ ಡಾ.ಅಶ್ವಥ್‌ ನಾರಾಯಣ, ಎಸ್‌.ಆರ್‌.ವಿಶ್ವನಾಥ್‌ ಹಾಗೂ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ ವಿರುದ್ಧ ನೇರ ಆರೋಪ ಮಾಡಿದರೂ, ಬಿಜೆಪಿಯವರು ಗಡಿಯಾರದ ಕಡೆಗೆ ನೋಡುತ್ತ ಯಾವಾಗ ಒಂದೂವರೆಯಾಗುತ್ತದೆ ಎಂದು ಕಾಯುತ್ತಿದ್ದರೆ ವಿನ: ಅವರ ಗಂಭೀರ ಆರೋಪಕ್ಕೆ ಯಾರೂ ತಿರುಗೇಟು ನೀಡುವ ಪ್ರಯತ್ನ ಮಾಡಲಿಲ್ಲ.

ಹೇಗೂ ಮಧ್ಯಾಹ್ನ 1.30ಕ್ಕೆ ಮುಗಿಯಲೇಬೇಕಲ್ಲ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ಭಾಷಣದ ಮಧ್ಯೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೆಗೌಡ ಅವರು ರಾಜ್ಯಪಾಲರ ಪಾತ್ರದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ವಿಧಾನಸಭೆಯ ಮೊಗಸಾಲೆಗೆ ತೆರಳಿ ಸಮಯ ಕಳೆಯುವ ಪ್ರಯತ್ನ ನಡೆಸಿದರು.

Advertisement

ಆದರೆ, ಮಧ್ಯಾಹ್ನ ಒಂದೂವರೆಯಾದರೂ ಸ್ಪೀಕರ್‌ ಮತ ವಿಭಜನೆಗೆ ಮುಂದಾಗದಿದ್ದಾಗ ಬಿಜೆಪಿ ಸದಸ್ಯರು ರಾಜ್ಯಪಾಲರ ಪತ್ರದ ಬಗ್ಗೆ ಮುಖ್ಯಮಂತ್ರಿ ತಮ್ಮ ನಿಲುವು ಪ್ರಕಟಿಸುವಂತೆ ಒತ್ತಾಯ ಮಾಡಿದರು. ಆದರೆ, ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸದಸ್ಯರ ಚರ್ಚೆಗೆ ಅವಕಾಶ ನೀಡುವುದಾಗಿ ಮಧ್ಯಾಹ್ನ ಭೋಜನ ವಿರಾಮ ಘೋಷಣೆ ಮಾಡಿದರು. ಆಗ ಬಿಜೆಪಿ ನಾಯಕರಿಗೆ ಸರ್ಕಾರದ ಲೆಕ್ಕಾಚಾರವೇ ಅರ್ಥವಾಗದಂತಾಗಿ ಅವರ ನಿರಾಸೆಗೆ ಕಾರಣವಾಯಿತು.

ರಾಜ್ಯಪಾಲರ ಪತ್ರಕ್ಕೇನೆ ಗೌರವ ನೀಡದಿದ್ದರೆ, ರಾಜ್ಯಪಾಲರ ಮುಂದಿನ ನಡೆ ಏನು ಎನ್ನುವ ಬಗ್ಗೆ ಬಿಜೆಪಿ ನಾಯಕರಲ್ಲಿಯೇ ಗೊಂದಲ ರೂಪದಲ್ಲಿ ಅನೌಪಚಾರಿಕ ಚರ್ಚೆ ನಡೆಯಿತು. ಅದರ ಮಧ್ಯೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು, ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೊ, ಇಲ್ಲವೋ ಎಂಬ ಮಾಹಿತಿಯನ್ನು ಬಿಜೆಪಿ ನಾಯಕರು ಆಪ್ತರ ಮೂಲಕ ಕ್ಷಣಕ್ಷಣಕ್ಕೂ ಪಡೆಯುವ ಪ್ರಯತ್ನ ನಡೆಸಿದರು.

ಭರವಸೆ ಮೂಡಿಸಿದ ರಾಜ್ಯಪಾಲರ ಮತ್ತೂಂದು ಪತ್ರ: ರಾಜ್ಯಪಾಲರು ಮುಖ್ಯಮಂತ್ರಿಗೆ ನೀಡಿದ ಆದೇಶ ಪಾಲನೆಯಾಗದಿರುವ ಬಗ್ಗೆ ಬೇಸರಗೊಂಡಿದ್ದ ಬಿಜೆಪಿ ಶಾಸಕರಿಗೆ ಮಧ್ಯಾಹ್ನ ಭೋಜನ ವಿರಾಮದ ನಂತರ ಸದನ ಆರಂಭವಾಗುವ ಮುನ್ನವೇ ರಾಜ್ಯಪಾಲರು ದಿನದ ಅಂತ್ಯದೊಳಗಾಗಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುವಂತೆ ಮುಖ್ಯಮಂತ್ರಿಗೆ ಮತ್ತೂಂದು ಪತ್ರ ಬರೆದಿದ್ದಾರೆ ಎನ್ನುವ ಸುದ್ದಿ ಬಂತು.

ಬಿಜೆಪಿ ನಾಯಕರು ಖುಷಿಯಾಗಿ, ಶುಕ್ರವಾರ ರಾತ್ರಿ 12 ಗಂಟೆಯೊಳಗೆ ಈ ಸರ್ಕಾರ ಅಂತ್ಯವಾಗುತ್ತದೆ ಎಂಬ ವಿಶ್ವಾಸದಲ್ಲಿ ಮತ್ತೆ ಸದನದ ಚರ್ಚೆಯಲ್ಲಿ ಪಾಲ್ಗೊಂಡರು. ಆಡಳಿತ ಪಕ್ಷದ ನಾಯಕರು ಹಾಗೂ ಶಾಸಕರು ಬಿಜೆಪಿ ಶಾಸಕರನ್ನು ಕೆರಳಿಸಲು ಅನೇಕ ರೀತಿಯ ಆರೋಪ, ನೇರ ವಾಗ್ಧಾಳಿ ಮಾಡುವ ಯತ್ನ ಮಾಡಿದರೂ, ಯಾರೂ ಪ್ರತಿಯಾಗಿ ವಾಗ್ಧಾಳಿ ಮಾಡದೆ ತಾಳ್ಮೆಯಿಂದ ಸಮಯ ಕಳೆಯುವುದರ ಕಡೆಯೇ ಹೆಚ್ಚಿನ ಗಮನ ಹರಿಸಿದರು.

ಸಂಜೆ ಆರು ಗಂಟೆಯಾದಾಗ ಕಲಾಪ ಮುಂದುವರೆಸಬೇಕೆ ಅಥವಾ ಸದನವನ್ನು ಸೋಮವಾರಕ್ಕೆ ಮುಂದೂಡಬೇಕೆ ಎನ್ನುವ ಬಗ್ಗೆಯೇ ನಲವತ್ತು ನಿಮಿಷ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ನಡುವೆ ಚರ್ಚೆ ನಡೆಯಿತು. ಹೇಗಾದರೂ ಮಾಡಿ ರಾಜ್ಯಪಾಲರ ಸೂಚನೆಯಂತೆ ಶುಕ್ರವಾರವೇ ವಿಶ್ವಾಸಮತಯಾಚನೆ ಆಗುತ್ತದೆ ಎಂದು ಕಾಲಹರಣ ಮಾಡಿದ್ದ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾದರೂ, ಸೌಮ್ಯವಾಗಿಯೇ ಸ್ಪೀಕರ್‌ಗೆ ಹೇಗಾದರೂ ಮಾಡಿ ಶುಕ್ರವಾರವೇ ಮುಕ್ತಾಯಗೊಳಿಸಿ ಎನ್ನುವ ಮನವಿ ಮಾಡುವ ಪ್ರಯತ್ನ ಮಾಡಿದರು.

ಅದನ್ನು ಬಿಟ್ಟರೆ, ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿ ಗದ್ದಲ ಮಾಡುವ ಪ್ರಯತ್ನಕ್ಕೆ ಕೈ ಹಾಕದ ಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದರು. ಸದನದ ಒಳಗೆ ಕಾಲಹರಣ ನಡೆಯುತ್ತಿರುವ ಬಗ್ಗೆ ಬೇಸರಗೊಂಡ ಬಿಜೆಪಿ ಶಾಸಕರು, ರಾಜ್ಯಪಾಲರು ಏನಾದರೂ ಮಾಡುತ್ತಾರೆ ಎನ್ನುವ ನಂಬಿಕೆಯಲ್ಲಿಯೇ ಹೇಗಾದರೂ ಮಾಡಿ ಶುಕ್ರವಾರವೇ ಮುಕ್ತಾಯಗೊಳಿಸಲು ಸ್ಪೀಕರ್‌ಗೆ ಮನವಿ ಮಾಡಿಕೊಂಡರೂ, ಸ್ಪೀಕರ್‌ ಸೋಮವಾರಕ್ಕೆ ಸದನ ಮುಂದೂಡಿದ್ದು, ಬಿಜೆಪಿ ಸದಸ್ಯರ ಬೇಸರಕ್ಕೆ ಕಾರಣವಾಯಿತು.

ಕಾಲಹರಣವೇ ಕಾಯಕ: ಇದಕ್ಕೆ ತದ್ವಿರುದ್ಧವಾಗಿ ಆಡಳಿತ ಪಕ್ಷದ ಶಾಸಕರು ಶುಕ್ರವಾರ ಬೆಳಿಗ್ಗೆಯಿಂದಲೇ ಹೇಗಾದರೂ ಮಾಡಿ ಇನ್ನಷ್ಟು ಕಾಲಹರಣ ಮಾಡಲು ಸಾಧ್ಯವಾದಷ್ಟು ಕಾರ್ಯತಂತ್ರ ರೂಪಿಸಿಕೊಂಡೇ ಬಂದಂತಿತ್ತು. ಬಿಜೆಪಿಯವರು ಹಲವು ಬಾರಿ ಶುಕ್ರವಾರವೇ ವಿಶ್ವಾಸಮತಯಾಚನೆ ಅಂತ್ಯಗೊಳಿಸುವಂತೆ ಒತ್ತಡ ಹೇರಿದರೂ, ತಮಗೆ ಚರ್ಚೆಗೆ ಹೆಚ್ಚಿನ ಅವಕಾಶ ನೀಡಬೇಕೆಂಬ ಬೇಡಿಕೆ ಇಡುವ ಮೂಲಕ ಸಾಧ್ಯವಾದಷ್ಟು ಕಾಲಹರಣ ಮಾಡಲು ಪ್ರಯತ್ನ ನಡೆಸಿದ್ದು ಕಂಡು ಬಂತು.

ಬಿಜೆಪಿಯವರು ಯಾರಾದರೂ ಪ್ರತಿಕ್ರಿಯೆಗೆ ಮುಂದಾದರೆ, ಎಲ್ಲರೂ ಏಕಕಾಲಕ್ಕೆ ಮುಗಿ ಬೀಳುವ ಕಾರ್ಯತಂತ್ರವನ್ನು ಕಲಾಪದ ಆರಂಭದಿಂದ ಮುಗಿಯುವವರೆಗೂ ಆಡಳಿತ ಪಕ್ಷಗಳ ಶಾಸಕರು ಮುಂದುವರಿಸಿದ್ದರೂ, ಬಿಜೆಪಿ ನಾಯಕರ ಸೂಚನೆ ಪಕ್ಷದ ಶಾಸಕರು ಕೈ ಕಟ್ಟಿ ಕೂಡುವಂತೆ ಮಾಡಿತು. ಇದು ಕೆಲವು ಶಾಸಕರಿಗೆ ನಾಯಕರ ವಿರುದ್ಧ ಪರೋಕ್ಷ ಆಕ್ರೋಶಕ್ಕೂ ಕಾರಣವಾದಂತಿತ್ತು. ಆಡಳಿತ ಪಕ್ಷದ ಶಾಸಕರಿಗೆ ಕಾಲಹರಣವೇ ಉದ್ದೇಶವಾದಂತಿದ್ದರೆ, ಪ್ರತಿಪಕ್ಷದವರಿಗೆ ಸಮಯ ಕಳೆಯುವುದೇ ಕಷ್ಟವಾದಂತೆ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next