Advertisement

ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸಕಾಲ

07:04 PM May 22, 2021 | Team Udayavani |

ಯಡ್ರಾಮಿ: ಸುಮಾರು 70ರ ದಶಕದಲ್ಲಿ ನಿರ್ಮಾಣವಾದ ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಇದು ಸಕಾಲವಾಗಿದೆ. ತಜ್ಞ ವೈದ್ಯರು, ಆರೋಗ್ಯ ಸಿಬ್ಬಂದಿ ಕೊರತೆ ಈ ಕೇಂದ್ರದಲ್ಲಿದೆ. ಕೊರೊನಾ ಸೋಂಕು ಹರಡುತ್ತಿರುವ ಇಂತಹ ವಿಷಮ ಸ್ಥಿತಿಯಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಕೋವಿಡ್‌ ರೋಗಿಗಳು ತುರ್ತು ಚಿಕಿತ್ಸೆಗೆಂದು ತಾಲೂಕಿನ ಆರೋಗ್ಯ ಕೇಂದ್ರಕ್ಕೆ ಆಗಮಿಸಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

Advertisement

60 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಯಡ್ರಾಮಿ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಬೇಕು ಎನ್ನುವಂತಾಗಿದೆ. ಈ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಪೈಪ್‌ ಲೈನ್‌ ಅಪೂರ್ಣವಾಗಿವೆ. ಮೂವರು ತಜ್ಞ ವೈದ್ಯರ ಅವಶ್ಯಕತೆ (ಮಕ್ಕಳ ತಜ್ಞ, ಹೆರಿಗೆ ತಜ್ಞ, ಅರವಳಿಕೆ ತಜ್ಞ) ಇದೆ. ಎಫ್‌ಡಿಸಿ ಹುದ್ದೆ ಖಾಲಿಯಿದೆ. ಕೇವಲ 15 ಬೆಡ್‌ ಸೌಲಭ್ಯಗಳಿವೆ. ಹೈವೋಲ್ಟ್ ವಿದ್ಯುತ್‌ ಸಂಪರ್ಕದ ಅಗತ್ಯವಿದೆ.

ಶಾಸಕರ ಗಮನಕ್ಕೆ: ಆಸ್ಪತ್ರೆಗೆ ಅಗತ್ಯವಿರುವ ತುರ್ತು ಸೌಲಭ್ಯ ಕುರಿತು ಶಾಸಕರ ಗಮನಕ್ಕೆ ತಂದಿದ್ದೇನೆ. ಆರೋಗ್ಯ ತಜ್ಞರು, ಎಫ್‌ಡಿಸಿ, ವಿಶೇಷವಾಗಿ ಹೈವೋಲ್ಟ್ ವಿದ್ಯುತ್‌ ಸೌಲಭ್ಯ ಸೇರಿದಂತೆ ವಿವಿಧ ಸಿಬ್ಬಂದಿ ಕೊರತೆ ಇದೆ. ಯಾವುದೇ ಸೌಲಭ್ಯಗಳೂ ಇಲ್ಲದಿರುವಾಗ ನಾವು ಕೊರೊನಾ ರೋಗಿಗಳಿಗೆ ಚಿಕಿತ್ಸೆ ಹೇಗೆ ಕೊಡಲು ಸಾಧ್ಯ. ಕೆಲವು ದಿನಗಳಲ್ಲಿ ಇವೆಲ್ಲವುಗಳಿಗೂ ಪರಿಹಾರ ಸಿಗಬಹುದು ಎಂದು ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ| ಉಮೇಶ ಶರ್ಮಾ ತಿಳಿಸಿದ್ದಾರೆ.

ಅಸಹಾಯಕ ಸ್ಥಿತಿ: ಆರೋಗ್ಯ ಕೇಂದ್ರ ಇಷ್ಟೊತ್ತಿಗೆ ತಾಲೂಕು ಆಸ್ಪತ್ರೆ ಆಗಬೇಕಿತ್ತು. ಸದ್ಯ ಕೊರೊನಾ ರೋಗಿಗಳಿಗೆ ಆರೈಕೆ, ಚಿಕಿತ್ಸೆ ನೀಡುವಲ್ಲಿ ಅಸಹಾಯಕ ಸ್ಥಿತಿಯಲ್ಲಿದೆ. ತುರ್ತು ಚಿಕಿತ್ಸೆಗೆಂದು ಜೇವರ್ಗಿಗೆ ಹೋಗುವುದು ಅನಿವಾರ್ಯವಾಗಿದೆ. ಈ ಕುರಿತು ಶಾಸಕ ಡಾ| ಅಜಯಸಿಂಗ್‌ ಗಮನಕ್ಕೂ ತಂದಿದ್ದೇನೆ ಎಂದು ಮುಖಂಡ ಅಬ್ದುಲ್‌ರಜಾಕ್‌ ಮನಿಯಾರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರಚನೆಯಾದ ಹೊಸ ತಾಲೂಕುಗಳ ಯಾವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿಲ್ಲ. ಈ ಕಾರ್ಯಯೋಜನೆ ಸರ್ಕಾರದ ಹಂತದಲ್ಲಿ ನಡೆಯುವಂತದ್ದು. ಈ ಕುರಿತು ನಾನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇನೆ. ಮುಂಬರುವ ದಿನಗಳಲ್ಲಿ ಈ ಕಾರ್ಯ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಡಾ| ಶರಣಬಸಪ್ಪ ಗಣಜಲಖೇಡ,
ಜಿಲ್ಲಾ ಆರೋಗ್ಯಾಧಿಕಾರಿ

Advertisement

*ಸಂತೋಷ ಬಿ. ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next