ಬೆಳ್ತಂಗಡಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ರಾಜ್ಯ ಸರಕಾರವು ಕಳೆದ ಸಾಲಿನಲ್ಲಿ 200 ಕೋ.ರೂ. ಅನುದಾನದಡಿ ರಾಜ್ಯದಲ್ಲಿ 100 ಠಾಣೆಗಳಿಗೆ ನೂತನ ಕಟ್ಟಡದ ಕಾಯಕಲ್ಪ ನೀಡಿತ್ತು. ವರ್ಷಂಪ್ರತಿ ಲಕ್ಷೋಪಲಕ್ಷ ಭಕ್ತರು ಸಂದರ್ಶಿಸುವ ಧರ್ಮಸ್ಥಳ ಸಹಿತ ಉಭಯ ಜಿಲ್ಲೆಯ 7 ಠಾಣೆಗಳ ನೂತನ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ದ.ಕ. ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯ, ಬೆಳ್ಳಾರೆ, ಮಂಗಳೂರು, ಬಜಪೆ, ಗ್ರಾಮಾಂತರ ಠಾಣೆ ವಾಮಂಜೂರು, ಪಣಂಬೂರು ಸಂಚಾರ ಠಾಣೆ ಸೇರಿದಂತೆ ಉಡುಪಿ ಜಿಲ್ಲೆಯ ಹೆಬ್ರಿಗೆ ನೂತನ ಠಾಣೆ ಭಾಗ್ಯ ದೊರೆತಿತ್ತು. ಮಂಗಳೂರು ಗ್ರಾಮಾಂತರ ವಾಮಂಜೂರು ಠಾಣೆಗೆ ಮಾರ್ಚ್ ಒಳಗಾಗಿ ಗುದ್ದಲಿ ಪೂಜೆ ನೆರವೇರುವ ಸಾಧ್ಯತೆಯಿದೆ.
ಧರ್ಮಸ್ಥಳ ಪಿಐ ಠಾಣೆಯಾಗಿಸಲು ಸಕಾಲ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀದಿನ ಕನಿಷ್ಠ 25ರಿಂದ ಗರಿಷ್ಠ 50 ಸಾವಿರ ಮಂದಿ ಯಾತ್ರಾರ್ಥಿಗಳು ಸೇರುತ್ತಾರೆ. ಜಾತ್ರೆ, ಲಕ್ಷದೀಪೋತ್ಸವ ಅವಧಿಯಲ್ಲಿ ಲಕ್ಷೋಪಲಕ್ಷ ಭಕ್ತರು ಸೇರುತ್ತಿದ್ದಾರೆ. ಇತರ ದಿನಗಳಲ್ಲಿ ದೇಶ, ವಿದೇಶದ ಗಣ್ಯರು ರಾಜ್ಯ, ಕೇಂದ್ರ ಮಂತ್ರಿಗಳು, ನಾಡಿನ ಪ್ರಮುಖ ಗಣ್ಯರು ಭೇಟಿ ನೀಡುವ ವೇಳೆ ದೇಗುಲ ಸಹಿತ ಸಾರ್ವಜನಿಕರ ಭದ್ರತೆ ಮಹತ್ತರ ಜವಾಬ್ದಾರಿ ಪೊಲೀಸ್ ಇಲಾಖೆಗಿದೆ. ಭವಿಷ್ಯದಲ್ಲಿ ಧರ್ಮಸ್ಥಳ ಕ್ಷೇತ್ರದ ಭಕ್ತರ ಸಂಖ್ಯೆಗೆ ಅನುಗುಣವಾಗಿ, ಮತ್ತೂಂದೆಡೆ ಅಪರಾಧ ಪ್ರಮಾಣ ನಿಯಂತ್ರಿಸಲು ಪೊಲೀಸ್ ನಿರೀಕ್ಷಕರನ್ನೊಳಗೊಂಡ ಪ್ರತ್ಯೇಕ ಪಿಐ ಠಾಣೆ ತೆರೆಯಲು ಸಕಾಲವಾಗಿದೆ.
ಬೆಳ್ತಂಗಡಿಗೆ ಪ್ರತ್ಯೇಕ ಉಪವಿಭಾಗ
ಜಿಲ್ಲೆಯಲ್ಲೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ವಾಗಿರುವ ಬೆಳ್ತಂಗಡಿ ತಾಲೂಕಿನಲ್ಲಿ 81 ಗ್ರಾಮಗಳಿವೆ. ಸದ್ಯ ಬೆಳ್ತಂಗಡಿ ವೃತ್ತನಿರೀಕ್ಷಕರ ವ್ಯಾಪ್ತಿಗೆ ಒಳಪಟ್ಟಂತೆ ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ, ಬೆಳ್ತಂಗಡಿ, ಸಂಚಾರ ಠಾಣೆ ಸೇರಿ 5 ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.
Related Articles
ಪ್ರತೀ ಠಾಣೆಗೆ ಗ್ರೇಡ್ 1 ಮತ್ತು ಗ್ರೇಡ್ 2ನಂತೆ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆಗೆ ಇಬ್ಬರು ಪೊಲೀಸ್ ಉಪನಿರೀಕ್ಷಕರನ್ನು ನೇಮಿಸಲಾಗಿದೆ. ಬಂಟ್ವಾಳ, ವಿಟ್ಲ ಸೇರಿ 4 ಠಾಣೆ, ಬೆಳ್ತಂಗಡಿ 5 ಠಾಣೆಗಳು ಸದ್ಯ ಬಂಟ್ವಾಳ ಡಿವೈಎಸ್‌ಪಿ (ಪೊಲೀಸ್ ಉಪ ವಿಭಾಗ) ವ್ಯಾಪ್ತಿಗೆ ಒಳಪಟ್ಟಿದೆ. ಇನ್ನು ಮುಂದೆ ಬೆಳ್ತಂಗಡಿ ತಾಲೂಕಿಗೆ ಮಾತ್ರ ಅನ್ವಯಿಸುವಂತೆ ಪ್ರತ್ಯೇಕ ಡಿವೈಎಸ್‌ಪಿ ಠಾಣೆಯನ್ನಾಗಿಸಿ ಸರಕಾರ ಈಗಾಗಲೆ ಆದೇಶಿಸಿದೆ.
ಬೆಳ್ತಂಗಡಿ ಉಪವಿಭಾಗವಾದರೆ ಬೆಳ್ತಂಗಡಿ ಠಾಣೆಗೆ ಪ್ರತ್ಯೇಕ ಪಿಐ ನೇಮಕಗೊಂಡು ಸಂಚಾರ ಠಾಣೆ ಮತ್ತು ಬೆಳ್ತಂಗಡಿ ಠಾಣೆ ಪಿಐ ವ್ಯಾಪ್ತಿಗೆ ಬರಲಿದೆ. ಉಳಿದ ಮೂರು ಠಾಣೆಗೆ ಓರ್ವ ವೃತ್ತನಿರೀಕ್ಷಕರನ್ನು ನಿಯೋಜಿಸಲಾಗುತ್ತದೆ. ಈಗಿನ 81 ಗ್ರಾಮಗಳ ಸ್ಥಿತಿ ಗಮನಿಸಿದಾಗ ಧರ್ಮಸ್ಥಳ ಕ್ಷೇತ್ರವೊಂದಕ್ಕೆ ಪ್ರತ್ಯೇಕ ಪಿಐ ನೇಮಕ ಅನಿವಾರ್ಯವಾಗಿದೆ.
2021ರಲ್ಲಿ ಶಿಲಾನ್ಯಾಸ
ಬಹುವರ್ಷದ ಬೇಡಿಕೆಯ ಫಲವಾಗಿ ಧರ್ಮಸ್ಥಳ ಠಾಣೆಗೆ ಪ್ರತ್ಯೇಕ ಸ್ವಂತ ಕಟ್ಟಡ ರಚನೆಯಾಗಿದೆ. 3.2 ಕೋ.ರೂ. ವೆಚ್ಚದಲ್ಲಿ ಕಳೆದ 2021 ನವೆಂಬರ್‌ನಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಒಟ್ಟು 5,724.32 ಚದರ ಅಡಿಯಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಪಿಐ ಠಾಣೆಗೆ ಬೇಕಾದ ಎಲ್ಲ ವ್ಯವಸ್ಥೆಗಳು ಕಟ್ಟಡದಲ್ಲಿ
ಒದಗಿಸಲಾಗಿದೆ.
ಪಿಐ ನೇಮಕದ ಪ್ರಸ್ತಾವ ಇಲ್ಲ
ಅಪರಾಧ ಪ್ರಕರಣಗಳನ್ನು ಆಧರಿಸಿ ಬೆಳ್ತಂಗಡಿ ವ್ಯಾಪ್ತಿಗೆ ಪ್ರತ್ಯೇಕ ಪೊಲೀಸ್ ಉಪವಿಭಾಗ ತೆರೆಯಲು ಆದೇಶಿಸಲಾಗಿದೆ. ಧರ್ಮಸ್ಥಳಕ್ಕೆ ಪ್ರತ್ಯೇಕ ಪಿಐ ನೇಮಕದ ಪ್ರಸ್ತಾವ ಸದ್ಯಕ್ಕಿಲ್ಲ.
-ಹೃಷಿಕೇಶ್ ಸೋನಾವಣೆ, ಎಸ್.ಪಿ., ದ.ಕ
ಉದ್ಘಾಟನೆಗೆ ಸಿದ್ಧ
ಉಭಯ ಜಿಲ್ಲೆಯ ನೂತನ 7 ಠಾಣೆಗಳ ಪೈಕಿ ಸುಬ್ರಹ್ಮಣ್ಯ ಠಾಣೆಗೆ ಶಿಲಾನ್ಯಾಸವಾಗಿದೆ. ಉಳಿದಂತೆ ವಾಮಂಜೂರು ಹೊರತುಪಡಿಸಿ ಬಹುತೇಕ ಉದ್ಘಾಟನೆಗೆ ಸಿದ್ಧಗೊಂಡಿದೆ.
-ಸನ್ಮೇ ಗೌಡ, ಕಾರ್ಯಪಾಲಕ ಎಂಜಿನಿಯರ್, ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
*ಚೈತ್ರೇಶ್ ಇಳಂತಿಲ