ನಾನೆಂದೂ ನಿನ್ನನ್ನು ದೂರುವುದಿಲ್ಲ ನಿನ್ನೊಂದಿಗಿನ ನೆನಪುಗಳನ್ನು ಬದುಕಿನ ದಾರಿಯುದ್ದಕ್ಕೂ ಜೋಪಾನವಾಗಿರಿಸಿಕೊಂಡು ಕಷ್ಟವಾದರೂ ಮುಗುಳುನಗೆಯನ್ನು ತುಟಿಗೆಳೆದುಕೊಂಡು ಸಾಗುತ್ತೇನೆ.
ಕನಸು ಕಾಣುವ ಕಣ್ಣಿಗೇನು ಗೊತ್ತು, ನಿನ್ನ ತೊರೆದ ನೋವಿನ ಸಂಕಟ. ಕಾಣುವಷ್ಟು ದೂರ ಹುಡುಕಿ ಸುಸ್ತಾಗಿ ಬಡಿದುಕೊಳ್ಳುವುದೇ ರೆಪ್ಪೆಯ ಕೆಲಸ. ಬದುಕಿನ ಅಂಗಳದಲ್ಲಿ ಸುಂದರ ಕನಸುಗಳ ರಾಶಿ ಹಾಕಿದ್ದ ಕಣ್ಣುಗಳು ಇಂದು ನೀರವತೆಯ ಮೌನಕ್ಕೆ ಶರಣಾಗಿವೆ. ಒಂಟಿತನದ ಯಾನಕ್ಕೆ ಒಗ್ಗಿಕೊಂಡಿದೆ. ನೀನೇ ನನ್ನ ಬದುಕೆಂಬ ಮಾತಿಗೆ ಕಟ್ಟುಬಿದ್ದಿದ್ದ ಮನಸ್ಸು ಇಂದು ಒಂಟಿತನದ ಸಲುಗೆಯನ್ನು ರೂಢಿಸಿಕೊಂಡಿದೆ.
ನಿಜ. ಎಷ್ಟೊಂದು ದಿನ ನಿನ್ನ ಬರುವಿಕೆಗೆ ಮನ ಹಾತೊರೆಯುತ್ತಿತ್ತು. ಅದು ಹುಸಿ ನಂಬಿಕೆ ಎಂದು ಅರ್ಥ ಮಾಡಿಕೊಳ್ಳದೆ ತುಂಬಾದಿನ ನನ್ನನ್ನು ಸತಾಯಿಸಿತ್ತು. ಆದರೆ, ಇಂದು ವಾಸ್ತವತೆಗೆ ಹೊಂದಿಕೊಂಡಿದೆ. ನೆನಪಿರಲಿ , ನೀ ದೂರವಾದೆ ಎಂದು ನನ್ನ ಬದುಕೇನೂ ನಿಲ್ಲದು. ಬದಲಾಗಿ ಯಾರ ಗೋಜಿಲ್ಲದೆ ನನ್ನಿಷ್ಟದಂತೆ ಬದುಕನ್ನು ಸಾಗಿಸಬಲ್ಲೆನು. ಕಾರಣವಿಷ್ಟೇ, ನಿನ್ನ ಮನದರಸಿಯಾಗಿ ನನಗೊಂದು ಪುಟ್ಟ ಜಾಗವಿಲ್ಲದ ಮೇಲೆ ನಾನು ನಿನ್ನೊಂದಿಗಿದ್ದೂ ಪ್ರಯೋಜನವಿಲ್ಲ. ಈ ವರೆಗೆ ನಾವಿಬ್ಬರೂ ಕಟ್ಟಿದ್ದ ಕನಸಿನ ಗೂಡಿಗೆ ತಿಲಾಂಜಲಿ ನೀಡಿ ನನ್ನ ಕನಸಿನ ದಾರಿಯರಸಿ ಹೊರಡುವ ಸಮಯ ಈಗ ಸನ್ನಿಹಿತವಾಗಿದೆ.
ನಿನ್ನಷ್ಟು ಕಟ್ಟುನಿಟ್ಟಿನ ಬದುಕು ನನ್ನದಲ್ಲ. ಪ್ರೀತಿ, ನಂಬಿಕೆ, ವಿಶ್ವಾಸಗಳಿಗೆ ಬೆಲೆ ಕೊಡುವವಳು ನಾನು. ಅದೆಷ್ಟು ಬಾರಿ ನನ್ನ ಸಹನೆಯನ್ನು ಪರೀಕ್ಷಿಸಿದ್ದೀಯಾ ನೆನಪಿಸಿಕೊ. ನಿನ್ನಿಂದ ಕಲಿತ ಪಾಠಕ್ಕೆ ನಾನೆಂದೂ ಚಿರಋಣಿ. ಇಂದು ನಿನಗೆ ನಿನ್ನದೇ ಹೊಸ ಪ್ರಪಂಚ ಕಟ್ಟಿಕೊಳ್ಳಬೇಕೆನಿಸಿದೆ ನನ್ನದೇನೂ ಅಡ್ಡಿಯಿಲ್ಲ. ನೀನು ನನ್ನ ತೊರೆದ ಮಾತ್ರಕ್ಕೆ ಸೂರ್ಯ, ಚಂದ್ರರೇನೂ ಹುಟ್ಟುವುದನ್ನು ನಿಲ್ಲಿಸುವುದಿಲ್ಲ. ಆದರೆ, ಒಂದು ಮಾತು. ಪ್ರತಿದಿನ ಹಗಲಿರಲಿ, ಇರುಳಿರಲಿ ಸದಾ ನಿನ್ನ ನೆನಪಿನಲ್ಲಿ ಅರಳುತ್ತಿದ್ದ ನನ್ನ ಮನಸ್ಸು ಮಾತ್ರ ಮತ್ತೆಂದು ಮರಳಿ ಹುಟ್ಟುವುದಿಲ್ಲ. ಅದೇನೆ ಇರಲಿ, ನನ್ನಿಂದ ದೂರ ಹೊರಟ ನಿನಗೆ ನನ್ನದೊಂದು ಕೋರಿಕೆ. ನನ್ನ ತಾಳ್ಮೆ ಪರೀಕ್ಷಿಸಿದಂತೆ ಬೇರೆಯವರಿಗೂ ಮಾಡಬೇಡ.
ನಿನ್ನ ಹಂಗಿಲ್ಲದೆ ಬದುಕುವೆನೆಂಬ ಆತ್ಮವಿಶ್ವಾಸವಿದೆ. ನೀನು ಯೋಚಿಸಬಹುದು. ಇವಳೇನು, ಇಷ್ಟೊಂದು ಕಠೊರವಾಗಿ ಮಾತನಾಡುತ್ತಾಳೆ ಅಂತ. ಅದಕ್ಕೆ ಉತ್ತರ ನಿನ್ನಲ್ಲಿಯೇ ಇದೆ.
ಒಂದು ಬಾರಿ ನಿನ್ನನ್ನು ಪ್ರಶ್ನಿಸಿಕೊ. ಆಳೆತ್ತರದಿಂದ ಬಿದ್ದು ಚೂರಾದ ಕನ್ನಡಿಯಂತಾಗಿದೆ ಮನ. ಅದರ ಸದ್ದು ಮಾತ್ರ ಯಾರಿಗೂ ಕೇಳದೆ, ನನ್ನ ಮನದಂಗಳದಲ್ಲಿ ಹುದುಗಿ ಮರೆಯಾಗಿದೆ. ಹೃದಯಾಂತರಾಳದಲ್ಲೊಂದು ನೆನಪಿನ ಬುತ್ತಿ ಕೇಕೆ ಹಾಕಿ ನಗುತ್ತಿದೆ. ಹಾಗೆಂದ ಮಾತ್ರಕ್ಕೆ ನೀನೇನೂ ಚಿಂತಿಸಬೇಕೆಂದಲ್ಲ. ಎಷ್ಟೆಂದರೂ ನಾನೀಗ ನಿನಗೆ ಬೇಡವಾದ ಜೀವ. ತಣ್ಣಗಿದ್ದ ಜೀವನದಲ್ಲಿ ಸುನಾಮಿಯಂಥ ಅಲೆ ಎಬ್ಬಿಸಿದೆ. ಅದನ್ನು ಶಾಂತಗೊಳಿಸಲು ಪಟ್ಟ ಪಾಡು ನನಗಷ್ಟೇ ಗೊತ್ತು.
ನೆನಪಿಡು. ನಾನೆಂದೂ ನಿನ್ನನ್ನು ದೂರುವುದಿಲ್ಲ ನಿನ್ನೊಂದಿಗಿನ ನೆನಪುಗಳನ್ನು ಬದುಕಿನ ದಾರಿಯುದ್ದಕ್ಕೂ ಜೋಪಾನವಾಗಿರಿಸಿಕೊಂಡು ಕಷ್ಟವಾದರೂ ಮುಗುಳುನಗೆಯನ್ನು ತುಟಿಗೆಳೆದುಕೊಂಡು ಸಾಗುತ್ತೇನೆ. ಕೊನೆಯದಾಗಿ, ನಿನ್ನೊಂದಿಗಿರುವಷ್ಟು ದಿನ ಬದುಕು ಆಗಸದಲ್ಲಿ ಸ್ವತ್ಛಂದವಾಗಿ ಹಾರಾಡುವ ಪಕ್ಷಿಯನ್ನು ಅಣಕಿಸುವಷ್ಟು ಪ್ರಫುಲ್ಲವಾಗಿತ್ತು. ಯಾವಾಗಲೂ ಹಾಗೆಯೇ ಇರಬೇಕೆಂದಿಲ್ಲ ಅಲ್ವಾ?
ವಿಶ್ವಾಸಗಳೊಂದಿಗೆ,
ಪವಿತ್ರಾ ಭಟ್