“ಚೂರಿಕಟ್ಟೆ’ -ಇತ್ತೀಚೆಗೆ ನೀವು ಈ ಹೆಸರನ್ನು ಕೇಳಿರುತ್ತೀರಿ. ಚೂರಿಕಟ್ಟೆ ಎಂಬ ಊರಿನ ಹೆಸರನ್ನಿಟ್ಟುಕೊಂಡು ತಯಾರಾದ ಸಿನಿಮಾವೇ “ಚೂರಿಕಟ್ಟೆ. ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಜನವರಿ 26 ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಈ ಚಿತ್ರವನ್ನು ರಾಘು ಶಿವಮೊಗ್ಗ ನಿರ್ದೇಶಿಸಿದ್ದಾರೆ. ಈ ಹಿಂದೆ “ಚೌಕಬಾರ’ ಎಂಬ ಕಿರು ಚಿತ್ರ ನಿರ್ದೇಶಿಸಿದ್ದ ರಾಘು ಅವರಿಗೆ ಇದು ಚೊಚ್ಚಲ ಚಿತ್ರ. ತಮ್ಮ ಮೊದಲ ಪ್ರಯತ್ನದಲ್ಲಿ ಗಂಭೀರ ವಿಷಯವೊಂದು ಬೇಕೆಂಬ ಕಾರಣಕ್ಕೆ “ಚೂರಿಕಟ್ಟೆ’ಯಲ್ಲಿ ಟಿಂಬರ್ ಮಾಫಿಯಾದ ಬಗ್ಗೆ ಹೇಳಿದ್ದಾರೆ.
ಹೌದು, ಮಲೆನಾಡಿನಲ್ಲಿ ನಡೆಯುವ ಟಿಂಬರ್ ಮಾಫಿಯಾದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆಯಂತೆ. “ಚೂರಿಕಟ್ಟೆ’ ಎಂಬ ಊರು ಹೇಗೆ ಟಿಂಬರ್ ಮಾಫಿಯಾಗೆ ಸಾಕ್ಷಿಯಾಗುತ್ತದೆ ಎಂಬ ಅಂಶ ಸಿನಿಮಾದಲ್ಲಿ ಪ್ರಮುಖವಾಗಿರುತ್ತದೆಯಂತೆ. “ಚಿತ್ರದ ವಿಷಯ ತುಂಬಾ ಗಂಭೀರವಾದುದು.
ಸ್ಥಳೀಯರ ಪ್ರಭಾವದ ಮಧ್ಯೆ ಅಧಿಕಾರಿಗಳು ಹೇಗೆ ಮಂಕಾಗುತ್ತಾರೆ. ಯಾವುದೇ ಕಾನೂನಿಗೆ ಬೆಲೆ ಕೊಡದೇ ಸ್ಥಳೀಯರು ಹೇಗೆ ಮಾಫಿಯಾದಲ್ಲಿ ತೊಡಗಿರುತ್ತಾರೆ ಎಂಬ ಅಂಶ ಚಿತ್ರದಲ್ಲಿದೆ. ಜೊತೆಗೆ ಇಲ್ಲೊಂದು ಲವ್‌ಸ್ಟೋರಿಯೂ ಇದೆ.
ಪೊಲೀಸ್ ಆಗಬೇಕೆಂದು ಕನಸು ಕಂಡು, ಪೊಲೀಸ್ ಆಗುವ ಮುನ್ನವೇ ಪೊಲೀಸರಂತೆ ವರ್ತಿಸುವ ಯುವಕನೊಬ್ಬನ ಲವ್‌ಸ್ಟೋರಿ ಮುಂದೆ ಹೇಗೆ ಈ ವ್ಯವಸ್ಥೆಯಲ್ಲಿ ಸಿಲುಕುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ರಾಘು ಶಿವಮೊಗ್ಗ.
ಚಿತ್ರದಲ್ಲಿ ನಾಯಕರಾಗಿ ಪ್ರವೀಣ್ ಹಾಗೂ ನಾಯಕಿಯಾಗಿ ಪ್ರೇರಣಾ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಮಂಜುನಾಥ್ ಹೆಗಡೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ನಯಾಜುದ್ಧೀನ್ ಹಾಗೂ ತುಳಸಿರಾಮುಡು ನಿರ್ಮಿಸಿದ್ದಾರೆ. ಚಿತ್ರ ಜ. 26 ರಿಂದ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.