Advertisement
ಪ್ರಾಥಮಿಕ ತನಿಖೆ ಪ್ರಕಾರ ತಿಹಾರ್ ಜೈಲ್ ನಂಬರ್ 8ರಲ್ಲಿದ್ದ ಕೈದಿ ಝಾಕೀರ್ ಮತ್ತೊಬ್ಬ ಕೈದಿಯಾದ ಮೆಹ್ತಾಬ್ ಗೆ ಸ್ವಯಂ ನಿರ್ಮಿತ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ.
2014ರಲ್ಲಿ ದೆಹಲಿಯ ಅಂಬೇಡ್ಕರ್ ನಗರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಝಾಕೀರನ ಕಿರಿಯ ಸಹೋದರಿ ಮೇಲೆ ಮೆಹ್ತಾಬ್ ಅತ್ಯಾಚಾರ ಎಸಗಿದ್ದ. ಈ ಘಟನೆ ನಂತರ ಮೆಹ್ತಾಬ್ ನನ್ನು ಪೋಕ್ಸೊ ಕಾಯ್ದೆಯಡಿ ಅಂಬೇಡ್ಕರ್ ನಗರ ಪೊಲೀಸರು ಬಂಧಿಸಿದ್ದರು. ಆ ಬಳಿಕ ಮೆಹ್ತಾಬ್ ನನ್ನು ತಿಹಾರ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು. ಅತ್ಯಾಚಾರ ಘಟನೆಯಿಂದ ಆಘಾತಕ್ಕೊಳಗಾದ ಝಾಕೀರ್ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದರಿಂದ ಝಾಕೀರ್ ಕೂಡಾ ತೀವ್ರವಾಗಿ ಕುಗ್ಗಿ ಹೋಗಿದ್ದ. ತನ್ನ ತಂಗಿ ಮೇಲೆ ಅತ್ಯಾಚಾರ ಎಸಗಿದವನ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ. ಆದರೆ ಆರೋಪಿ ತಿಹಾರ್ ಜೈಲಿನಲ್ಲಿದ್ದರಿಂದ, ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಝಾಕೀರ್ ತಂತ್ರವೊಂದನ್ನು ಹೆಣೆದಿದ್ದ.
Related Articles
Advertisement
ಮೃತ ಕೈದಿ ಮೆಹ್ತಾಬ್ ನನ್ನು ಮೊದಲ ಮಹಡಿಯ 4ನೇ ವಾರ್ಡ ಗೆ ಸ್ಥಳಾಂತರಿಸಿದ್ದರು. ಜೂನ್ 29ರಂದು ಬೆಳಗ್ಗೆ ಪ್ರಾರ್ಥನೆಗಾಗಿ ಇತರ ಕೈದಿಗಳು ಹೊರಬಂದಿದ್ದರು. ಈ ವೇಳೆ ಆರೋಪಿ ಝಾಕೀರ್ ಮೊದಲ ಮಹಡಿಗೆ ಹೋಗಿ ಮೆಹ್ತಾಬ್ ಗೆ ಚೂರಿಯಿಂದ ಇರಿದುಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಮೆಹ್ತಾಬ್ ನನ್ನು ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮೆಹ್ತಾಬ್ ಸಾವನ್ನಪ್ಪಿದ್ದ. ಝಾಕೀರ್ ಮೆಹ್ತಾಬ್ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶಕ್ಕಾಗಿಯೇ ಕಾಯುತ್ತಿದ್ದ. ಇದೀಗ ಝಾಕೀರ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.