ಲಕ್ನೋ:ನರಭಕ್ಷಕ “ಅವನಿ” ಹೆಣ್ಣು ಹುಲಿಯನ್ನು ಮಹಾರಾಷ್ಟ್ರ ಅರಣ್ಯದಲ್ಲಿ ಹತ್ಯೆಗೈದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹುಲಿಯೊಂದು ದಾಳಿ ಮಾಡಿದ್ದು ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆಕ್ರೋಶಿತ ಗ್ರಾಮಸ್ಥರು ಹುಲಿಯನ್ನು ಕೊಂದ ಘಟನೆ ಭಾನುವಾರ ಉತ್ತರಪ್ರದೇಶದಲ್ಲಿ ನಡೆದಿದೆ.
ಲಕ್ನೋದಿಂದ 210 ಕಿಲೋ ಮೀಟರ್ ದೂರದ ದುದ್ವಾ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿತ್ತು. ಆಕ್ರೋಶಗೊಂಡ ಗ್ರಾಮಸ್ಥರು ಪಾರ್ಕ್ ನೊಳಗೆ ನುಗ್ಗಿ ಅರಣ್ಯ ಪಾಲಕನ ಮೇಲೆ ದಾಳಿ ನಡೆಸಿ, ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ಕಸಿದುಕೊಂಡು ಬಲವಂತವಾಗಿ ಹುಲಿ ಮೇಲೆ ಹತ್ತಿಸಿ ಕೊಂದ ಘಟನೆ ನಡೆದಿದೆ ಎಂದು ವರದಿ ವಿವರಿಸಿದೆ.
ಅರಣ್ಯ ಪ್ರದೇಶದ ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿ ಮೇಲೆ ಈ ಹುಲಿ ದಾಳಿ ನಡೆಸಿತ್ತು. ಬಳಿಕ ಸಮಾಜಘಾತುಕ ವ್ಯಕ್ತಿಗಳು ಸೇರಿಕೊಂಡು ಹುಲಿಯನ್ನು ಹೊಡೆದು, ಅದರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದಿರುವುದಾಗಿ ವರದಿ ವಿವರಿಸಿದೆ. ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ನಾವು ಗುರುತಿಸಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಿಸುವುದಾಗಿ ದುದ್ವಾ ನ್ಯಾಶನಲ್ ಪಾರ್ಕ್ ನ ನಿರ್ದೇಶಕ ಮಾಹಾವಿರ್ ಕೋಜಿಲಾಂಗಿ ತಿಳಿಸಿದ್ದಾರೆ.
ಈ ಹುಲಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿದೆ ಎಂಬುದಾಗಿ ಹಲವಾರು ಬಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದರೆ ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.