ಉಡುಪಿ: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹಲವು ಕಾಲೇಜು ಗಳಿಗೆ ಬಿಗು ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ವಿವಾದದ ಕೇಂದ್ರ ಬಿಂದುವಾಗಿದ್ದ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಉಡುಪಿ ಅಜ್ಜರಕಾಡು ಮಹಿಳಾ ಪದವಿ ಕಾಲೇಜು, ಉಡುಪಿ ಎಂಜಿಎಂ ಕಾಲೇಜು ಹಾಗೂ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಹಾಕೆ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಂದು ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ :
ಈ ತೀರ್ಪಿನಲ್ಲಿ ನ್ಯಾ| ಸುಧಾಂಶುವ ಧುಲಿಯಾ ಅವರ ಮಾತುಗಳು ಆಶಾದಾಯಕವಾಗಿದ್ದು, ಸಂವಿಧಾನ ಅನುವು ಮಾಡಿಕೊಟ್ಟ ಮೂಲಭೂತ ಹಕ್ಕಿನ ವಿಚಾರವಾಗಿದೆಯೇ ಹೊರತು ಬಟ್ಟೆಯ ವಿಚಾರ ಅಲ್ಲ ಎಂದು ಉಲ್ಲೇಖೀಸಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ್ದಾರೆ. ಮುಂದಿನ ತೀರ್ಪು ಸಂವಿಧಾನದ ಆಶಯದಂತೆ ಬರಲಿದ್ದು, ಈಗಾಗಲೇ ಒಂದು ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಅರ್ಜಿದಾರ ಪರ ಹೋರಾಟಗಾರ ಹುಸೇನ್ ಕೋಡಿಬೆಂಗ್ರೆ ಹೇಳಿದ್ದಾರೆ.
ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಒಮ್ಮತದ ತೀರ್ಪು ನೀಡದೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ಮುಂಬರುವ ತೀರ್ಪು ಸಕಾರಾತ್ಮಕವಾಗಿ ಬರಬಹುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಸಿದ್ದಾರೆ.
ಸುಪ್ರೀಂ ಕೋರ್ಟ್‌ನಿಂದ ಆರಂಭಿಕ ಜಯ ಸಿಕ್ಕಿದ್ದು, ಮುಂದೆಯೂ ಉತ್ತಮ ತೀರ್ಪು ಬರುವ ನಿರೀಕ್ಷೆ ಇದೆ. ಹಿಜಾಬ್ ವಿವಾದ ಆರಂಭವಾಗಿದ್ದು ಉಡುಪಿಯಲ್ಲಿ ಆದರೆ ಇದು ಅನಂತರ ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಿತು. ಹಿಜಾಬ್ ವಿದ್ಯಾರ್ಥಿನಿಯರು ಬಡ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವುದರ ಮೂಲಕ ಶಿಕ್ಷಣದ ವ್ಯವಸ್ಥೆ ಹಾಳು ಮಾಡಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಹೇಳಿದ್ದಾರೆ.