Advertisement

ಹುಲಿ, ಚಿರತೆ ಉಗುರುಗಳ ಮಾರಾಟ: ಮೂವರ ಬಂಧನ

06:16 AM Feb 11, 2019 | |

ಬೆಂಗಳೂರು: ಕಾಳ ಸಂತೆಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಹುಲಿ ಮತ್ತು ಚಿರತೆಯ ಉಗುರುಗಳನ್ನು ಮಾರಾಟ ಮಾಡಲು ಬಂದಿದ್ದ ಮಂಡ್ಯ ಮೂಲದ ಮೂವರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತುಪ್ಪದಮೂಡು ನಿವಾಸಿ ಕವಿತ್‌ಕುಮಾರ್‌(23), ಗೋಪಿರಾಜ್‌ ಅಲಿಯಾಸ್‌ ಗೋಪಿ (25) ಮತ್ತು ಸಂಜಯ್‌ (21) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ 142 ಹುಲಿ ಮತ್ತು ಚಿರತೆ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಬಂಧಿತರೆಲ್ಲರೂ ಕೃಷಿಕರಾಗಿದ್ದು, ಹೆಚ್ಚಿನ ಹಣ ಗಳಿಸುವ ಸಲುವಾಗಿ ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮದ ವ್ಯಕ್ತಿಯೊಬ್ಬನಿಂದ ಖರೀದಿಸಿರುವಾಗಿ ಹೇಳಿಕೆ ನೀಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಲ್ಲದೆ, ಆ ಗ್ರಾಮದ ಕೆಲ ವ್ಯಕ್ತಿಗಳು ಹುಲಿ, ಚಿರತೆಗಳನ್ನು ಕೊಂದು ಅವುಗಳ ಚರ್ಮ ಹಾಗೂ ಉಗುರುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದು, ಆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕೆಲ ದಿನಗಳ ಹಿಂದೆ ಆರೋಪಿಗಳ ಪೈಕಿ ಸಂಜಯ್‌ ಹುಲಿಯ ಉಗುರುಗಳನ್ನು ಮಾರಾಟ ಮಾಡಲು ನಗರಕ್ಕೆ ಬಂದಿದ್ದ. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ, 78 ಉಗುರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Advertisement

ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇತರೆ ಇಬ್ಬರು ಆರೋಪಿಗಳಾದ ಕವಿತ್‌ಕುಮಾರ್‌ ಮತ್ತು ಗೋಪಿರಾಜ್‌ ಫೆ.7ರಂದು ಸಂಜೆ 7.30ರ ಸುಮಾರಿಗೆ ಯಶವಂತಪುರ ಹೂವಿನ ಮಾರುಕಟ್ಟೆಗೆ ನೂರಾರು ಉಗುರುಗಳ ಜತೆ ಬರುತ್ತಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿಯೇ ಖರೀದಿದಾರರ ಸೋಗಿನಲ್ಲಿ ಹೋಗಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿ ಉಗುರಿಗೆ 2ರಿಂದ 3 ಲಕ್ಷ ರೂ.: ಹುಲಿ ಹಾಗೂ ಚಿರತೆ ಉಗುರುಗಳಿಗೆ ಕಾಳಸಂತೆಯಲ್ಲಿ ಭಾರೀ ಬೇಡಿಕೆ ಇದೆ. ಪ್ರತಿ ಉಗುರಿಗೆ ಎರಡು ಲಕ್ಷದಿಂದ ಮೂರು ಲಕ್ಷ ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಅಲ್ಲದೆ, ಈ ಉಗುರುಗಳನ್ನು ಧರಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ, ವಾಮಾಚಾರಗಳು ಪರಿಣಾಮ ಬೀರುವುದಿಲ್ಲ, ಧೈರ್ಯ ಹೆಚ್ಚಾಗುತ್ತದೆ.

ಜತೆಗೆ ಉಗುರುಗಳನ್ನು ಚಿನ್ನದ ಸರದ ಜತೆ ಧರಿಸಿದರೆ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next